Kabini Dam: ಕಾವೇರಿ ನೀರು ಬಿಟ್ಟರೂ ಸಮಾಧಾನವಾಗದ ತಮಿಳುನಾಡು; 7,000 ಕ್ಯುಸೆಕ್ಸ್ ನೀರು ಬೇಕಂತೆ!
Kabini Dam: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದ್ದರೂ, ತಮಿಳುನಾಡು ಸಮಾಧಾನಗೊಂಡಿಲ್ಲ. ಕರ್ನಾಟಕದಲ್ಲಿ ಈ ಬಾರಿ ಮಳೆ ಕೊರತೆಯಿಂದ ಈ ಬಾರಿ ಸಂಕಷ್ಟ ಎದುರಾಗಿದೆ. ಇದರ ಹೊರತಾಗಿಯೂ ಕಳೆದ ಒಂದುವಾರದಿಂದ ಮಳೆ ಆಗುತ್ತಿರುವುದರಿಂದ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿದೆ. ಇಷ್ಟಾದರೂ ಸಹ ತಮಿಳುನಾಡು ತೃಪ್ತವಾಗುತ್ತಿಲ್ಲ, ಪರಿಸ್ಥಿತಿಯನ್ನು ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ. ಇದೀಗ ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ಕಾವೇರಿ ನೀರನ್ನು ಸಕಾಲದಲ್ಲಿ ಹರಿಸುವುದಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕರ್ನಾಟಕದ ಕಬಿನಿ ಜಲಾಶಯದಿಂದ ಬಿಡುಗಡೆ ಮಾಡಿರುವ ಕಾವೇರಿ ನೀರು ತಮಿಳುನಾಡಿನ ಬಿಳಿಗುಂಡಲು ಪ್ರದೇಶವನ್ನು ಇಂದು ತಲುಪುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಶುರುವಾಗಿದೆ. ಇದೀಗ ಕಬಿನಿಯಿಂದ ನೀರು ಬಿಟ್ಟಿದ್ದರೂ, ಇದರಿಂದ ತಮಿಳುನಾಡಿನ ಕಾವೇರಿ ತಗ್ಗು ಪ್ರದೇಶದ ರೈತರಿಗೆ ತಕ್ಷಣ ಪ್ರಯೋಜನವಾಗುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಮೆಟ್ಟೂರು ಸ್ಟಾನ್ಲಿ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಲು ಇನ್ನೂ 7ರಿಂದ 8 ದಿನಗಳು ಬೇಕಾಗಲಿದೆ. ಆದರೆ ಇದಕ್ಕೂ ಸಹ ದಿನಕ್ಕೆ 25,000 ಕ್ಯೂಸೆಕ್‌ಗಿಂತ ಹೆಚ್ಚು ನೀರು ನಿರಂತರವಾಗಿ ಹರಿಸಬೇಕು ಎನ್ನುವ ವಾದ ಶುರುವಾಗಿದೆ.

ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 90 ಅಡಿ ದಾಟಿ 100 ಅಡಿ ತಲುಪಿದ ಬಳಿಕವೇ ಈ ಭಾಗದ ಕೃಷಿಗೆ ನೀರು ಬಿಡಲಾಗುತ್ತದೆ. ಸೋಮವಾರ ಸಂಜೆ ವೇಳೆಗೆ ಅಣೆಕಟ್ಟಿನ ನೀರಿನ ಮಟ್ಟ 73.18 ಅಡಿ ಇದ್ದು, 35.49 ಟಿಎಂಸಿ ನೀರು ಸಂಗ್ರಹವಾಗಿತ್ತು. ಸೋಮವಾರ ಸಂಜೆ ವೇಳೆಗೆ ಕಬಿನಿ ಜಲಾಶಯದಿಂದ ಸುಮಾರು 25,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಕೆಆರ್‌ಎಸ್ ಜಲಾಶಯದಿಂದಲೂ ನೀರು ಬಂದ ನಂತರವೇ ಇಲ್ಲಿನ ಬಿಳಿಗುಂಡಲು ಭಾಗದಲ್ಲಿ ಇನ್ನಷ್ಟು ನೀರು ಹರಿಯಲಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಇಲಾಖೆಯು ಮಾಹಿತಿ ನೀಡಿದೆ.
ಕರ್ನಾಟಕದಿಂದ ನಿರಂತರ ನೀರು ಬೇಕು!
ಕರ್ನಾಟಕದಿಂದ 24 ಗಂಟೆಗಳ ಕಾಲ 25,000 ಕ್ಯೂಸೆಕ್ ನೀರು ಬಂದರೆ ಮಾತ್ರ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಅಡಿ ಏರಿಕೆ ಆಗಲಿದೆ. ಇದೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚು ನೀರು ಕರ್ನಾಟಕದಿಂದ ಬಿಡುಗಡೆಯಾದರೆ 100 ಅಡಿ ತಲುಪಲು 7-8 ದಿನಗಳು ಬೇಕಾಗುತ್ತದೆ. ನಾಗಪಟ್ಟಣಂ ಜಿಲ್ಲೆಯ ಕೊನೆಯ ಭಾಗಗಳವರೆಗೂ ಕಾವೇರಿ ನೀರು ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡಿನ ರೈತ ಸಂಘಗಳು ಒತ್ತಾಯಿಸಿವೆ.
ಅಲ್ಲಿ ರೈತರು ಈಗಾಗಲೇ ಹೊಲಗಳನ್ನು ಉಳುಮೆ ಮಾಡಿ ನೀರಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಈ ವರ್ಷ ಕುರುವೈ ಬೆಳೆ ಕೇವಲ 2 ಲಕ್ಷ ಎಕರೆಯಲ್ಲಿ ಮಾತ್ರ ಬೆಳೆದಿದ್ದು, ಕಳೆದ ವರ್ಷ ಅದು 6.33 ಲಕ್ಷ ಎಕರೆಯಷ್ಟಿತ್ತು ಎಂದು ತಮಿಳುನಾಡಿನ ರೈತರು ಹೇಳಿದ್ದಾರೆ.
ಕಾವೇರಿ ಜಲಾಯನದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕದಿಂದ ಕಾವೇರಿ ನೀರು ಬಿಡುತ್ತಿಲ್ಲ ಎಂದು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆದಿದೆ. ಈ ನಡುವೆ ತಮಿಳೂನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕರ್ನಾಟಕವು ದಿನಕ್ಕೆ ಸರಿ ಸುಮಾರು 7,000 ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಬೇಕು, ಇದಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಮನವಿ ಮಾಡಿದೆ.


Click it and Unblock the Notifications
