ಜಾರ್ಖಂಡ್ ಚುನಾವಣೆ 2024: ಮೊದಲ ಹಂತದಲ್ಲಿ ಎಷ್ಟು ಕ್ಷೇತ್ರಗಳಿಗೆ ಮತದಾನ? ಸಿದ್ದತೆ ಹೇಗಿದೆ?
Jharkhand Assembly Elections 2024: ಜಾರ್ಖಂಡ್ ವಿಧಾನಸಭೆಯ ಚುನಾವಣೆಗೆ ಇನ್ನೂ ಎರಡು ದಿನ ಅಷ್ಟೇ ಬಾಕಿಯಿದೆ. ನವೆಂಬರ್ 13ರಂದು ಅಂದರೆ ನಾಡಿದ್ದು ಮೊದಲ ಹಂತದ ಮತದಾನ ನಡೆಯಲಿದೆ. ಹಾಗಾದರೆ ಎಷ್ಟು ಸ್ಥಾನಗಳುಗೆ ಮತದಾನ ನಡೆಯಲಿದೆ ಹಾಗೂ ಸಿದ್ಧತೆ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಾರ್ಖಂಡ್‌ನಲ್ಲಿ ನಕ್ಸಲಿಸ್ಟ್‌ಗಳ ಕಾಟದಿಂದ ಮತದಾನವನ್ನು ಬೇಗ ಆರಂಭ ಮಾಡಿ, ಸಂಜೆ ಬೇಗ ಮುಗಿಸುವಂತೆ ಈಗಾಗಲೇ ಆಯೋಗದಿಂದ ಸೂಚನೆ ನೀಡಲಾಗಿದೆ. ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು 43 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಚುನಾವಣಾಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮತದಾನದ ದಿನದಂದು ಇಲ್ಲಿನ ಸಂಪರ್ಕ ಸಾಧಿಸಲಾಗದ ಪ್ರದೇಶಗಳಿಗೆ ಅಧಿಕಾರಿಗಳು ಕರ್ತವ್ಯಕ್ಕೆ ಎರಡು ದಿನ ಮುಂಚಿತವಾಗಿ ತೆರಳುತ್ತಿದ್ದಾರೆ. ಯಾವುದೇ ತೊಂದರೆಗಳು ಆಗದಂಯೆ ಮತದಾನ ನಡೆಯುವಂತೆ ಸೂಕ್ತ ಕ್ರಮಗಳನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಕೊಂಡಿದೆ. ರಾಜ್ಯದ 5 ಜಿಲ್ಲೆಗಳಾದ ಪಶ್ಚಿಮ ಸಿಂಗಭೂಮ್, ಲೇತ್ಹರ್, ಲೊಹರ್ದಗ್, ಗುಮ್ಲಾ ಮತ್ತು ಗರ್ವ್ಹದ ಒಟ್ಟು 225 ಮತ ಕೇಂದ್ರಗಳಲ್ಲಿ ಚುನಾವಣಾಧಿಕಾರಿಗಳು ಕರ್ತವ್ಯಕ್ಕೆ ತೆರಳಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದೆ.
ಇದೀಗ ಮೊದಲ ಹಂತದ ಮತದಾನಕ್ಕೆ ಎರಡು ದಿನ ಬಾಕಿಯಿರುವಾಗಲೇ ಇಂದು (ನವೆಂಬರ್ 11) ಸಂಜೆಗೆ ಚುನಾವಣಾ ಪ್ರಚಾರ ಅಂತ್ಯವಾಗಿದೆ. ಸಂಚಾರ ಮಾರ್ಗ ಹದಗೆಟ್ಟಿರುವ ಹಿನ್ನೆಲೆ ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೃಹತ್ ಪ್ರಮಾಣದಲ್ಲಿ ಬಸ್ ಮತ್ತು ರೈಲುಗಳಲ್ಲಿ ಸಹ ಸಿಬ್ಬಂದಿ ಕರ್ತವ್ಯಕ್ಕೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಕುರಿತು ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ಅವರು, "ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ," ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಇನ್ನಯ ರಾಜ್ಯದ ಐದು ಜಿಲ್ಲೆಗಳು ದಟ್ಟ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದೆ. ನಕ್ಸಲಿಸ್ಟ್‌ಗಳ ಪರಿಣಾಮ ಹಿನ್ನಲೆ ಈ ಪ್ರದೇಶಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಸುರಕ್ಷಿತ ಮತದಾನ ನಡೆಸುವುದು ದೊಡ್ಡ ಸವಾಲಾಗಿದೆ. ಆದ್ದರಿಂದ ಇಂತಹ ಅನೇಕ ಮತಕೇಂದ್ರದಲ್ಲಿ ಎರಡು ದಿನದ ಮೊದಲೇ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇನ್ನು ಇಂದು (ನವೆಂಬರ್ 11) ಸೋಮವಾರ ಮತ್ತು ಮಂಗಳವಾರ (ನವೆಂಬರ್ 12) ಮತದಾನ ಸಿಬ್ಬಂದಿ ಕ್ಲಸ್ಟರ್ನಲ್ಲಿ ತಂಗಲಿದ್ದಾರೆ. ಬಳಿಕ ಬುಧವಾರ (ನವೆಂಬರ್ 13) ಅಂದರೆ ಮತದಾನದ ದಿನದಂದು ಬೆಳಗ್ಗೆ ಮತ ಕೇಂದ್ರಕ್ಕೆ ತೆರಳಲಿದ್ದಾರೆ.
ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ
* ಕಣದಲ್ಲಿರುವ ಅಭ್ಯರ್ಥಿಗಳು-683 ಅಭ್ಯರ್ಥಿಗಳು
* ಮತದಾರರ ಸಂಖ್ಯೆ - 1,37,10,717
* ಪುರುಷ ಮತದಾರರು - 68,73,455
* ಮಹಿಳಾ ಮತದಾರರು - 68,36,959
* ತೃತೀಯ ಲಿಂಗಿಗಳು - 303
ಜಾರ್ಖಂಡ್‌ನ ಒಟ್ಟು 81 ಸ್ಥಾನಗಳಿಗೆ ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂದ ಹೊರಬೀಳಲಿದೆ. ಇನ್ನು ಮೊದಲ ಹಂತದಲ್ಲಿ 43 ವಿಧಾನಸಭಾ ಸ್ಥಾನಗಳಿಗೆ, ಇನ್ನುಳಿದ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.












Click it and Unblock the Notifications