J&K 2024 polls: ಜಮ್ಮು & ಕಾಶ್ಮೀರದಲ್ಲಿ ಈ ಅಭ್ಯರ್ಥಿಗಳ ಸಂಖ್ಯೆ ಭಾರೀ ಹೆಚ್ಚಳ
ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ (ಸೆಪ್ಟೆಂಬರ್ 18) ಮೊದಲ ಹಂತದ ವಿಧಾನಸಭೆ ಚುನಾವಣೆಯ ಮತದಾನ ನಡೆದಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಕಣ ಹಲವು ಕಾರಣಗಳಿಂದ ಪ್ರಮುಖ್ಯತೆ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ಶೇಕಡ 40ರಷ್ಟು ಸ್ವಾತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುವುದು ವರದಿಯಾಗಿದೆ. ಭಾರೀ ಪ್ರಮಾಣದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುವುದನ್ನು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಅನುಮಾನದ ದೃಷ್ಟಿಯಿಂದ ನೋಡಿವೆ.
ಮತ ವಿಭಜನೆಗಾಗಿ ಸ್ವತಂತ್ರ ಅಭ್ಯರ್ಥಿಗಳು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವುದರ ಹಿಂದೆ ಇರುವ ಏಕೈಕ ಉದ್ದೇಶವೆಂದರೆ ಅದು ಇಲ್ಲಿನ ಮತದಾನದ ಪ್ರಮಾಣದ ಮೇಲೆ ಪ್ರಭಾವ ಬೀರುವುದು. ಅಂದರೆ ಮತ ವಿಭಜನೆಯ ಉದ್ದೇಶದಿಂದಲೇ ಈ ಬಾರಿ ಇಷ್ಟು ಪ್ರಮಾಣದ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕೆ ಧುಮುಕಿದ್ದಾರೆ ಎಂದು ಅಲ್ಲಿನ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಮ್ಮು - ಕಾಶ್ಮೀರದಲ್ಲಿ ಸ್ವತಂತ್ರ ಅಭ್ಯರ್ಥಿಗಳ ಉದ್ದೇಶ ಗೆದ್ದು ನಿಮ್ಮ ಸೇವೆ ಮಾಡುವುದಲ್ಲ ಮತ ವಿಭಜನೆ ಮಾಡುವುದು. ಹೀಗಾಗಿ, ಮತದಾರರು ಎನ್‌ಸಿ - ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮತ ವಿಭಜನೆಯ ಹಿಂದಿನ ಉದ್ದೇಶವನ್ನು ಜನ ಅರ್ಥ ಮಾಡಿಕೊಂಡು ನಮ್ಮ ಮೈತ್ರಿ ಕೂಟದ ಅಭ್ಯರ್ಥಿಗೆ ಮತ ನೀಡಬೇಕು ಎಂದೂ ಅವರು ಹೇಳಿರುವುದು ಸಹ ವರದಿಯಾಗಿದೆ.

ಸ್ವತಂತ್ರ ಅಭ್ಯರ್ಥಿಗಳದ್ದೇ ಸಿಂಹ ಪಾಲು: ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಈ ಹಿಂದೆಂದಿಗಿಂತಲೂ ಹೆಚ್ಚು ಎನ್ನುವ ಪ್ರಮಾಣದಲ್ಲಿ ಚುನಾವಣಾ ಅಖಾಡಕ್ಕೆ ಜಿಗಿದಿದ್ದಾರೆ. ಇದು ಪ್ರಮುಖ ಪಕ್ಷಗಳಲ್ಲಿ ನಡುಕವನ್ನು ಉಂಟು ಮಾಡಿದೆ. ಇದಕ್ಕೆ ಕಾರಣ ಒಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 908 ಜನ ಅಭ್ಯರ್ಥಿಗಳು ಇದರಲ್ಲಿ ಬರೋಬ್ಬರಿ ಶೇಕಡ 40ರಷ್ಟು ಸ್ವತಂತ್ರ ಅಭ್ಯರ್ಥಿಗಳೇ ಇದ್ದಾರೆ. ಅಂದರೆ ಈ ಬಾರಿ 365 ಜನ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಪ್ರಮಾಣ ಎಂದೇ ಹೇಳಲಾಗುತ್ತಿದೆ.
ಸುದೀರ್ಘ ಅವಧಿಯ ನಂತರ ಚುನಾವಣೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸುದೀರ್ಘ ಅವಧಿಯ ನಂತರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. 2014ನೇ ಸಾಲಿನಲ್ಲಿ ಈ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. 2019ನೇ ಸಾಲಿನಲ್ಲಿ ಜಮ್ಮ ಮತ್ತು ಕಾಶ್ಮೀರ ವಿಭಜನೆಯಾಗಿತ್ತು. ಆ ಸಂದರ್ಭದಲ್ಲಿ ಭಾರತದ ಸ್ವತಂತ್ರದ ನಂತರ ಈ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಸಹ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ರದ್ದು ಮಾಡಿತ್ತು. ಬುಧವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಜಮ್ಮು & ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ರಾಜ್ಯದ ಜನ ಉತ್ಸಾಹದಿಂದ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.












Click it and Unblock the Notifications