ITR Filing 2026: ಕುಟುಂಬದವರಿಂದ ಬಂದ ಉಡುಗೊರೆಗೆ ತೆರಿಗೆ ಕಟ್ಟಬೇಕೇ; ರಿಟರ್ನ್ಸ್‌ನಲ್ಲಿ ದಾಖಲಿಸುವುದು ಹೇಗೆ?

ಮನೆ ಖರೀದಿಗಾಗಿಯೋ, ಮಕ್ಕಳ ವಿದ್ಯಾಭ್ಯಾಸಕ್ಕಾಗೋ ಅಥವಾ ಯಾವುದೋ ತುರ್ತು ಸಂದರ್ಭದಲ್ಲೋ ನಮ್ಮ ಪೋಷಕರಿಂದ, ಅಣ್ಣ-ತಮ್ಮಂದಿರಿಂದ ಅಥವಾ ಸಂಗಾತಿಯಿಂದ ಹಣದ ಸಹಾಯ ಪಡೆಯುವುದು ನಮ್ಮಲ್ಲಿ ಸಾಮಾನ್ಯ. ಆದರೆ, 2026ರ ಹೊಸ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ನಿಯಮಗಳು ಜಾರಿಗೆ ಬಂದಾಗಿನಿಂದ ತೆರಿಗೆದಾರರಲ್ಲಿ ಒಂದು ದೊಡ್ಡ ಆತಂಕ ಶುರುವಾಗಿದೆ. ಹತ್ತಿರದ ಸಂಬಂಧಿಕರಿಂದ ಉಡುಗೊರೆ ರೂಪದಲ್ಲಿ ಬಂದ ಹಣಕ್ಕೆ ನಾವು ತೆರಿಗೆ ಕಟ್ಟಬೇಕೇ? ಈ ಬಾರಿ ಐಟಿಆರ್ ಫಾರ್ಮ್‌ಗಳಲ್ಲಿ ದೊಡ್ಡ ಬದಲಾವಣೆಗಳಾಗಿದ್ದು, ಇಂತಹ ಉಡುಗೊರೆಗಳನ್ನು ಎಲ್ಲಿ ತೋರಿಸಬೇಕು ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.

ಮನೆ ಖರೀದಿ, ಉನ್ನತ ಶಿಕ್ಷಣ ಅಥವಾ ವೈದ್ಯಕೀಯ ವೆಚ್ಚಗಳಿಗಾಗಿ ಇಂತಹ ವಹಿವಾಟುಗಳು ನಡೆಯುತ್ತಿರುತ್ತವೆ. ಆದರೆ, 2026-27ರ ಆಯವ್ಯಯ ವರ್ಷದ (Assessment Year - AY 2026-27) ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಕುಟುಂಬದವರಿಂದ ಪಡೆದ ಉಡುಗೊರೆಗಳನ್ನು ITRನಲ್ಲಿ ತೋರಿಸಬೇಕೇ? ತೋರಿಸುವುದಾದರೆ ಯಾವ ಸೆಕ್ಷನ್ ಅಡಿಯಲ್ಲಿ ತೋರಿಸಬೇಕು?" ಎಂಬ ಗೊಂದಲ ಮೂಡಿದೆ. ಈ ವರ್ಷ ಪರಿಷ್ಕೃತಗೊಂಡಿರುವ ಹೊಸ ಐಟಿಆರ್‌ ಫಾರ್ಮ್‌ಗಳಲ್ಲಿ ಸಂಬಂಧಿಗಳಿಂದ ಬಂದ ಉಡುಗೊರೆಗಳನ್ನು ನಮೂದಿಸಲು ಪ್ರತ್ಯೇಕ ಕಾಲಂ ಇಲ್ಲದಿರುವುದೇ ಈ ಗೊಂದಲಕ್ಕೆ ಮುಖ್ಯ ಕಾರಣ.

ITR Filing 2026

ಸಂಬಂಧಿಕರಿಂದ ಬಂದ ಉಡುಗೊರೆಗೆ ತೆರಿಗೆ ಉಂಟೇ?

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ರಕ್ತಸಂಬಂಧಿಗಳು ಅಥವಾ ನಿರ್ದಿಷ್ಟಪಡಿಸಿದ ಹತ್ತಿರದ ಸಂಬಂಧಿಕರಿಂದ ಪಡೆಯುವ ಉಡುಗೊರೆಗಳು 'ಮೂಲಧನ ಸ್ವೀಕೃತಿ' (Capital Receipt) ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಇವುಗಳ ಮೊತ್ತ ಎಷ್ಟೇ ದೊಡ್ಡದಾಗಿದ್ದರೂ ಸಹ ಅವುಗಳ ಮೇಲೆ ಯಾವುದೇ ಆದಾಯ ತೆರಿಗೆ ಅನ್ವಯಿಸುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2)(x) ಅಡಿಯಲ್ಲಿ, ಯಾವುದೇ ಪ್ರತಿಫಲವಿಲ್ಲದೆ ಪಡೆಯುವ ಕೆಲವು ಉಡುಗೊರೆಗಳಿಗೆ ತೆರಿಗೆ ವಿಧಿಸುವ ನಿಯಮವಿದ್ದರೂ, 'ಸಂಬಂಧಿಕರಿಂದ' ಬರುವ ಉಡುಗೊರೆಗಳಿಗೆ ಇದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಮದುವೆಯ ಸಂದರ್ಭದಲ್ಲಿ ಯಾರಿಂದಲೇ ಉಡುಗೊರೆ ಬಂದರೂ ಅದಕ್ಕೆ ತೆರಿಗೆ ಇರುವುದಿಲ್ಲ. ಇನ್ನುಳಿದಂತೆ, ಸಂಬಂಧಿಕರಲ್ಲದವರಿಂದ ಒಂದು ಹಣಕಾಸು ವರ್ಷದಲ್ಲಿ ಬರುವ ಒಟ್ಟು ಉಡುಗೊರೆಯ ಮೌಲ್ಯ 50,000 ರೂಪಾಯಿ ಮೀರದಿದ್ದರೆ ಅದಕ್ಕೂ ತೆರಿಗೆ ಇರುವುದಿಲ್ಲ.

'ಸಂಬಂಧಿಕರು' ಎಂದರೆ ಯಾರು?

ಪತಿ ಅಥವಾ ಪತ್ನಿ (ಸಂಗಾತಿ), ಸ್ವಂತ ಸಹೋದರ ಅಥವಾ ಸಹೋದರಿ, ಸಂಗಾತಿಯ (ಗಂಡ/ಹೆಂಡತಿಯ) ಸಹೋದರ ಅಥವಾ ಸಹೋದರಿ, ಪೋಷಕರ ಸಹೋದರ ಅಥವಾ ಸಹೋದರಿ (ಚಿಕ್ಕಪ್ಪ, ದೊಡ್ಡಪ್ಪ, ಸೋದರಮಾವ, ಅತ್ತೆ, ಚಿಕ್ಕಮ್ಮ), ತೆರಿಗೆದಾರನ ನೇರ ಪೂರ್ವಜರು ಅಥವಾ ವಂಶಸ್ಥರು (ಪೋಷಕರು, ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳು), ಸಂಗಾತಿಯ ನೇರ ಪೂರ್ವಜರು ಅಥವಾ ವಂಶಸ್ಥರು.

ಹಿಂದಿನ ವರ್ಷಗಳಲ್ಲಿ, ತೆರಿಗೆ ಮುಕ್ತವಾಗಿರುವ ಇಂತಹ ಆದಾಯಗಳನ್ನು ತೆರಿಗೆದಾರರು ಐಟಿಆರ್‌ನ "Other Exempt Income" (ಇತರ ವಿನಾಯಿತಿ ಆದಾಯ) ವಿಭಾಗದಲ್ಲಿ ಸಣ್ಣ ವಿವರಣೆ ನೀಡುವ ಮೂಲಕ ಘೋಷಿಸಬಹುದಿತ್ತು. ಆದರೆ, AY 2026-27ರ ಹೊಸ ಐಟಿಆರ್ ಸಾಫ್ಟ್‌ವೇರ್/ಫಾರ್ಮ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ. ಈಗಿನ ಫಾರ್ಮ್‌ಗಳು ಕೇವಲ ಆದಾಯ ತೆರಿಗೆ ಕಾಯ್ದೆಯ 'ಸೆಕ್ಷನ್ 10'ರ ಅಡಿಯಲ್ಲಿ ಬರುವ ವಿನಾಯಿತಿಗಳನ್ನು ಮಾತ್ರ ಪ್ರಮುಖವಾಗಿ ಒಳಗೊಂಡಿವೆ. ಸಂಬಂಧಿಕರಿಂದ ಬರುವ ಉಡುಗೊರೆಗಳನ್ನು ನಮೂದಿಸಲು ಯಾವುದೇ ಪ್ರತ್ಯೇಕ ವಿಭಾಗ ಅಥವಾ ಕಾಲಂ ಅನ್ನು ಉಳಿಸಿಕೊಂಡಿಲ್ಲ. ಕೇವಲ ಉಡುಗೊರೆ ಪಡೆದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅದನ್ನು ಕಡ್ಡಾಯವಾಗಿ ವರದಿ ಮಾಡಬೇಕು ಎನ್ನುವ ನಿಯಮ ಪ್ರಸ್ತುತ ಐಟಿಆರ್‌ ಫಾರ್ಮ್‌ಗಳಲ್ಲಿ ಕಾಣಿಸುತ್ತಿಲ್ಲ ಎನ್ನುತ್ತಾರೆ ತೆರಿಗೆ ತಜ್ಞರು.

ಇದು ತೆರಿಗೆ ವಿನಾಯಿತಿಯೇ?

ಆರ್ಥಿಕ ತಜ್ಞರ ಪ್ರಕಾರ, ಸಂಬಂಧಿಕರಿಂದ ಬರುವ ಉಡುಗೊರೆಗಳು ಯಾವುದೇ ನಿರ್ದಿಷ್ಟ ವಿನಾಯಿತಿ ನಿಯಮದಡಿ ಬರುವುದಿಲ್ಲ. ಬದಲಿಗೆ, ಇವುಗಳು ತೆರಿಗೆಯ ಮೂಲ ವ್ಯಾಪ್ತಿಯಿಂದಲೇ ಹೊರಗಿವೆ. ವಿನಾಯಿತಿ ಆದಾಯ ಮೂಲತಃ ತೆರಿಗೆಗೆ ಒಳಪಡುವ ಆದಾಯವಾಗಿದ್ದು, ಕಾನೂನಿನ ವಿಶೇಷ ನಿಯಮದಡಿಯಲ್ಲಿ ತೆರಿಗೆಯಿಂದ ರಕ್ಷಣೆ ಪಡೆದಿರುತ್ತದೆ. ಸಂಬಂಧಿಕರಿಂದ ಬಂದ ಉಡುಗೊರೆಯನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 56(2)(x) ಮೊದಲೇ ತೆರಿಗೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ, ಇದನ್ನು ಆರಂಭದಲ್ಲೇ ತೆರಿಗೆಗೆ ಅರ್ಹವಲ್ಲದ ಸ್ವೀಕೃತಿ ಎಂದು ಪರಿಗಣಿಸಲಾಗುತ್ತದೆ. ಹೊಸ ಐಟಿಆರ್‌ ಸಾಫ್ಟ್‌ವೇರ್ ಸಹ ಇದೇ ತತ್ವದ ಆಧಾರದ ಮೇಲೆ ತೋರುತ್ತಿದ್ದು, ಹಾಗಾಗಿಯೇ ವಿನಾಯಿತಿ ಆದಾಯದ ಪಟ್ಟಿಯಲ್ಲಿ ಇದಕ್ಕೆ ಜಾಗ ನೀಡಿಲ್ಲ.

ಇದನ್ನು ಐಟಿಆರ್‌ನಲ್ಲಿ ತೋರಿಸುವುದು ಹೇಗೆ?

ಪ್ರಸ್ತುತ ನಿಯಮಗಳ ಪ್ರಕಾರ, ಸಂಬಂಧಿಕರಿಂದ ಬಂದ ಉಡುಗೊರೆಯನ್ನು ವರದಿ ಮಾಡಲು ಯಾವುದೇ ನಿಗದಿತ ಕಾಲಂ ಅಥವಾ ಸೆಕ್ಷನ್ ಲಭ್ಯವಿಲ್ಲ. ಆದರೆ, ಒಂದು ವೇಳೆ ನೀವು ಪಡೆದ ಉಡುಗೊರೆಯ ಮೊತ್ತವು ಅತಿ ದೊಡ್ಡದಾಗಿದ್ದು (High-value transaction), ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪ್ರಭಾವ ಬೀರಿದ್ದರೆ, ಐಟಿಆರ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಶೀಟ್ ಅಥವಾ ಆಸ್ತಿ-ಹೊಣೆಗಾರಿಕೆಗಳ ಶೆಡ್ಯೂಲ್‌ನಲ್ಲಿ ಸೂಕ್ತ ಆಸ್ತಿ ಘೋಷಣೆಯ ಅಡಿಯಲ್ಲಿ ಇದನ್ನು ತೋರಿಸಬಹುದು. ಇಂತಹ ದೊಡ್ಡ ಮೊತ್ತದ ವಹಿವಾಟುಗಳಿದ್ದಾಗ ವೃತ್ತಿಪರ ಆಡಿಟರ್‌ಗಳ (ಸಿಎ) ಸಲಹೆ ಪಡೆಯುವುದು ಉತ್ತಮ.

ಯಾವೆಲ್ಲ ದಾಖಲೆಗಳು ಕಡ್ಡಾಯ?

ಐಟಿಆರ್‌ನಲ್ಲಿ ವರದಿ ಮಾಡುವುದು ಕಡ್ಡಾಯವಲ್ಲದಿದ್ದರೂ, ಭವಿಷ್ಯದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ನೋಟಿಸ್ ಅಥವಾ ತನಿಖೆ ಎದುರಾದರೆ ಉತ್ತರಿಸಲು ಸೂಕ್ತ ದಾಖಲೆಗಳನ್ನು ಕಾಯ್ದಿರಿಸಿಕೊಳ್ಳುವುದು ಅತ್ಯಗತ್ಯ. ಗಿಫ್ಟ್ ಡೀಡ್, ಉಡುಗೊರೆ ನೀಡಿದ ವ್ಯಕ್ತಿಯ ಪ್ಯಾನ್ ಕಾರ್ಡ್ (PAN) ಅಥವಾ ಆಧಾರ್ ಕಾರ್ಡ್, ಅವರು ನಿಮ್ಮ ನಿಗದಿತ ಸಂಬಂಧಿಕರೇ ಹೌದು ಎಂಬುದನ್ನು ಸಾಬೀತುಪಡಿಸುವ ದಾಖಲೆ, ಬ್ಯಾಂಕ್ ಸ್ಟೇಟ್‌ಮೆಂಟ್, ಆದಾಯದ ಮೂಲ ಇವು ಮುಖ್ಯವಾಗುತ್ತೆ.

ಹೊಸ ಐಟಿಆರ್‌ ಐಟಿಆರ್‌ ಫಾರ್ಮ್‌ನಲ್ಲಿ ಕಾಲಂ ಇಲ್ಲ ಎಂದಾಕ್ಷಣ ಸಂಬಂಧಿಕರ ಉಡುಗೊರೆಗೆ ತೆರಿಗೆ ಅನ್ವಯಿಸುತ್ತದೆ ಎಂದರ್ಥವಲ್ಲ. ಕಾನೂನುಬದ್ಧವಾಗಿ ಇದು ತೆರಿಗೆ ಮುಕ್ತವಾಗಿದೆ. ಆದರೆ, ವರದಿ ಮಾಡುವುದಕ್ಕಿಂತಲೂ ಹೆಚ್ಚಾಗಿ, ವಹಿವಾಟಿನ ಪಾರದರ್ಶಕತೆ ಮತ್ತು ದಾಖಲಾತಿ ಇಲ್ಲಿ ಅತಿ ಮುಖ್ಯ. ಆದ್ದರಿಂದ ಸೂಕ್ತ ಬ್ಯಾಂಕಿಂಗ್ ದಾಖಲೆಗಳನ್ನು ಹಾಗೂ ಗಿಫ್ಟ್ ಡೀಡ್‌ಗಳನ್ನು ಸುರಕ್ಷಿತವಾಗಿಟ್ಟುಕೊಂಡು ನಿಶ್ಚಿಂತೆಯಾಗಿ ಐಟಿಆರ್ ಸಲ್ಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+