Inspiring Story: ತಿಂಗಳಿಗೆ ಕೇವಲ 11 ರೂ. ಉಳಿತಾಯ ಮಾಡಿ ಇಂದು ಇಡೀ ಊರಿನ ಮಕ್ಕಳ ಪಾಲಿಗೆ ಬೆಳಕಾದ ಕಮಲಾ ದೇವಿ

ಸೋಶಿಯಲ್‌ ಮೀಡಿಯಾದಲ್ಲಿ ಮುಳುಗಿರುವ ಇಂದಿನ ಪೀಳಿಗೆಯವರಿಗೆ ನೋಡಲು, ಕೇಳಲು ರಾಶಿ ರಾಶಿ ಕಥೆಗಳು ಸಿಗುತ್ತಲೇ ಇರುತ್ತವೆ. ಅದರಲ್ಲಿ ಒಂದಿಷ್ಟು ನಗು ತರಿಸುವಂತಿದ್ದರೇ, ಇನ್ನೊಂದಿಷ್ಟು ಜೀವನದ ಮೌಲ್ಯಗಳನ್ನ ಸಾರುವಂತದ್ದಿರುತ್ತದೆ. ಹಾಗೆಯೇ ಮತ್ತೊಂದಿಷ್ಟು ಸ್ಪೂರ್ತಿದಾಯಕ ಕಥೆಗಳಿರುತ್ತದೆ. ಹಾಗೆಯೇ ಇದು ಕೂಡ.

ಎಕ್ಸ್ ಖಾತೆಯಲ್ಲಿ ಶಿವಾನಿ ಗೋಖಲೆ ಎಂಬುವವರು ಹಂಚಿಕೊಂಡಿರುವ ಒಂದು ನಿಜವಾದ ಕಥೆ ಈಗ ತುಂಬ ವೈರಲ್ ಆಗಿದ್ದು, ಓದುಗರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. ಇದು ರಾಂಪುರ ಎಂಬ ಗ್ರಾಮದ ಕಮಲಾ ದೇವಿ ಎಂಬ ಬಡ ಮಹಿಳೆಯೊಬ್ಬಳ ತ್ಯಾಗ ಮತ್ತು ಛಲದ ಕಥೆ. ಬಡತನ ಇರುವುದು ಮನುಷ್ಯನ ಜೇಬಿನಲ್ಲಿ ಇರುತ್ತದೆಯೇ ಹೊರತು, ಸಾಧಿಸಬೇಕು ಎನ್ನುವ ಆತನ ದೃಢ ನಿರ್ಧಾರದಲ್ಲಲ್ಲ ಎಂಬುದನ್ನ ಈ ಕಥೆ ಜಗತ್ತಿಗೆ ಸಾರುತ್ತದೆ.

Inspiring Story of Kamala Devi A Poor Woman Who Saved Rs 11 Monthly to Educate Village Children

ರಾಂಪುರ ಗ್ರಾಮದ ಚಿಕ್ಕ ಗುಡಿಸಲೊಂದರಲ್ಲಿ ಕಮಲಾ ದೇವಿ ಅವರು ಒಂಟಿ ಜೀವನ ನಡೆಸುತ್ತಿದ್ದರು. ಪತಿ ತೀರಿಕೊಂಡು 15 ವರ್ಷಗಳೇ ಕಳೆದಿದ್ದವು. ಆಕೆಗೆ ಸ್ವಂತ ಮಕ್ಕಳಾಗಲಿ, ನೆಂಟರಿಷ್ಟರಾಗಲಿ ಯಾರೂ ಇರಲಿಲ್ಲ. ಮುಂಜಾನೆ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ, ಮಧ್ಯಾಹ್ನ ಗದ್ದೆಯಲ್ಲಿ ಕೂಲಿ, ಸಂಜೆ ದೇವಸ್ಥಾನದ ಮುಂದೆ ಕುಳಿತು ಹೂವಿನ ಹಾರ ಕಟ್ಟುವ ಕೆಲಸ. ದಿನದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಆಕೆಯನ್ನ ಕಂಡು ಊರಿನವರು ಹೀಯಾಳಿಸುತ್ತಿದ್ದರು. ಇಷ್ಟೊಂದು ಕಷ್ಟದಲ್ಲಿದ್ದರೂ ಆಕೆ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದನ್ನ ನೋಡಿ ಜನರು ಗೇಲಿ ಮಾಡುತ್ತಿದ್ದರು.

ಬ್ಯಾಂಕಿನಲ್ಲಿ 11 ರೂಪಾಯಿ ಉಳಿತಾಯ

ಪ್ರತಿ ತಿಂಗಳ ಮೊದಲ ದಿನ ಬಂತೆಂದರೆ ಕಮಲಾ ದೇವಿ ತಮ್ಮ ಹಳೆಯ ಸೀರೆಯುಟ್ಟು ಬ್ಯಾಂಕಿಗೆ ಹೋಗಿ 11 ರೂಪಾಯಿಯನ್ನ ಜಮಾ ಮಾಡುತ್ತಿದ್ದರು. ಇದನ್ನ ಕಂಡು ಸ್ವತಃ ಬ್ಯಾಂಕ್ ಕ್ಯಾಷಿಯರ್ ಕೂಡ ನಗುತ್ತಿದ್ದರು. "ಇದರಿಂದೇನು ಉಪಯೋಗ ತಾಯಿ?" ಎಂದು ಕೇಳಿದಾಗ, "ಮಗು, ನಾನು ಉಳಿಸುತ್ತಿರುವುದು ಕೇವಲ ಹಣವನ್ನಲ್ಲ, ನನ್ನ ಸಂಕಲ್ಪವನ್ನ" ಎಂದು ಮುಗುಳ್ನಗುತ್ತಿದ್ದರು. ಹೀಗೆ ಜನರ ವ್ಯಂಗ್ಯ, ಗೇಲಿಗಳ ನಡುವೆಯೂ ಸತತ 30 ವರ್ಷಗಳ ಕಾಲ ಅವರು ಪ್ರತಿ ತಿಂಗಳು 11 ರೂಪಾಯಿ ಕಟ್ಟುತ್ತಲೇ ಬಂದರು.

ಮರಣದ ನಂತರ ಬಯಲಾದ ರಹಸ್ಯ

ಒಮ್ಮೆ ಮಳೆಗಾಲದಲ್ಲಿ ಸುರಿದ ಜೋರು ಮಳೆಗೆ ಚಳಿ ಜ್ವರ ಬಂದು ಕಮಲಾ ದೇವಿ ಇಹಲೋಕ ತ್ಯಜಿಸಿದರು. ಆ ಸಂದರ್ಭದಲ್ಲಿ ಆಕೆಯ ಗುಡಿಸಲಿನಲ್ಲಿ ಆಸ್ತಿ ಎನ್ನಲು ಏನೂ ಇರಲಿಲ್ಲ. ನಿಯಮದಂತೆ ಪೊಲೀಸರು ಬ್ಯಾಂಕಿಗೆ ಮಾಹಿತಿ ನೀಡಿದರು. ಮ್ಯಾನೇಜರ್ ಆಕೆಯ ಪಾಸ್‌ಬುಕ್ ತೆಗೆದು ನೋಡಿದಾಗ, 30 ವರ್ಷಗಳಿಂದ ಪ್ರತಿ ತಿಂಗಳು ನಿರಂತರವಾಗಿ 11 ರೂಪಾಯಿ ಜಮಾ ಆಗಿರುವುದು ಕಂಡಿತು. ಅಚ್ಚರಿಯೆಂದರೆ, ಆ ಖಾತೆಯ ವಾರಸುದಾರರ ಜಾಗದಲ್ಲಿ ಗ್ರಾಮದ ಪ್ರಾಥಮಿಕ ಶಾಲೆ ಎಂದು ಬರೆಯಲಾಗಿತ್ತು.

ಬ್ಯಾಂಕ್ ಸಿಬ್ಬಂದಿ ಅಚ್ಚರಿಗೊಂಡು ಶಾಲೆಯ ಮುಖ್ಯೋಪಾಧ್ಯಾಯರನ್ನ ಕರೆಸಿದರು. ಇನ್ನೇನು ಖಾತೆ ಮುಕ್ತಾಯಗೊಳಿಸ ಬೇಕು ಎಂದು ನೋಡುವಾಗ, "ನನ್ನ ಸಾವಿನ ನಂತರವಷ್ಟೇ ತೆರೆಯಬೇಕು" ಎಂದು ಬರೆದಿದ್ದ ಹಳೆಯ ಲಕೋಟೆಯೊಂದು ಬ್ಯಾಂಕ್ ದಾಖಲೆಯಲ್ಲಿ ಸಿಕ್ಕಿತು.

ಅನಾಮಧೇಯ ದಾನಿಯ ಕೊನೆಯ ಆಸೆ

ನಡುಗುವ ಕೈಗಳಿಂದ ಲಕೋಟೆ ಬಿಚ್ಚಿ ನೋಡಿದ ಮ್ಯಾನೇಜರ್ ಕಣ್ಣಲ್ಲಿ ನೀರು ಜಿನುಗಿತು. ಅದರಲ್ಲಿ ಕಮಲಾ ದೇವಿ ಹೀಗೆ ಬರೆದಿದ್ದರು: "ಬಡತನದಿಂದಾಗಿ ನಾನು ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಒಮ್ಮೆ ಶಾಲೆಯತ್ತ ನಡೆದು ಹೋಗುತ್ತಿದ್ದಾಗ, ಪರೀಕ್ಷಾ ಶುಲ್ಕ ಕಟ್ಟಲಾಗದೆ ಚಿಕ್ಕ ಕಂದಮ್ಮನೊಬ್ಬಳು ಅಳುತ್ತಿರುವುದನ್ನು ನೋಡಿದೆ. ಅಂದೇ ನಾನು ಒಂದು ನಿರ್ಧಾರ ಮಾಡಿದೆ, ನಾನು ಎಷ್ಟೇ ಬಡವಳಾಗಿದ್ದರೂ ಪ್ರತಿ ತಿಂಗಳು ಸ್ವಲ್ಪ ಹಣ ಉಳಿಸುತ್ತೇನೆ. ನನ್ನ ಖಾತೆಯಲ್ಲಿರುವ ಹಣವನ್ನ ಬಡತನದ ಕಾರಣಕ್ಕೆ ಓದಲಾಗದ ಮಕ್ಕಳ ಶುಲ್ಕ ಕಟ್ಟಲು ಬಳಸಿ. ಆದರೆ ಆ ಮಕ್ಕಳಿಗೆ ಯಾರು ಹಣ ಕಟ್ಟಿದರು ಎಂದು ಮಾತ್ರ ಹೇಳಬೇಡಿ. ನನ್ನ ಹೆಸರು ಗೊತ್ತಾದರೆ ಆ ದಾನದ ಮೌಲ್ಯ ಕಡಿಮೆಯಾಗುತ್ತದೆ. ದೊಡ್ಡವರಾದ ಮೇಲೆ ಇನ್ನೊಂದು ಮಗುವಿಗೆ ಸಹಾಯ ಮಾಡಿ ಎಂದು ಮಾತ್ರ ಅವರಿಗೆ ತಿಳಿಸಿ."

ಈ ಪತ್ರ ಓದಿದ ಬ್ಯಾಂಕ್ ಸಿಬ್ಬಂದಿ ಹಾಗೂ ಮುಖ್ಯೋಪಾಧ್ಯಾಯರಿಗೆ ಅಚ್ಚರಿಯಾಗಿತ್ತು. 30 ವರ್ಷದ 11 ರೂಪಾಯಿ ಉಳಿತಾಯ, ಅದರ ಬಡ್ಡಿ ಹಾಗೂ ಬ್ಯಾಂಕ್ ಸಿಬ್ಬಂದಿಯ ಸ್ವಯಂಪ್ರೇರಿತ ದೇಣಿಗೆ ಸೇರಿ ಅನಾಮಧೇಯ ಭರವಸೆ (Anonymous Hope) ಎಂಬ ವಿದ್ಯಾರ್ಥಿವೇತನ ಶುರುವಾಯಿತು.

ಮೊದಲ ವರ್ಷವೇ 5 ಬಡ ಮಕ್ಕಳ ಫೀಸ್ ಪಾವತಿಯಾಯಿತು. ಕಮಲಾ ದೇವಿಯನ್ನು ನೋಡಿ ನಕ್ಕಿದ್ದ ಊರಿನ ಜನರು ಅಂದು ತಲೆತಗ್ಗಿಸಿ ನಿಂತಿದ್ದರು. ತನಗೆ ಮಕ್ಕಳಿಲ್ಲದಿದ್ದರೂ ಇಡೀ ಊರಿನ ಮಕ್ಕಳ ಭವಿಷ್ಯಕ್ಕೆ ಆಸರೆಯಾದ ಕಮಲಾ ದೇವಿ ಜೀವಂತವಿಲ್ಲದಿದ್ದರು, ಆಕೆಯ ಸ್ಫೂರ್ತಿಯ ಕಥೆ ಇಂದಿಗೂ ಜೀವಂತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+