11ನೇ ವಯಸ್ಸಲ್ಲೇ ತಂದೆಯ ಅಗಲಿಕೆ, ಇಂದು ಸಿಯಾಚಿನ್ ಗಡಿಯಲ್ಲಿ ಇತಿಹಾಸ ಬರೆದ ಭಾರತದ ಮೊದಲ ಮಹಿಳಾ ಸೇನಾ ಅಧಿಕಾರಿಯಾಗಿ ಸಾಧನೆ

ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನ ಮೆಟ್ಟಿ ನಿಂತು ಗುರಿಯೆಡೆಗೆ ದೃಷ್ಟಿ ನೆಟ್ಟರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ರಾಜಸ್ಥಾನದ ಯುವತಿಯೇ ಒಂದೊಳ್ಳೆ ಉದಾಹರಣೆ. ಮೈನಸ್ 50 ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ, ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಲ್ಲಿ ದೇಶ ಕಾಯುವ ಜವಾಬ್ದಾರಿಯನ್ನ ಹೊತ್ತಿರುವ ಆ ದಿಟ್ಟ ಮಹಿಳೆಯೇ ಕ್ಯಾಪ್ಟನ್ ಶಿವ ಚೌಹಾಣ್.

ಇವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ.

Inspiring Story Of Captain Shiva Chauhan First Woman Army Officer Deployed At Siachen Glacier

ತಂದೆಯ ಅಗಲಿಕೆ ನೋವು

ಶಿವ ಚೌಹಾಣ್ ಅವರ ಬಾಲ್ಯ ಅಷ್ಟು ಸುಲಭದ್ದಾಗಿರಲಿಲ್ಲ. ಕೇವಲ 11 ವರ್ಷದವರಿದ್ದಾಗಲೇ ಅವರು ತಮ್ಮ ತಂದೆಯನ್ನ ಕಳೆದುಕೊಂಡರು. ಆದರೆ, ಈ ಆಘಾತವು ಅವರ ಭವಿಷ್ಯವನ್ನ ಕಸಿದುಕೊಳ್ಳಲು ಅವರು ಬಿಡಲಿಲ್ಲ.

ತಾಯಿಯ ಬೆಂಬಲ ಮತ್ತು ಸಹೋದರಿಯ ಪ್ರೋತ್ಸಾಹದೊಂದಿಗೆ, ಭಾರತೀಯ ಸೇನೆಯ ಸಮವಸ್ತ್ರ ಧರಿಸಬೇಕು ಎಂಬ ಒಂದೇ ಒಂದು ಕನಸನ್ನ ಹೊತ್ತು ಅವರು ಮುನ್ನಡೆದರು. ಕುಟುಂಬದ ಬೆಂಬಲವೇ ಅವರ ಈ ಪಯಣಕ್ಕೆ ದೊಡ್ಡ ಶಕ್ತಿಯಾಯಿತು.

ಸಿವಿಲ್ ಎಂಜಿನಿಯರಿಂಗ್‌ನಿಂದ ಭಾರತೀಯ ಸೇನೆಗೆ

ಮೂಲತಃ ರಾಜಸ್ಥಾನದವರಾದ ಶಿವ ಚೌಹಾಣ್, ಉದಯಪುರದಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದರು. ಬಾಲ್ಯದಲ್ಲಿ ಕಂಡ ಕನಸನ್ನ ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಎಸ್‌ಎಸ್‌ಬಿ ಸಂದರ್ಶನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ (AIR 1) ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. 2021 ರಲ್ಲಿ ಅವರು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗೆ ಅಧಿಕಾರಿಯಾಗಿ ಸೇರ್ಪಡೆಗೊಂಡರು.

ಕಠಿಣ ತರಬೇತಿ ಮತ್ತು ಸಿಯಾಚಿನ್ ಬ್ಯಾಟಲ್ ಸ್ಕೂಲ್

ಸಿಯಾಚಿನ್‌ನಂತಹ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಸಾಮಾನ್ಯದ ಮಾತಲ್ಲ. ಇದಕ್ಕಾಗಿ ಕ್ಯಾಪ್ಟನ್ ಶಿವ ಚೌಹಾಣ್ ಕಠಿಣ ತರಬೇತಿ ಪಡೆದಿದ್ದಾರೆ. ಲಡಾಖ್‌ನಾದ್ಯಂತ 508 ಕಿಲೋಮೀಟರ್ ಸೈಕ್ಲಿಂಗ್ ಮಾಡುವುದು, ರಾಕ್ ಕ್ಲೈಂಬಿಂಗ್ ಮತ್ತು ಸೇನೆಯ ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಅತ್ಯಂತ ಕಠಿಣ ತರಬೇತಿಯನ್ನ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಪ್ರತಿಯೊಂದು ಸವಾಲುಗಳು ಅವರನ್ನು ಮುಂಬರುವ ಐತಿಹಾಸಿಕ ಸಾಧನೆಗಾಗಿ ಸಜ್ಜುಗೊಳಿಸಿದವು.

ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಐತಿಹಾಸಿಕ ಹೆಜ್ಜೆ

ಸಮುದ್ರ ಮಟ್ಟದಿಂದ ಬರೋಬ್ಬರಿ 15,632 ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನ 'ಕುಮಾರ್ ಪೋಸ್ಟ್'ನಲ್ಲಿ ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನ ಕೆಲಸಕ್ಕೆ ನಿಯೋಜಿಸಲಾಗಿದೆ. ಇಲ್ಲಿನ ತಾಪಮಾನವು ಮೈನಸ್ 50 ಡಿಗ್ರಿ ಸೆಲ್ಸಿಯಸ್‌ಗೂ ಕೆಳಗೆ ಕುಸಿಯುತ್ತದೆ.

ಭೂಮಿಯ ಮೇಲಿನ ಅತ್ಯಂತ ಕಠಿಣವಾದ ಭೌಗೋಳಿಕ ಪ್ರದೇಶಗಳಲ್ಲಿ ಒಂದಾದ ಇಲ್ಲಿ, ಅವರು ಎಂಜಿನಿಯರಿಂಗ್ ಕಾರ್ಯಾಚರಣೆಗಳ ನೇತೃತ್ವ ವಹಿಸುವುದರ ಜೊತೆಗೆ ಅಲ್ಲಿನ ಸೈನಿಕರಿಗೆ ಬೆಂಬಲವಾಗಿ ನಿಂತಿದ್ದಾರೆ.

ತಮ್ಮ ಈ ಸಾಧನೆಯ ಬಗ್ಗೆ ಎನ್‌ಡಿಟಿವಿ ಜೊತೆ ಮಾತನಾಡಿದ್ದ ಕ್ಯಾಪ್ಟನ್ ಶಿವ ಚೌಹಾಣ್, "ಇದು ಕೇವಲ ಒಂದು ಉದ್ಯೋಗವಲ್ಲ, ಇದೊಂದು ಜೀವನ ವಿಧಾನ. ಇಂತಹ ಕಠಿಣ ಸವಾಲುಗಳನ್ನು ಎದುರಿಸಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದಾ ಸದೃಢರಾಗಿರಬೇಕು ಹಾಗೂ ಸಿದ್ಧರಾಗಿರಬೇಕು" ಎಂದು ಹೇಳಿದ್ದಾರೆ.

ಕೆಲವು ಕನಸುಗಳು ಕೇವಲ ಜೀವನವನ್ನು ಬದಲಾಯಿಸುವುದಿಲ್ಲ, ಬದಲಾಗಿ ಇತಿಹಾಸವನ್ನೇ ಸೃಷ್ಟಿಸುತ್ತವೆ ಎಂಬುದಕ್ಕೆ ಕ್ಯಾಪ್ಟನ್ ಶಿವ ಚೌಹಾಣ್ ಅವರ ಈ ಸ್ಫೂರ್ತಿದಾಯಕ ಪಯಣವೇ ಸಾಕ್ಷಿಯಾಗಿದೆ. ದೇಶದ ಹೆಣ್ಣುಮಕ್ಕಳಿಗೆ ಇವರ ಈ ಸಾಧನೆ ಬಹುದೊಡ್ಡ ಮಾದರಿಯಾಗಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+