Indian Railways: ಪ್ರಯಾಣಿಕರಿಗೆ ಗುಡ್‌ನ್ಯೂಸ್: ಮಂಗಳೂರು ಸೇರಿ 4 ವಿಶೇಷ ರೈಲು ಸೇವೆ ನವೆಂಬರ್‌ವರೆಗೆ ವಿಸ್ತರಣೆ
ಬೆಂಗಳೂರು: ಪ್ರಯಾಣಿಕರ ಜನದಟ್ಟಣೆ ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಬಹುದೂರದ ಎರಡು ಮಾರ್ಗಗಳಲ್ಲಿ ನಾಲ್ಕು ಸಾಪ್ತಾಹಿಕ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಮುಂದಿನ 2026ರ ನವೆಂಬರ್ ವರೆಗೂ ವಿಸ್ತರಿಸಿದೆ. ಇದು ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ-ತಮಿಳುನಾಡು ನಡುವೆ ಸಂಚಾರ ಮಾಡುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.
ಗುಜರಾತ್‌ನ ಅಹಮದಾಬಾದ್- ಮಂಗಳೂರು ಜಂಕ್ಷನ್, ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್-ತಮಿಳುನಾಡಿನ ಮಧುರೈನೊಂದಿಗೆ ಸಂಪರ್ಕಿಸುವ ವಿಶೇಷ ರೈಲು ಸೇವೆ ವಿಸ್ತರಣೆ ಆಗಿದೆ. ಈ ಅವದಿಯಲ್ಲಿ ಪ್ರತಿ ಮಾರ್ಗದ ರೈಲು 13 ಟ್ರಿಪ್ ಸೇವೆ ನೀಡಲಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ಅಹಮದಾಬಾದ್-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲುಗಳು (09424/09423) ಮತ್ತು ಕಾನ್ಪುರ ಸೆಂಟ್ರಲ್- ಮಧುರೈ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ (01925/01926) ಸೇವೆ ಮಾತ್ರವೇ ವಿಸ್ತರಣೆ ಆಗಿದೆ. ಹಾಲಿ ಇರುವ ಅದೇ ಸಮಯ ಮತ್ತು ಅದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.
ಅಹಮದಾಬಾದ್-ಮಂಗಳೂರು ವಿಶೇಷ ರೈಲು ವೇಳಾಪಟ್ಟಿ
ಗುಜರಾತ್ ಮತ್ತು ಕರಾವಳಿ ಕರ್ನಾಟಕ ರೈಲ್ವೆ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ನವೆಂಬರ್ ಅಂತ್ಯದ ವರೆಗೂ ಸದರಿ ವಿಶೇಷ ರೈಲುಗಳಲ್ಲಿ ಸಂಚರಿಸಬಹುದು. ಅಹಮದಾಬಾದ್-ಮಂಗಳೂರು ಜಂಕ್ಷನ್ ವಿಶೇಷ ರೈಲು (09424) ವಿಸ್ತೃತ ಅವಧಿಯಲ್ಲಿ ಸೆಪ್ಟೆಂಬರ್ 4 ರಿಂದ ನವೆಂಬರ್ 27ರವರೆಗೆ ಪ್ರತಿ ಶುಕ್ರವಾರ ಕಾರ್ಯ ನಿರ್ವಹಿಸಲಿದೆ.
ಮರಳಿ ಅದೇ ದಿಕ್ಕಿನಲ್ಲಿ ಮಂಗಳೂರು ಜಂಕ್ಷನ್-ಅಹಮದಾಬಾದ್ ವಿಶೇಷ ರೈಲು (09423) ಸೆಪ್ಟೆಂಬರ್ 5ರಿಂದ ನವೆಂಬರ್ 28 ಪ್ರತಿ ಶನಿವಾರ ಸಂಚಾರ ಮಾಡಲಿದೆ. ಈ ಹಿಂದಿನಂತೆ ನಿಗದಿತ ನಿಲ್ದಾಣಗಳಲ್ಲೇ ನಿಲುಗಡೆ ನೀಡಲಿವೆ. ಎರಡು ದಿಕ್ಕಿನಲ್ಲಿ ತಲಾ 13 ಟ್ರಿಪ್ ಗಳ ಸೇವೆ ಒದಗಿಸಲಿದೆ.
ಕಾನ್ಪುರ-ಮಧುರೈ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ
ನವೆಂಬರ್ ವರೆಗೆ ಉತ್ತರ ಪ್ರದೇಶ ಮತ್ತು ತಮಿಳುನಾಡು ನಡುವೆ ಪ್ರಯಾಣಿಸುವ ರೈಲುಗಳ ಸೇವೆ ಪ್ರಯಾಣಿಕರು ಸಿಗಲಿದೆ. ಕಾನ್ಪುರ ಸೆಂಟ್ರಲ್-ಮಧುರೈ ವಿಶೇಷ ಎಕ್ಸ್ ಪ್ರೆಸ್ ರೈಲು (01925) ಸೆಪ್ಟೆಂಬರ್ 2 ರಿಂದ ನವೆಂಬರ್ 25ರವರೆಗೆ ಪ್ರತಿ ಬುಧವಾರ ಸೇವೆ ನೀಡುತ್ತದೆ.
ಇನ್ನೂ ಮಧುರೈ-ಕಾನ್ಪುರ್ ಸೆಂಟ್ರಲ್ ವಿಶೇಷ ರೈಲು (01926) ಸೆಪ್ಟೆಂಬರ್ 5ರಿಂದ ನವೆಂಬರ್ 28ರವರೆಗೆ ಪ್ರತಿ ಶನಿವಾರ ಸಂಚಾರ ನೀಡುತ್ತದೆ. ಈ ರೈಲುಗಳು ಎರಡು ದಿಕ್ಕಿನಲ್ಲಿ ತಲಾ 13 ಟ್ರಿಪ್ ಸೇವೆ ನೀಡಲಿವೆ. ಈ ಹಿಂದಿನಂತೆ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಮುಂಗಡ ಟಿಕೆಟ್ ಬುಕಿಂಗ್ ಓಪನ್
ಈ ಮೇಲಿನ ಎರಡು ಸುದೀರ್ಘ ಮಾರ್ಗಗಳಲ್ಲಿ ವಿಶೇಷ ರೈಲುಗಳ ಮುಂಗಡ ಟಿಕಿಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಟಿಕೆಟ್ ಬುಕಿಂಗ್ ಗೆ ನೀವು IRCTC ವೆಬ್‌ಸೈಟ್, ಆಪ್ ಮೂಲಕ ಬುಕ್ ಮಾಡಬಹುದು. ಹೆಚ್ಚುವರಿ ಮಾಹಿತಿಗೆ ಕೇಂದ್ರ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ
https://indianrail.gov.in/ ಭೇಟಿ ನೀಡಬೇಕು ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.


Click it and Unblock the Notifications
