India Weather: ಮುಂದಿನ ಒಂದು ವಾರ ದೇಶದ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
India Weather: ದೇಶದ ಬಹುತೇಕ ಭಾಗಗಳಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಮಾತ್ರ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಹಾಗೆಯೇ ಮುಂದಿನ 7 ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾಹಿತಿ ಇಲ್ಲಿದೆ ನೋಡಿ.
ದೇಶದ ಹಲವಾರು ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಇನ್ನು ಉತ್ತರಾಖಂಡ, ಉತ್ತರ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಒಡಿಶಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೆಶವನ್ನು ರವಾನಿಸಿದೆ.

ಶುಕ್ರವಾರ (ಆಗಸ್ಟ್ 24) ನವದೆಹಲಿಯಲ್ಲಿ ಭಾರೀ ಮಳೆಯಾಗಿದ್ದು, ಪರಿಣಾಮ ಹಲವೆಡೆ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಇನ್ನು ಈ ಭಾಗದಲ್ಲಿ ಮುಂದಿನ 3-4 ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೊಂಕಣ ಪ್ರದೇಶದ ಪಾಲ್ಘರ್, ಥಾಣೆ, ಮುಂಬೈ, ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಮುಂದಿನ ಒಂದು ವಾರ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಪೂರ್ವ ರಾಜಸ್ಥಾನ, ಚಂಡೀಗಢ, ನವದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಉತ್ತರಾಖಂಡದಲ್ಲಿ ಮುಂದಿನ ಏಳು ದಿನ, ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಆಗಸ್ಟ್ 26ರ ವರೆಗೆ, ಪೂರ್ವ ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 28ರ ವರೆಗೆ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಆಗಸ್ಟ್ 25 ಮತ್ತು 26ರಂದು ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಮತ್ತು ಗುಜರಾತ್‌ನಲ್ಲಿ ಮುಂದಿನ ಏಳು ದಿನ, ಮರಾಠವಾಡದಲ್ಲಿ 25ರಂದು ಪ್ರತ್ಯೇಕವಾಗಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇನ್ನು ಆಗಸ್ಟ್ 27ರ ವರೆಗೆ ಸೌರಾಷ್ಟ್ರ ಮತ್ತು ಕಚ್, ಆಗಸ್ಟ್ 25ರಂದು ಪಶ್ಚಿಮ ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಪೂರ್ವ ಮತ್ತು ಈಶಾನ್ಯ ಭಾರತದ ಹವಾಮಾನ: ಮುಂದಿನ ಒಂದು ವಾರ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವ್ಯಾಪಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 28 ಮತ್ತು 29ರಂದು ಅರುಣಾಚಲ ಪ್ರದೇಶ, ಆಗಸ್ಟ್ 29ರ ವರೆಗೆ ಅಸ್ಸಾಂ ಮತ್ತು ಮೇಘಾಲಯ, ಆಗಸ್ಟ್ 28ರ ವರೆಗೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಜಾರ್ಖಂಡ್, ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದ ಹವಾಮಾನದ ವಿವರ: ಆಗಸ್ಟ್ 26ರ ವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತೆಲಂಗಾಣ, ಕೇರಳ, ಕರಾವಳಿ ಕರ್ನಾಟಕ, ದಕ್ಷಿಣ & ಉತ್ತರ ಒಳನಾಡು ಭಾಗಗಳಲ್ಲಿ, ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕಾರೈಕಲ್, ರಾಯಲಸೀಮಾದಲ್ಲಿ ಆಗಸ್ಟ್ 29ರ ವರೆಗೆ ಚದುರಿದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications