India Weather: ದೇಶದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ ಮುನ್ಸೂಚನೆ
India Weather: ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಮುಂದಿನ ಐದು ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎಂದು ಇಲ್ಲಿ ತಿಳಿಯಿರಿ.
ಭಾರತ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಮಧ್ಯ ಮತ್ತು ವಾಯುವ್ಯ ಭಾರತದಲ್ಲಿ ಮುಂಗಾರು ಮತ್ತಷ್ಟು ಚುರುಕು ಪಡೆಯಲಿದೆ ಎಂದು ತಿಳಿಸಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗುಜರಾತ್, ಮಧ್ಯ ಮಹಾರಾಷ್ಟ್ರ, ಸಿಕ್ಕಿಂ, ಪಶ್ಚಿಮ ಬಂಗಾಳ, ಪಶ್ಚಿಮ ರಾಜಸ್ಥಾನ, ತ್ರಿಪುರಾ, ನಾಗಾಲ್ಯಾಂಡ್, ಮಿಜೋರಾಂ ಮತ್ತು ನಾಗ್ಪುರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ವಾಯುವ್ಯ ಭಾರತದ ಹವಾಮಾನದ ವಿವರ: ಆಗಸ್ಟ್ 4ರಿಂದ ಆಗಸ್ಟ್ 6 ರವರೆಗೆ ಪಶ್ಚಿಮ ರಾಜಸ್ಥಾನದಲ್ಲಿ, ಆಗಸ್ಟ್ 5ರಿಂದ ಆಗಸ್ಟ್ 10ರ ವರೆಗೆ ಪೂರ್ವ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಆಗಸ್ಟ್ 5 ಮತ್ತು ಆಗಸ್ಟ್ 7ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಪೂರ್ವ ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಇಂದು (ಆಗಸ್ಟ್ 5) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮಧ್ಯ ಮತ್ತು ಪಶ್ಚಿಮ ಭಾರತದ ಹವಾಮಾನ: ಆಗಸ್ಟ್ 5ರಂದು ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್, ಆಗಸ್ಟ್ 5, 7, 9 ಮತ್ತು 10ರಂದು ಪೂರ್ವ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 5 ರಿಂದ 10ರ ವರೆಗೆ ಪಶ್ಚಿಮ ಮಧ್ಯಪ್ರದೇಶ, ಆಗಸ್ಟ್ 8-10ರವರೆಗೆ ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅಸ್ಸಾಂ ಮತ್ತು ಮೇಘಾಲಯದ ಪ್ರತ್ಯೇಕ ಸ್ಥಳಗಳಲ್ಲಿ ಆಗಸ್ಟ್ 5, 6, 10ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 5ರಂದು ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಮಣಿಪುರ, 5 ರಿಂದ ಆಗಸ್ಟ್ 6ರ ವರೆಗೆ ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.
ಆಗಸ್ಟ್ 6 ಮತ್ತು ಆಗಸ್ಟ್ 7 ರಂದು ಜಾರ್ಖಂಡ್, ಗಂಗಾ ಪಶ್ಚಿಮ ಬಂಗಾಳ ಮತ್ತು ಒಡಿಶಾ, ಆಗಸ್ಟ್ 5 ರಿಂದ 6ರ ವರೆಗೆ ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಲಿದೆ. ಅಲ್ಲದೆ, ಇಂದು (ಆಗಸ್ಟ್ 5) ತಮಿಳುನಾಡು, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.












Click it and Unblock the Notifications