Breaking: ಭಾರತದ ಮೊದಲ ಕೊರೊನಾವೈರಸ್ ರೋಗಿಗೆ 2ನೇ ಬಾರಿ ಸೋಂಕು!
ತಿರುವನಂತಪುರಂ, ಜುಲೈ 13: ಭಾರತದಲ್ಲೇ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಗೆ ಒಂದು ವರ್ಷ 6 ತಿಂಗಳ ನಂತರ ಎರಡನೇ ಬಾರಿ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಚೀನಾದ ವುಹಾನ್ ನಗರದಿಂದ ವಾಪಸ್ ಆಗಿದ್ದ ಕೇರಳದ ತ್ರಿಸ್ಸುರ್ ಜಿಲ್ಲೆಯ ವಿದ್ಯಾರ್ಥಿನಿಗೆ 2020ರ ಜನವರಿ 30ರಂದು ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ದೇಶದಲ್ಲಿ ಇದು ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣವಾಗಿತ್ತು. ಈ ವಿದ್ಯಾರ್ಥಿನಿ ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರು.
"ನಾನು ದೆಹಲಿಗೆ ಹೋಗುವುದಕ್ಕೂ ಮೊದಲು ನಡೆಸಿದ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ RT-PCR ತಪಾಸಣೆಯಲ್ಲಿ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ನನಗೆ ಕೆಲವು ಸೋಂಕಿನ ಲಕ್ಷಣಗಳಿದ್ದು, ಸದ್ಯಕ್ಕೆ ನಾನು ಗೃಹ ದಿಗ್ಬಂಧನದಲ್ಲಿದ್ದೇನೆ," ಎಂದು ಮತಿಲಕಮ್ ನಿವಾಸಿ ಆಗಿರುವ ವಿದ್ಯಾರ್ಥಿನಿ ಹೇಳಿದ್ದಾರೆ.

ಕೊವಿಡ್-19 ಸೋಂಕಿತೆಯ ಆರೋಗ್ಯ ಸ್ಥಿತಿ ಸ್ಥಿರ:
"ಎರಡನೇ ಬಾರಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿರುವ ಕೇರಳದ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಈಗಾಗಲೇ ಹಲವರಿಗೆ ಕೊವಿಡ್-19 ಸೋಂಕು ಎರಡನೇ ಬಾರಿ ತಗುಲಿದೆ. ಇದೂ ಕೂಡಾ ಅಂಥದ್ದೇ ಒಂದು ಪ್ರಕರಣವಾಗಿದೆ. ಅದೇನೇ ಇದ್ದರೂ, ಮಹಿಳೆಯ ಆರೋಗ್ಯ ಸ್ಥಿತಿಯ ಬಗ್ಗೆ ಲಕ್ಷ್ಯ ವಹಿಸಲಾಗುತ್ತಿದೆ," ಎಂದು ತ್ರಿಸ್ಸುರ್ ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications