
ಚೀನಾದಿಂದ ಬ್ರಿಕ್ಸ್ ವರ್ಚುವಲ್ ಸಭೆ; ಭಾರತದ ಪರ ಅಜಿತ್ ದೋವಲ್ ಭಾಗಿ
ನವದೆಹಲಿ, ಜೂನ್ 16: ಐದು ಪ್ರಮುಖ ಅಭಿವೃದ್ಧಿಶೀಲ ದೇಶಗಳ ಗುಂಪಾದ ಬ್ರಿಕ್ಸ್‌ನ ಶೃಂಗಸಭೆಗೆ ಪೂರ್ವಭಾವಿಯಾಗಿ ನಿನ್ನೆ ಬುಧವಾರ ಆನ್‌ಲೈನ್‌ನಲ್ಲಿ ಸಭೆ ನಡೆಯಿತು. ಭಾರತ, ಚೀನಾ, ಬ್ರೆಜಿಲ್, ರಷ್ಯಾ ಮತ್ತು ದಕ್ಷಿಣ ಅಫ್ರಿಕಾ ದೇಶದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡರು. ಭಾರತದ ಪರ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತರಿದ್ದರು.
ಚೀನಾ ಆಯೋಜನೆ ಮಾಡಿದ್ದ ಈ ವರ್ಚುಯಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವ್ಯಾಂಗ್ ವೆನ್‌ಬಿನ್, "ಈ ಗುಂಪಿನ ಸದಸ್ಯರ ರಾಷ್ಟ್ರಗಳ ಭದ್ರತೆಗೆ ಚೀನಾ ಬದ್ಧವಾಗಿದೆ" ಎಂದು ಹೇಳಿದರು.
ಲಡಾಖ್ ಗಡಿಭಾಗದಲ್ಲಿ 25 ಯುದ್ಧವಿಮಾನ ಅಣಿಗೊಳಿಸಿ ಕಾದಿದೆ ಚೀನಾ
ವಿಚಿತ್ರ ಎಂದರೆ, ಈ ಸಭೆ ನಡೆದದ್ದು ಜೂನ್ 15ರಂದು. ಅದು ಲಡಾಖ್ ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಕ್ರೌರ್ಯ ತೋರಿದ ದಿನ. ಗಾಲ್ವನ್ ಸಂಘರ್ಷ ಘಟನೆ ನಿನ್ನೆಗೆ 2 ವರ್ಷ ಆಗಿದೆ. ಈ ದಿನದಂದು ಬ್ರಿಕ್ಸ್ ವರ್ಚುವಲ್ ಸಭೆ ನಡೆಯಿತು. ಅದರಲ್ಲಿ ಚೀನಾ ಭದ್ರತಾ ಸಹಕಾರದ ಬಗ್ಗೆ ಮಾತನಾಡಿದೆ.
"ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಮ್ಮ ಅಂತಾರಾಷ್ಟ್ರೀಯ ಪರಿಕಲ್ಪನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ನಾವು ಪರಿವರ್ತನೆಯ ಹೊಸ ಹಂತ ಪ್ರವೇಶಿಸಿದ್ದೇವೆ. ಇಂಥ ಸಂದರ್ಭದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಶಾಂತಿ ಮತ್ತು ಸ್ಥಿರತೆಗಾಗಿ ಚೀನಾ ಕೆಲಸ ಮಾಡುತ್ತದೆ. ರಾಜಕೀಯ ವಿಶ್ವಾಸ, ಭದ್ರತಾ ಸಹಕಾರಕ್ಕೆ ಚೀನಾ ಬದ್ಧವಾಗಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರರು ಹೇಳಿದರು.
ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!
ಚೀನಾದ ಭದ್ರತಾ ಸಲಹೆಗಾರ ಯಾಂಗ್ ಜೇಚಿ ಅವರು ಈ ವರ್ಚುವಲ್ ಸಭೆಯನ್ನು ಆಯೋಜಿಸಿದ್ದರು.
ಜೂನ್ 24ರಂದು ಬ್ರಿಕ್ಸ್ ಸಭೆ:
ನಿನ್ನೆ ಬುಧವಾರ ವರ್ಚುಲ್ ಸಭೆ ನಡೆದದ್ದು ಬ್ರಿಕ್ಸ್ ಸಭೆಗೆ ಪೂರ್ವಭಾವಿಯಾಗಿ ಮಾತ್ರ. ಜೂನ್ ೨೪ರಂದು ಚೀನಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಲ್ಲದೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶದ ಮುಖಂಡರೂ ಭಾಗವಹಿಸಲಿದ್ದಾರೆ.
ಎಸ್‌ಸಿಒ ಸಭೆ:
ಚೀನಾ ರೂಪಿಸಿದ ಶಾಂಘೈ ಸಹಕಾರ ಸಂಸ್ಥೆ (SCO- Shanghai Co-operation Organisation)ಯ ಸದಸ್ಯ ರಾಷ್ಟ್ರಗಳ ಗಡಿ ಭದ್ರತೆ ಸಭೆ ಕೂಡ ನಿನ್ನೆ ಬುಧವಾರ ನಡೆದದ್ದು ವಿಶೇಷ. ಭಾರತದ ಗಡಿಭದ್ರತಾ ಪಡೆ ಈ ಸಭೆಯನ್ನು ಆಯೋಜನೆ ಮಾಡಿತು. ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಗಡಿ ಭದ್ರತೆ ಮುಖ್ಯಸ್ಥರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
(ಒನ್ಇಂಡಿಯಾ ಸುದ್ದಿ)