Gold Loan: ಚಿನ್ನದ ಬೆಲೆ ಏರಿಕೆಯೊಂದಿಗೆ ಸಾಲದ ಪ್ರಮಾಣದಲ್ಲಿಯೂ ಗಣನೀಯ ಹೆಚ್ಚಳ

ನವದೆಹಲಿ: ಭಾರತದ ಬ್ಯಾಂಕ್ ಸಾಲದ ಬೆಳವಣಿಗೆಯು 2026ರ ಹಣಕಾಸು ವರ್ಷದ (FY26) ಅಂತ್ಯಕ್ಕೆ ಭಾರಿ ಮುನ್ನಡೆ ಸಾಧಿಸಿದೆ. ಪ್ರಮುಖವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಹಾಗೂ ಚಿಲ್ಲರೆ ಸಾಲಗಾರರಿಗೆ ನೀಡುವ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಪರಿಣಾಮ, ಚಿನ್ನದ ಮೇಲಿನ ಸಾಲದ ಪ್ರಮಾಣದಲ್ಲಿ ಭಾರಿ ಜಿಗಿತ ಕಂಡುಬಂದಿದೆ ಎಂದು ಕೇರ್‌ಎಡ್ಜ್‌ ರೇಟಿಂಗ್ಸ್ ವರದಿ ತಿಳಿಸಿದೆ.

ವರದಿಯ ಪ್ರಕಾರ, 2026ರ ಮಾರ್ಚ್‌ ತಿಂಗಳಲ್ಲಿ ಬ್ಯಾಂಕುಗಳ ಆಹಾರೇತರ ಸಾಲದ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇ. 15.9ರಷ್ಟು ಏರಿಕೆಯಾಗಿದೆ. 2025ರ ಮಾರ್ಚ್‌ನಲ್ಲಿ ಈ ಪ್ರಮಾಣ ಶೇ. 11ರಷ್ಟಿತ್ತು. ವೈಯಕ್ತಿಕ ಸಾಲ, ಸೇವಾ ವಲಯ ಮತ್ತು ಕೈಗಾರಿಕಾ ಸಾಲಗಳಿಗೆ ಹೆಚ್ಚಿನ ಬೇಡಿಕೆ ಬಂದಿರುವುದು ಈ ಪ್ರಗತಿಗೆ ಕಾರಣ. 2025ರ ಬ್ಯಾಂಕಿಂಗ್ ಕಾಯ್ದೆ (ತಿದ್ದುಪಡಿ) ಅಡಿಯಲ್ಲಿ ಪರಿಚಯಿಸಲಾದ ಪಾಕ್ಷಿಕ ವರದಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಸಹ ಈ ಏರಿಕೆಗೆ ಸ್ವಲ್ಪ ಮಟ್ಟಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗಿದೆ.

India Bank

ಸೇವಾ ವಲಯ, ಎನ್‌ಬಿಎಫ್‌ಸಿಗಳಿಗೆ ಹೆಚ್ಚಿನ ಸಾಲ

ಮಾರ್ಚ್‌ ತಿಂಗಳಲ್ಲಿ ಸೇವಾ ವಲಯದ ಸಾಲವು ಶೇ. 19ರಷ್ಟು ಬೆಳವಣಿಗೆ ಕಂಡಿದೆ. ಪ್ರಮುಖವಾಗಿ ಎನ್‌ಬಿಎಫ್‌ಸಿಗಳು, ವ್ಯಾಪಾರ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ವಲಯಗಳಿಗೆ ನೀಡಿದ ಸಾಲವು ಇದಕ್ಕೆ ಅತಿ ದೊಡ್ಡ ಕೊಡುಗೆ ನೀಡಿದೆ. ಎನ್‌ಬಿಎಫ್‌ಸಿಗಳಿಗೆ ಬ್ಯಾಂಕ್ ಸಾಲ ನೀಡಿಕೆಯು ವರ್ಷದಿಂದ ವರ್ಷಕ್ಕೆ ಶೇ. 26.3ರಷ್ಟು ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಬಾಕಿ ಸಾಲದ ಪ್ರಮಾಣ 20 ಲಕ್ಷ ಕೋಟಿ ರೂ. ಗಡಿ ದಾಟಿ 20.65 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಬ್ಯಾಂಕುಗಳು ಸಾಲ ನೀಡಲು ಹೆಚ್ಚಾಗಿ ಮಧ್ಯಮ ಗಾತ್ರದ ಎನ್‌ಬಿಎಫ್‌ಸಿಗಳತ್ತ ಒಲವು ತೋರುತ್ತಿವೆ.

ಕೈಗಾರಿಕೆ ಹಾಗೂ ಎಂಎಸ್‌ಎಂಇ ಸಾಲ ದ್ವಿಗುಣ

ಕೈಗಾರಿಕಾ ಸಾಲದ ಬೆಳವಣಿಗೆಯು ಹಿಂದಿನ ವರ್ಷದ ಶೇ. 8.2ರಿಂದ 2026ರ ಮಾರ್ಚ್‌ನಲ್ಲಿ ಶೇ. 15ಕ್ಕೆ, ಅಂದರೆ ಬಹುತೇಕ ದ್ವಿಗುಣಗೊಂಡಿದೆ. ಮೂಲಸೌಕರ್ಯ, ಇಂಜಿನಿಯರಿಂಗ್, ಲೋಹ, ರಾಸಾಯನಿಕ ಮತ್ತು ಪೆಟ್ರೋಲಿಯಂ ವಲಯಗಳಿಗೆ ಸಾಲದ ಹರಿವು ಹೆಚ್ಚಾಗಿದೆ. ದೊಡ್ಡ ಕೈಗಾರಿಕೆಗಳಿಗಿಂತ ಎಂಎಸ್‌ಎಂಇ (MSME) ವಲಯದ ಸಾಲ ನೀಡಿಕೆ ಮುಂಚೂಣಿಯಲ್ಲಿದ್ದು, ಕೈಗಾರಿಕಾ ಸಾಲದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಪಾಲು ಶೇ. 20.1ರಿಂದ ಶೇ. 23.2ಕ್ಕೆ ಏರಿಕೆಯಾಗಿದೆ. ವಿದ್ಯುತ್ ಮತ್ತು ಬಂದರು ವಲಯಗಳ ಬಲವಾದ ಬೆಳವಣಿಗೆಯಿಂದ ಮೂಲಸೌಕರ್ಯ ಸಾಲವು ಶೇ. 9.5ರಷ್ಟು ವೃದ್ಧಿಸಿದೆ.

ಚಿನ್ನದ ಸಾಲದಲ್ಲಿ ಶೇ. 123ರಷ್ಟು ದಾಖಲೆಯ ಜಿಗಿತ

ಚಿಲ್ಲರೆ ಸಾಲ ವಿಭಾಗವು ಬ್ಯಾಂಕಿಂಗ್ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿ ಮುಂದುವರಿದಿದೆ. ವೈಯಕ್ತಿಕ ಸಾಲಗಳು ಶೇ. 16.2ರಷ್ಟು ಮತ್ತು ವಾಹನ ಸಾಲಗಳು ಶೇ. 18.6ರಷ್ಟು ಏರಿಕೆಯಾಗಿವೆ. ಜಿಎಸ್‌ಟಿ ಕಡಿತ ಹಾಗೂ ಗ್ರಾಹಕರ ಬೇಡಿಕೆ ಹೆಚ್ಚಾಗಿರುವುದು ವಾಹನ ಸಾಲ ವಲಯಕ್ಕೆ ಬಲ ತುಂಬಿದೆ. ಗೃಹ ಸಾಲಗಳು ಶೇ. 11.5ರ ಸ್ಥಿರತೆ ಕಾಯ್ದುಕೊಂಡಿವೆ. ಇದರ ನಡುವೆ, ಚಿನ್ನದ ಸಾಲದ ವಿಭಾಗವು ಅಚ್ಚರಿಯ ರೀತಿಯಲ್ಲಿ ಶೇ. 123.1ರಷ್ಟು ದಾಖಲೆಯ ಜಿಗಿತ ಕಂಡಿದೆ. ಚಿನ್ನದ ಬೆಲೆ ಏರಿಕೆ ಹಾಗೂ ಕೆಲವು ಕೃಷಿ-ಚಿನ್ನದ ಸಾಲಗಳನ್ನು ಚಿಲ್ಲರೆ ವಿಭಾಗಕ್ಕೆ ವರ್ಗಾಯಿಸಿರುವುದು ಇದಕ್ಕೆ ಪ್ರಮುಖ ಕಾರಣ. ಆದರೆ ಅಸುರಕ್ಷಿತ ಸಾಲದ ಮೇಲಿನ ಎಚ್ಚರಿಕೆಯ ನಡೆಯಿಂದಾಗಿ ಕ್ರೆಡಿಟ್ ಕಾರ್ಡ್ ಸಾಲದ ಬೆಳವಣಿಗೆ ಶೇ. 10.6ರಿಂದ ಶೇ. 3.5ಕ್ಕೆ ಕುಸಿದಿದೆ.

ಭವಿಷ್ಯದ ಸವಾಲುಗಳು

ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ರಫ್ತು ಆಧಾರಿತ ಎಂಎಸ್‌ಎಂಇಗಳಿಗೆ (ರತ್ನ ಮತ್ತು ಆಭರಣ, ಜವಳಿ, ಪಿಂಗಾಣಿ) ಕಚ್ಚಾ ವಸ್ತುಗಳ ವೆಚ್ಚ ಏರಿಕೆಯಾಗುವ ಹಾಗೂ ಬೇಡಿಕೆ ಕುಸಿಯುವ ಆತಂಕವಿದೆ ಎಂದು ವರದಿ ಎಚ್ಚರಿಸಿದೆ. ಈ ಬಿಕ್ಕಟ್ಟಿನಿಂದ ಹಾನಿಗೊಳಗಾದ ವಲಯಗಳನ್ನು ಬೆಂಬಲಿಸಲು ಸರ್ಕಾರ ಇತ್ತೀಚೆಗಷ್ಟೇ 'ತುರ್ತು ಸಾಲ ಖಾತರಿ ಯೋಜನೆ 5.0' (ECLGS 5.0) ಅನ್ನು ಅನುಮೋದಿಸಿದೆ. 2027ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಬ್ಯಾಂಕ್ ಸಾಲದ ಬೆಳವಣಿಗೆ ಶೇ. 13-14.5ರ ಆಸುಪಾಸಿನಲ್ಲಿರಲಿದೆ ಎಂದು ಕೇರ್‌ಎಡ್ಜ್ ಅಂದಾಜಿಸಿದೆ. ಆದರೆ ಕಚ್ಚಾತೈಲ ಬೆಲೆ ಏರಿಕೆ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ಸಾಲದ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+