IMD Weather Forecast: ಈ ಭಾಗಗಳಲ್ಲಿ ಅಕ್ಟೋಬರ್ 18ರ ವರೆಗೂ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ಇನ್ನು ಮುಂದಿನ ಎರಡು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾದ್ರೆ, ಇನ್ನೂ ಕೆಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಅವಾಂತರಗಳೇ ಸೃಷ್ಟಿಯಾದ ಘಟನೆಗಳು ನಡೆದಿವೆ.

ದೇಶದ ಬಹುತೇಕ ಭಾಗಗಳಲ್ಲಿ ಇದೀಗ ಚಳಿ ಆವರಿಸಿದೆ. ಈ ನಡುವೆಯೇ ಕೆಲವು ಭಾಗಗಳಲ್ಲಿ ಮಳೆ ಮುಂದುವರೆದಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಕ್ಟೋಬರ್ 18ರ ವರೆಗೂ ಪ್ರತ್ಯೇಕವಾಗಿ ಅಲ್ಲಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
8 ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ: ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರಾವಳಿ ಆಂಧ್ರಪ್ರದೇಶ, ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಿ, ಕೇರಳ ಮತ್ತು ದಕ್ಷಿಣ ಒಡಿಶಾದ ಹೆಚ್ಚಿನ ಭಾಗಗಳಲ್ಲಿ ಇಂದು (ಅಕ್ಟೋಬರ್ 16) ಮಳೆಯಾಗಲಿದ್ದು, ಈ ರಾಜ್ಯಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಇದೇ ವೇಳೆ ಮಹಾರಾಷ್ಟ್ರದ ಮರಾಠವಾಡ ಮತ್ತು ಗೋವಾದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಉತ್ತರ ಮತ್ತು ಮಧ್ಯ ಭಾರತದ ಹವಾಮಾನ: ಇದೀಗ ಉತ್ತರ ಮತ್ತು ಮಧ್ಯ ಭಾರತದಾದ್ಯಂತ ತಾಪಮಾನ ಪ್ರಮಾಣ ಕಡಿಮೆಯಾಗಿದೆ. ಇದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಭೀಕರ ಚಳಿಯ ವಾತಾವರಣ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳಿ ಎದ್ದು ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಚಳಿಯ ವಾತಾವರಣ ನಿರ್ಮಾಣವಾಗುತ್ತಿದೆ.
ಎಲ್ಲೆಲ್ಲಿ ತಾಪಮಾನ ಕುಸಿತ?: ರಾಷ್ಟ್ರ ರಾಜಧಾನಿ ನವದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಗಣನೀಯವಾಗಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಸದ್ಯ ಇದೀಗ ಈ ಭಾಗಗಳಲ್ಲಿ ತಾಪಮಾನ ಪ್ರಮಾಣ ಕಡಿಮೆಯಾಗುತ್ತಲಿದೆ. ಅದರಲ್ಲೂ ನವದೆಹಲಿಯಲ್ಲಿ ತಾಪಮಾನ ಕುಸಿತವಾಗಿದ್ದು, ಗಾಳಿಯ ಗುಣಮಟ್ಟ ಹದಗೆಡುತ್ತಲಿದೆ ಎಂದು ವರದಿಯಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಅಕ್ಟೋಬರ್ 16) ಯಾವುದೇ ಮಳೆ ಮುನ್ಸೂಚನೆ ಇಲ್ಲ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 17 ಡಿಗ್ರಿ ಸೆಲ್ಸಿಯಸ್ ಮತ್ತು 32 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಬುಧವಾರ (ಅಕ್ಟೋಬರ್ 15) ನಗರದಲ್ಲಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ (ಸರಾಸರಿಗಿಂತ 0.7 ಡಿಗ್ರಿ ಕಡಿಮೆ) ಮತ್ತು ಕನಿಷ್ಠ ತಾಪಮಾನ 18.3 ಡಿಗ್ರಿ ಸೆಲ್ಸಿಯಸ್ (ಋತುವಿನ ಸರಾಸರಿಗಿಂತ 1.3 ಡಿಗ್ರಿ ಕಡಿಮೆ) ದಾಖಲಾದ ಬಗ್ಗೆ ವರದಿಯಾಗಿದೆ. ಮತ್ತೊಂದೆಡೆ ಗಾಳಿಯ ಗುಣಮಟ್ಟ ಮಾತ್ರ ಕಳಪೆಯಾಗಿತ್ತು ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಗಾಳಿಯ ಗುಣಮಟ್ಟ ಮತ್ತೆಷ್ಟು ಹದಗೆಡಲಿದೆಯೋ ಎನ್ನುವ ಆತಂಕ ಈ ಭಾಗದ ಜನರದ್ದಾಗಿದೆ.












Click it and Unblock the Notifications