IMD Weather Forecast: ಮೇ 24ರ ವರೆಗೂ ದಿನ ಗುಡುಗು, ಮಿಂಚು ಸಹಿತ ರಣಮಳೆ ಮುನ್ಸೂಚನೆ
IMD Weather Forecast: ಈಗಾಗಲೇ ಅಂಡಮಾನ್ ಹಾಗೂ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ಈ ಭಾಗಗಳಲ್ಲಿ ಮೇ 24ರ ವರೆಗೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತ ಪರಿಣಾಮ ಮುಂದಿನ ಹಲವು ದಿನಗಳ ಕಾಲ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಕೆಲವೆಡೆ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಆರೆಂಜ್, ಯೆಲ್ಲೋ ಅಲರ್ಟ್: ಅಲ್ಲದೇ, ಮುಂದಿನ ಮೂರು ದಿನಗಳ ಕಾಲ ರಣಭೀಕರ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮತ್ತೊಂದೆಡೆ ತಮಿಳುನಾಡು ಮತ್ತು ನವದೆಹಲಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ?: ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾದ ಪರಿಣಾಮ, ಮೇ 24ರವರೆಗೆ ಮುಂಬೈನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಅಲ್ಲದೆ, ಇದೇ ವೇಳೆ, ದಕ್ಷಿಣ ಕೊಂಕಣ, ಮಧ್ಯ ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ತಾಪಮಾನ ಹೆಚ್ಚಳದ ಮುನ್ಸೂಚನೆ?: ಮುಂದಿನ ಹಲವು ದಿನಗಳ ಕಾಲ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಮಧ್ಯಪ್ರದೇಶ ಮತ್ತು ದಕ್ಷಿಣ ಉತ್ತರ ಪ್ರದೇಶಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ತಾಪಮಾನವು 47°Cವರೆಗೆ ತಲುಪುವ ಸಾಧ್ಯತೆ ಇರುವುದರಿಂದ ರಾಜಸ್ಥಾನಕ್ಕೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ಈ ಭಾಗಗಳ ಜನರು ಬಿಸಿಲಿನ ವೇಳೆ ಮನೆಯಿಂದ ಹೊರಗಡೆ ಹೊರಡದಂತೆಯೂ ಸೂಚನೆ ನೀಡಿದೆ.
ನವದೆಹಲಿಯ ಹವಾಮಾನದ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೇ 22, 23, 24ರಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನದಲ್ಲಿಯೂ ಇಳಿಕೆಯಾಗಲಿದೆ ಎಂದು ತಿಳಿಸಿದೆ.
ಗುರುವಾರ ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಕನಿಷ್ಠ ತಾಪಮಾನವು 20.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಇದು ಈ ಋತುವಿನಲ್ಲಿ ಸಾಮಾನ್ಯಕ್ಕಿಂತ 5.9 ಡಿಗ್ರಿ ಕಡಿಮೆಯಾಗಿದೆ. ಇನ್ನು ನಿನ್ನೆ ಅಂದರೆ ಬುಧವಾರ ರಾತ್ರಿ ನಗರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬಳಿಕ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 12 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಕನಿಷ್ಠ ತಾಪಮಾನ 30.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಈ ಋತುವಿನ ಅತ್ಯಧಿಕ ಕನಿಷ್ಠ ತಾಪಮಾನವಾಗಿದೆ. ಇದೇ ರೀತಿಯ ವಾತಾವರಣ ಇಂದು ಅಂದರೆ ಗುರುವಾರ ಸಹ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.












Click it and Unblock the Notifications