IMD Weather Forecast: ಮಾರ್ಚ್ 10ರ ವರೆಗೂ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಮಾಯವಾಗಿದ್ದು, ರಣ ಬಿಸಿಲು ಮುಂದುವರೆದಿದೆ. ಈ ನಡುವೆಯೂ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮಾರ್ಚ್ 10ರ ವರೆಗೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಎಂದು ಇಲ್ಲಿ ತಿಳಿಯಿರಿ.
ಚಂಡಮಾರುತದ ಪರಿಚಲನೆ ಪರಿಣಾಮ ಮಾರ್ಚ್ 5 ಮತ್ತು 6ರಂದು ವಾಯುವ್ಯ ಭಾರತದ ಹಲವೆಡೆ ಗಂಟೆಗೆ 20-30 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಜೊತೆ ಮಳೆಯಾಗುವ ಸಾಧ್ಯತೆಯಿದೆ. ಇಂದು (ಮಾರ್ಚ್ 05) ಅರುಣಾಚಲ ಪ್ರದೇಶ, ಮಾರ್ಚ್ 9ರಿಂದ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾರ್ಚ್ 7ರಿಂದ 10ರ ವರೆಗೆ ಪಶ್ಚಿಮ ಹಿಮಾಲಯ ಪ್ರದೇಶ, ಮಾರ್ಚ್ 8ರಂದು ಬಿಹಾರದಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ. ಮಾರ್ಚ್ 7 ಮತ್ತು 8 ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಮಾರ್ಚ್ 9 ರಿಂದ 10ರ ವರೆಗೆ ಜಮ್ಮು, ಕಾಶ್ಮೀರ , ಲಡಾಖ್ , ಗಿಲ್ಗಿಟ್ , ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆಯಿದೆ. ಮಾರ್ಚ್ 10ರಂದು ಉತ್ತರಾಖಂಡದಲ್ಲಿ ಇದೇ ರೀತಿ ವಾತಾವರಣ ಇರಲಿದೆ ಎಂದು ತಿಳಿಸಿದೆ.
ತಾಪಮಾನದ ವಿವರ: ಮುಂದಿನ 2 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 2-3 ದಿನಗಳಲ್ಲಿ ಈಶಾನ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 2-3°Cನಷ್ಟು ಕ್ರಮೇಣ ಏರಿಕೆಯಾಗುವ ಸಾಧ್ಯತೆಯಿದೆ.
ಮುಂದಿನ 3 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇರುವುದಿಲ್ಲ. ಇದೇ ವೇಳೆ ಮಧ್ಯ ಭಾರತ ಮತ್ತು ಗುಜರಾತ್ ಪ್ರದೇಶದಲ್ಲಿ ಗರಿಷ್ಠ ತಾಪಮಾನದಲ್ಲಿ 2-3°C ನಷ್ಟು ಕ್ರಮೇಣ ಇಳಿಕೆಯಾಗುವ ಸಾಧ್ಯತೆಯಿದೆ. ಮುಂದಿನ 4-5 ದಿನಗಳಲ್ಲಿ ಭಾರತದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಮಟ್ಟದ ಬದಲಾವಣೆಯೇನು ಇರುವುದಿಲ್ಲ ಎಂದು ತಿಳಿಸಿದೆ.
ನವದೆಹಲಿ ಹವಾಮಾನ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಮಾರ್ಚ್ 05) ಹಗಲಿನಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26 ಮತ್ತು 11 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ತಿಳಿಸಿದೆ. ಈಗಾಗಲೇ ಕಳೆದ ಬಾರಿ ಅಂದರೆ 2024ರಲ್ಲಿ ಮುಂಗಾರು ಮಳೆ ಆರ್ಭಟದಿಂದ ದೇಶದ ಬಹುತೇಕ ಭಾಗಗಳಲ್ಲಿ ದೊಡ್ಡ ಅವಾತಂತರಗಳೇ ಸೃಷ್ಟಿಯಾಗಿದ್ದವು.
ಹಾಗೆಯೇ ಈ ಬಾರಿಯೂ ಕೂಡ ಅಂದರೆ 2025ರಲ್ಲಿಯೂ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇದೆ.












Click it and Unblock the Notifications