India Weather Forecast: 2 ದಿನ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಮುನ್ಸೂಚನೆ
India Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ರಣಬಿಸಿಲು ಮುಂದುವರೆದಿದೆ. ಈ ನಡುವೆಯೂ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಎರಡು ದಿನ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲವು ದಿನಗಳಿಂದ ಉತ್ತರ ಭಾರತದಾದ್ಯಂತ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಹಾಗೆಯೇ ಹಲವೆಡೆ ಮಳೆ ಕೂಡ ಸುರಿಯುತ್ತಿದೆ. ಇನ್ನು ಭಾರತ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳ ಕಾಲ ಬಿಹಾರ, ಜಾರ್ಖಂಡ್, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ, ಸಿಕ್ಕಿಂ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಎಷ್ಟು ದಿನ ಮಳೆ?: ಇಂದು (ಏಪ್ರಿಲ್ 14) ಮಧ್ಯ ಭಾರತದ ಹಲವೆಡೆ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ವರೆಗೆ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ 14 -16ರ ವರೆಗೆ ಅಸ್ಸಾಂ, ಮೇಘಾಲಯ, ಏಪ್ರಿಲ್ 15 ಮತ್ತು 16ರಂದು ಒಡಿಶಾ, ಏಪ್ರಿಲ್ 14 ಮತ್ತು 15ರಂದು ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆ ಇದೆ ಭಾರತೀಯ ಹವಾಮಾನ ಇಲಾಕೆ ಎಚ್ಚರಿಕೆ ನೀಡಿದೆ.
ಮುಂದಿನ 5 ದಿನಗಳಲ್ಲಿ ತಮಿಳುನಾಡಿನ ಪುದುಚೇರಿ, ಕಾರೈಕಲ್, ಕರ್ನಾಟಕದ ಹಲವೆಡೆ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಾಳಿ ವೇಗ ಗಂಟೆಗೆ 30-40 ಕಿಲೋ ಮೀಟರ್‌ವರೆಗೂ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ತಾಪಮಾನ ಹೆಚ್ಚಳ?: ಕೆಲವು ರಾಜ್ಯಗಳಲ್ಲಿ ಈಗಾಗಲೇ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಏಪ್ರಿಲ್ 14 ಮತ್ತು 15ರಂದು ಪಶ್ಚಿಮ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಸಿಲು ಹೆಚ್ಚಳ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೆ, ಏಪ್ರಿಲ್ 16ರಿಂದ 18ರ ವರೆಗೆ ಪಂಜಾಬ್ ಮತ್ತು ಹರಿಯಾಣ, ಏಪ್ರಿಲ್ 16ರಿಂದ 19ರ ವರೆಗೆ ಪೂರ್ವ ರಾಜಸ್ಥಾನದಲ್ಲೂ ತಾಪಮಾನದಲ್ಲಿ ಹೆಚ್ಚಾಳ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವಾಯುವ್ಯ ಭಾರತದಲ್ಲಿ ಮುಂದಿನ 5 ರಿಂದ 6ದಿನಗಳವರೆಗೂ ಗರಿಷ್ಠ ತಾಪಮಾನದಲ್ಲಿ 3-5°C ಏರಿಕೆಯಾಗುವ ಸಾಧ್ಯತೆಯಿದೆ. ದೇಶದ ಇತರ ಭಾಗಗಳಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳು ಆಗುವುದಿಲ್ಲ ಎಂದು ತಿಳಿಸಿದೆ.
ದೆಹಲಿ ಹವಾಮಾನ ವರದಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಷ್ಟು ದಿನ ಹಾಗಾಗ ಸಾಧರಣ ಮಳೆಯಾಗುತ್ತಿತ್ತು. ಆದರೆ ಇದೀಗ ಅದೇ ಆಡಿದ್ದೇ ಆಟ ಎಂಬಂತೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಭಾನುವಾರ, ಸಫ್ದರ್ಜಂಗ್‌ನಲ್ಲಿ ಗರಿಷ್ಠ ತಾಪಮಾನವು 36.6°C ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಮತ್ತು ಶನಿವಾರದ 35.2°Cಗಿಂತ ಹೆಚ್ಚಾಗಿದೆ. ಕನಿಷ್ಠ ತಾಪಮಾನವು 20.4°Cಗೆ ಏರಿಕೆಯಾಗಿದ್ದು, ಇದು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇನ್ನು ಮುಂದಿನ ಮೂರು ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications