IMD Weather Forecast: ಈ ಭಾಗಗಳಲ್ಲಿ ಮುಂದಿನ ಎರಡು ದಿನ ರಣಭೀಕರ ಮಳೆ ಮುನ್ಸೂಚನೆ: ಐಎಂಡಿ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಮುಂದಿನ ಎರಡು ದಿನ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳ ಕಾಲ ಹಲವೆಡೆ ಸಾಧಾರಣ ಮಳೆಯಾದ್ರೆ, ಇನ್ನೂ ಕೆಲವು ಭಾಗಗಳಲ್ಲಿ ರಣಭೀಕರ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ "ಮೋಂಥಾ" ಚಂಡಮಾರುತದ ವೇಳೆ ಭಾರೀ ಮಳೆ ಸುರಿದು ಹಲವೆಡೆ ಅವಾಂತರಗಳೇ ಸಂಭವಿಸಿವೆ.

ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ನವೆಂಬರ್ 6 ಗುರುವಾರ ದಕ್ಷಿಣ ಭಾರತದ ಹೆಚ್ಚಿನ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಈ ವಾರ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದ್ದು, ಇತರ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದ ಅಲ್ಲಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ತಮಿಳುನಾಡಿನ ಪುದುಚೇರಿ ಮತ್ತು ಕಾರೈಕ್ಕಲ್, ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ, ರಾಯಲಸೀಮಾ, ಕೇರಳದ ಹಲವೆಡೆ ವರ್ಷದ ಕೊನೆಯ ತಿಂಗಳುಗಳಲ್ಲಿ ಸಾಮಾನ್ಯವಾಗಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ತಮಿಳುನಾಡಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಮುನ್ಸೂಚನೆ ನೀಡಿದೆ.
ನವದೆಹಲಿ ಹವಾಮಾನ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಗುರುವಾರ ಬೆಳಗ್ಗೆ ಮಂಜು ಕವಿದ ವಾತಾವರಣ ಇತ್ತು. ಸಂಜೆಯ ವೇಳೆಗೆ ಗಾಳಿಯ ಗುಣಮಟ್ಟ ತುಂಬಾ ಕಳಪೆಯಿಂದ ಕೂಡಿರಲಿದೆ. ನವೆಂಬರ್ 8ರ ವರೆಗೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಗಾಳಿಯ ವೇಗ ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದ್ದು, ಮಧ್ಯಾಹ್ನ ವಾಯುವ್ಯ ದಿಕ್ಕಿನಿಂದ ಗಂಟೆಗೆ 15 ಕಿ.ಮೀ.ಗೆ ತಲುಪುವ ನಿರೀಕ್ಷೆಯಿದೆ ಮತ್ತು ನವೆಂಬರ್ 6ರಂದು ಸಂಜೆ ಮತ್ತು ರಾತ್ರಿ ಸಮಯದಲ್ಲಿ ಗಂಟೆಗೆ 10 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ. ಈ ನಡುವೆಯೇ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ ಎನ್ನಿವ ಮುನ್ಸೂಚನೆ ಇದೆ.
ಇನ್ನು ಇಂದು ಗುರುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 278 ಆಗಿತ್ತು ಎಂದು ವರದಿಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ದೇಶಾದ್ಯಂತ ಚಳಿ ಆವರಿಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications