IMD Weather Forecast: ಈ ಭಾಗಗಳಲ್ಲಿ ಮುಂದಿನ 5 ದಿನ ಗುಡುಗು ಸಹಿತ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಮುಂದಿನ ಐದು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳವರೆಗೆ ಹಲವೆಡೆ ಸಾಧಾರಣ ಮಳೆಯಾದರೆ, ಇನ್ನೂ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ.

ಮುಂದಿನ 2-3 ದಿನಗಳಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ರಾಜ್ಯಗಳ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಮಳೆ?: ಇದೀಗ ದಕ್ಷಿಣ ಭಾರತದ ಹಲವು ಭಾಗಗಳಲ್ಲೂ ಭಾರೀ ಮಳೆ ಮುಂದುವರೆದಿದೆ. ತಮಿಳುನಾಡು, ಕೇರಳ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 17ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 15ರ ವರೆಗೆ, ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ ಭಾಗಗಳಲ್ಲಿ ಅಕ್ಟೋಬರ್ 14ರ ವರೆಗೆ ಗುಡುಗು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 13ರ ವರೆಗೆ ಲಕ್ಷದ್ವೀಪ, ಒಡಿಶಾದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದೇ ವೇಳೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವದೆಹಲಿ ಹವಾಮಾನದ ವಿವರ: ರಾಷ್ಟ್ರ ರಾಜಧಾನಿ ನವದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಲ್ಲಿ ತಾಪಮಾನ ಕುಸಿತವಾಗಿದ್ದು, ತಂಪಾದ ಗಾಳಿ ಬೀಸುತ್ತಿದೆ. ಹಲವೆಡೆ ಆಗಾಗ ಸಾಧಾರಣ ಮಳೆಯಾಗುತ್ತಿದೆ. ಇನ್ನೂ ನೋಯ್ಡಾ, ಗಾಜಿಯಾಬಾದ್ ಮತ್ತು ಗುರ್‌ಗಾಂವ್‌ನಂತಹ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇಳಕೆಯಾಗುತ್ತಿದೆ. ಇನ್ನು ಈ ಭಾಗಗಳಲ್ಲಿ ದೀಪಾವಳಿ ಮುಗಿಯುವವರೆಗೂ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಆರ್ಭಟಿಸಿ ಅವಾಂತರಗಳನ್ನೇ ಸೃಷ್ಟಿಸಿದೆ. ಜೂನ್ ಆರಂಭದಲ್ಲೇ ಮೊದಲು ಕೇರಳಕ್ಕೆ ಎಂಟ್ರಿ ಕೊಟ್ಟ ಮುಂಗಾರು ಬಳಿಕ ಕರ್ನಾಟಕ ಸೇರಿ ಬಹುತೇಕ ರಾಜ್ಯಗಳನ್ನು ಆವರಿಸಿಬಿಟ್ಟಿತ್ತು. ಈ ವೇಳೆ ವಾಡಿಕೆಗೂ ಅಧಿಕವಾಗಿ ಮಳೆ ಸುರಿದ ಕಾರಣ ಹಲವೆಡೆ ಜಲಪ್ರಳಯದ ವಾತಾವರಣ ನಿರ್ಮಾಣವಾಗಿ ಪ್ರಾಣಹಾನಿಗಳು ಸಹ ಆಗಿವೆ. ಮತ್ತೊಂದೆಡೆ ಜಮೀನಯಗಳು, ಮನೆಗಳು ಜಲಾವೃತವಾಗಿ ಜನರು ಬೀದಿಗೆ ಬಂದ ಘಟನೆಗಳು ನಡೆದಿವೆ. ಇದೀಗ ಮುಂಗಾರು ಸಂಪೂರ್ಣವಾಗಿ ಮಾಯವಾಗಿದ್ದು, ಚಂಡಮಾರುತದ ಪರಿಣಾಮ ಹಲವು ರಾಜ್ಯಗಳ ಮೇಲೆ ಬೀರಿದೆ.












Click it and Unblock the Notifications