IMD Weather Forecast: ಈ ಭಾಗಗಳಲ್ಲಿ ಆಗಸ್ಟ್ 26ರವರೆಗೆ ಸುನಾಮಿ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇ ರಾಜ್ಯಗಳಲ್ಲಿ ಮುಂಗಾರು ಚುರುಕು ಪಡೆದಿದೆ. ಪರಿಣಾಮ ಹಲವೆಡೆ ಸಾಧಾರಣ ಮಳೆ ಮುಂದುವರೆದರೆ, ಇನ್ನೂ ಕೆಲವೆಡೆ ಅಬ್ಬರದ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಹಲವೆಡೆ ಈಗಾಗಲೇ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿದ ಘಟನಗಳು ನಡೆದಿವೆ. ಹಾಗೆಯೇ ಮುಂದಿನ ಹಲವು ದಿನಗಳಗಳ ಕೆಲವೆಡೆ ಸಾಧಾರಣ ಮಳೆಯಾದ್ರೆ, ಇನ್ನೂ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಉತ್ತರಾಖಂಡ ರಾಜ್ಯದ ಹಲವು ಭಾಗಗಳಲ್ಲಿ ಇಂದು (ಆಗಸ್ಟ್ 23) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆ ಹಿನ್ನೆಲೆ ಡೆಹ್ರಾಡೂನ್, ನೈನಿತಾಲ್, ಬಾಗೇಶ್ವರ ಮತ್ತು ಪಿಥೋರಗಢ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಮತ್ತೊಂದೆಡೆ ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ, ಪೌರಿ ಗರ್ವಾಲ್, ತೆಹ್ರಿ, ಅಲ್ಮೋರಾ ಮತ್ತು ಉಧಮ್ ಸಿಂಗ್ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಹಾಗೆಯೇ ಹಿಮಾಚಲ ಪ್ರದೇಶದ ಹಲವು ಭಾಗಗಲ್ಲಿ ಮುಂದಿನ ನಾಲ್ಲು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಆರಂಭವಾದಾಗಿನಿಂದ ಇಲ್ಲಿನ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರಾಣಹಾನಿಗಳು ಸಂಭವಿಸಿವೆ. ಪ್ರವಾಹದಿಂದ 74 ಸಾವು, ಮೇಘಸ್ಫೋಟದಿಂದ 39 ಸಾವು ಹಾಗೂ ಭೂಕುಸಿತದಿಂದ 74 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಸರ್ಕಾರದ ಪ್ರಕಾರ, ಮಳೆ ಸಂಬಂಧಿತ ಘಟನೆಗಳಿಂದಾಗಿ ಹಿಮಾಚಲ ಪ್ರದೇಶಕ್ಕೆ 2,326 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಇಲ್ಲಿನ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ನವದೆಹಲಿ ಹವಾಮಾನ ವಿವರ: ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 23 ರಿಂದ 31 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ. ಇನ್ನು ನವದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 0.1 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಆಗಸ್ಟ್ 23ರಿಂದ 26ರ ವರೆಗೆ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನುನ ರವಾನಿಸಿದೆ. ಇದೇ ವೇಳೆ ಹರಿಯಾಣದಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಅಂತಲೂ ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಗೆ ಇಬ್ಬರು ಬಲಿ: ರಾಜಸ್ಥಾನ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಆಗಸ್ಟ್ 23ರಿಂದ 26ರ ವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications