IMD Weather Forecast: ಕರ್ನಾಟಕ, ತಮಿಳುನಾಡು, ಕೇರಳ ಸೇರಿ 17 ರಾಜ್ಯಗಳಿಗೆ ಭಾರೀ ಮಳೆ ಮುನ್ನೆಚ್ಚರಿಕೆ
India Rain Alert: ದೇಶದ ವಿವಿಧ ಭಾಗಗಳಲ್ಲಿ ಬಿರುಗಾಳಿ ಬೀಸಲಿದೆ. ವಿವಿಧ ದಿಕ್ಕುಗಳಲ್ಲಿ ಬಿರುಗಾಳಿ, ನಿರ್ದಿಷ್ಟ ಪ್ರಮಾಣದಲ್ಲಿ ವಾತಾವರಣ ಬದಲಾಗುವ ಕಾರಣಕ್ಕೆ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೆಲವು ಉತ್ತರ ರಾಜ್ಯಗಳಿಗೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಸಹಿತ, ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಆಗಲಿದೆ. ಉತ್ತರ ಭಾರತದ ಭಾಗಗಳಲ್ಲಿ ಮುಂಗಾರು ಮಳೆ ಕೊನೆಗೊಳ್ಳುವ ಸನ್ನಿಹಿತದಲ್ಲಿದೆ. ಇನ್ನೂ ದಕ್ಷಿಣ ಕರಾವಳಿ ಪ್ರದೇಶಗಳು ಮತ್ತು ದ್ವೀಪ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಜ್ಞರು ಇಂದು ಮಂಗಳವಾರ (ಅಕ್ಟೋಬರ್ 20) ತಿಳಿಸಿದ್ದಾರೆ.

ದಕ್ಷಿಣ ರಾಜ್ಯಗಳು ಸೇರಿ 17 ರಾಜ್ಯಗಳಿಗೆ ಭಾರೀ ಮಳೆ!
ಐಎಂಡಿ ಪ್ರಕಾರ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಅಥವಾ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಪ್ರದೇಶದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೊಡಲಾಗಿದೆ. ಇನ್ನೂ ಉತ್ತರ ಪ್ರದೇಶ, ಬಿಹಾರ ಹಾಗೂ ದೆಹಲಿ ಸೇರಿದಂತೆ 17 ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಯೆಲ್ಲೋ-ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಿಮಪಾತದ ಪ್ರದೇಶಗಳಲ್ಲಿ ನಿರಂತರವಾಗಿ ಹಿಮ ಬೀಳಲಿದ್ದು, ನಾಗರಿಕರು ಅಗತ್ಯ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಬದಲಾಗಲಿರುವ ಹವಾಮಾನ, ವೈಪರೀತ್ಯಗಳ ತೀವ್ರತೆಯಿಂದಾಗಿ ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸಂಭವವಿದೆ. ಇನ್ನೂ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಮತ್ತು ರಾಯಲಸೀಮಾದಲ್ಲಿ ಅಕ್ಟೋಬರ್ 20 ರಿಂದ 25 ರವರೆಗೆ ಬಿರುಗಾಳಿ ಮಳೆ ಆಗಲಿದೆ.
ಭಾರೀ ಮಳೆಯ ರಾಜ್ಯಗಳು ಯಾವುವು?
ಪಂಜಾಬ್, ಉತ್ತರಾಖಂಡ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಕೇರಳ, ಒಡಿಶಾ, ಅಸ್ಸಾಂ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.
ದೆಹಲಿ: ಅಕ್ಟೋಬರ್‍ನಲ್ಲೇ ಅತೀ ಕನಿಷ್ಠ ತಾಪಮಾನ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ಸೋಮವಾರ ಬೆಳಗ್ಗೆ ದಾಖಲಾಗಿದೆ. ಇಲ್ಲಿನ ಸಫ್ದರ್ಜಂಗ್ ಹವಾಮಾನ ಕೇಂದ್ರದಲ್ಲಿ ತಾಪಮಾನವು 17.1 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಋತುವಿನ ಸರಾಸರಿಗಿಂತ 1.3 ಡಿಗ್ರಿ ಸೆಲ್ಸಿಯಸ್ ಕಡಿಮೆ ಎಂದು ಐಎಂಡಿ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ನಗರದ ಗಾಳಿಯ ಗುಣಮಟ್ಟ 'ಮಧ್ಯಮ' ವರ್ಗದಲ್ಲಿಯೇ ಉಳಿದಿದೆ. ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 21 ರ ನಂತರ ದೆಹಲಿ ಗಾಳಿ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ನೆನ್ನೆ ಗರಿಷ್ಠ ತಾಪಮಾನವು 31.7 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯದ ವಿವಿಧೆಡೆ ಅಕ್ಟೋಬರ್ 22ರ ಅವಧಿಯಲ್ಲಿ ಜೋರು ಮಳೆ ಆಗಬಹುದು. ದಕ್ಷಿಣ ಪರ್ಯಾಯ ದ್ವೀಪದ ಜೊತೆಗೆ ಒಡಿಶಾ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು, ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ.
ಮೀನುಗಾರರಿಗೆ ಎಚ್ಚರಿಕೆ
ಕೇರಳ, ಕರ್ನಾಟಕ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದ ಮೀನುಗಾರರು ಎಚ್ಚರವಹಿಸಬೇಕು. ಇದೇ ಅಕ್ಟೋಬರ್ 22 ಮತ್ತು 24ರ ನಡುವೆ ಬಿರುಗಾಳಿ ಮಳೆ ಕಾರಣಕ್ಕೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆ.ಎ. ಸೆಂಗೋಟ್ಟಯ್ಯನ್ ಅವರು ಭಾರೀ ಮಳೆಯನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಇಲ್ಲಿನ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಹಿನ್ನೆಲೆಯಲ್ಲಿ "ಆರೆಂಜ್ ಅಲರ್ಟ್" ನೀಡಲಾಗಿದೆ.


Click it and Unblock the Notifications
