IMD Weather Forecast: ದೇಶದ ಈ ಭಾಗಗಳಲ್ಲಿ ದಟ್ಟ ಮಂಜು, ಭೀಕರ ಚಳಿ ನಡುವೆ ಸಾಧಾರಣ ಮಳೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಹಾಗೆಯೇ ಮುಂದಿನ 5 ದಿನಗಳವರೆಗೂ ಹಲವು ಭಾಗಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗಲಿದ್ದು, ಈ ನಡುವೆಯೇ ಕೆಲವೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜನವರಿ 3ರಿಂದ 8ರ ವರೆಗೆ ಹಲವಾರು ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ತೀವ್ರ ಚಳಿ ಇರಲಿದೆ. ಅದರಲ್ಲೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟ ಮಂಜಿನ ಜೊತೆ ಭಾರೀ ಚಳಿಗಾಳಿ ಬೀಸಲಿದೆ. ಈ ನಡುವೆ ಕೆಲವೆಡೆ ಮಳೆಯೂ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಭೀಕರ ಚಳಿ ಮುಂದುವರೆಯಲಿದೆ: ಜನವರಿ 7ರ ವರೆಗೆ ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಬೆಳಗ್ಗೆ ಹಾಗೂ ರಾತ್ರಿ ವೇಳೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೂ ಜನವರಿ 5 ರಿಂದ 9ರ ವರೆಗೆ ಉತ್ತರ ಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ಸಾಧಾರಣ ಮಳೆ ಸಾಧ್ಯತೆ: ಜನವರಿ 6 ರವರೆಗೆ ಒಡಿಶಾ, ಜಮ್ಮು, ಉತ್ತರ ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ರಾಜಸ್ಥಾನ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್, ಅರುಣಾಚಲ ಪ್ರದೇಶ ಬಿಹಾರದಲ್ಲೂ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ದೆಹಲಿ ಹವಾಮಾನದ ವಿವರ: ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಗುಣಮಟ್ಟ ಕಳಪೆಯಾಗಿದೆ. ಜೊತೆಗೆ ಬೆಳಗ್ಗೆ ವೇಳೆ ದಟ್ಟ ಮಂಜು ಕಯುತ್ತಿದ್ದು, ಇದು ವಾಹನ ಸವಾರರಿಗೆ ಅಡಚಣೆ ಉಂಟುಮಾಡುತ್ತಿದೆ. ಅಲ್ಲದೆ, ಜನರನ್ನು ಉಸಿರುಗಟ್ಟುವಂತೆ ಮಾಡಿದೆ. ಮುಂದಿನ ಹಲವು ದಿನಗಳವರೆಗೆ ಇಲ್ಲಿ ಇದೇ ರೀತಿಯ ವಾತಾವಾರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜನವರಿ 3 ರ ಶನಿವಾರ ಉತ್ತರಾಖಂಡ ಮತ್ತು ಮೇಘಾಲಯದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಈಗಾಗಲೇ ಕಳಪೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ದೆಹಲಿಯಲ್ಲಿ AQI 222ಕ್ಕೆ ದಾಖಲಾಗಿದೆ.
ಜನರಿಗೆ ಸಲಹೆ ಏನು?: ಅಲ್ಲದೆ, ಜನವರಿ 5ರ ವರೆಗೆ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿ ಉಳಿಯುವ ಸಾಧ್ಯತೆಯಿದೆ. ಜೊತೆಗೆ, ಜನವರಿ 3 ಮತ್ತು 4 ರಂದು ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಆದ್ದರಿಂದ ಈ ಭಾಗಗಳ ಜನರು ತಮ್ಮ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಬೆಚ್ಚಗಿನ ಉಡುಪುಗಳನ್ನು ಧರಿಸಿ, ಬಿಸಿನೀರು ಬಳಸಿ. ಚಿಕ್ಕ ಮಕ್ಕಳನ್ನು ಬೆಳಗ್ಗೆ ಸಂಜೆ ವೇಳೆ ಮನೆಯಿಂದ ಹೊರಗಡೆ ಹೋಗದಂತೆ ತಡೆಯಿರಿ ಎಂದು ಸಲಹೆ ನೀಡಿದೆ. ಈಗಾಗಲೇ ಭಾರೀ ಚಳಿಯಿಂದ ಈ ಭಾಗಗಳ ಜನರು ತತ್ತರಿಸಿ ಹೋಗಿದ್ದಾರೆ. ಇನ್ನೂ ಚಳಿ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಮುಂದಿನ ದಿನಗಳಲ್ಲಿ ಇನ್ನೇನು ಕಾದಿದೆಯೋ ಎನ್ನುವ ಆತಂಕದಲ್ಲಿ ಈ ಭಾಗದ ಜನರಿದ್ದಾರೆ.












Click it and Unblock the Notifications