Imd Weather Forecast: ಚಂಡಮಾರುತ ಪ್ರಸರಣ ಪ್ರಭಾವ, ವಾಯುಭಾರ ಕುಸಿತ: ಈ ಭಾಗಗಳಲ್ಲಿ ಭಾರೀ ಮಳೆ
Imd Weather Forecast: ಚಂಡಮಾರುತ ಪ್ರಸರಣ ಪ್ರಭಾವದಿಂದ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಇನ್ನೂ ಮೂರರಿಂದ ಐದು ದಿನಗಳ ವರೆಗೆ ಕರ್ನಾಟಕವೂ ಸೇರಿದಂತೆ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಹಾಗೂ ಬಾಂಗ್ಲಾದೇಶದ ಪಕ್ಕದ ಪ್ರದೇಶಗಳು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯ ದಿಕ್ಕಿನತ್ತ ಚಲಿಸಿ, ವಾಯುಭಾರ ಕುಸಿತವಾಗಿ ತೀವ್ರಗೊಂಡಿದೆ.
ವಾಯುವ್ಯ ಮಧ್ಯಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದವರೆಗೆ ವ್ಯಾಪಿಸಿರುವ ಹಾಗೂ ಎತ್ತರ ಹೆಚ್ಚಾದಂತೆ ದಕ್ಷಿಣದತ್ತ ವಾಲಿರುವ ಮೇಲ್ಮಟ್ಟದ ಚಂಡಮಾರುತದ ಪರಿಚಲನೆ (Upper Air Cyclonic Circulation) ಮುಂದುವರಿದಿದೆ.

ಸಮುದ್ರ ಮಟ್ಟದಲ್ಲಿರುವ ಮಾನ್ಸೂನ್ ಟ್ರಫ್ ರೇಖೆಯು (Monsoon Trough) ಪ್ರಸ್ತುತ ಫಿರೋಜ್‌ಪುರ, ಮುಜಫರ್‌ನಗರ, ಬಾರಾಬಂಕಿ, ದೆಹಿ, ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಹಾಗೂ ಬಾಂಗ್ಲಾದೇಶದ ಪಕ್ಕದ ಪ್ರದೇಶಗಳು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಮೇಲಿರುವ ವಾಯುಭಾರ ಕುಸಿತದ ಕೇಂದ್ರದ ಮೂಲಕ ಹಾದುಹೋಗಿ, ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಇದರಿಂದ ದಕ್ಷಿಣ ಭಾರತ ಸೇರಿದಂತೆ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ.
ಮುಂದಿನ ಒಂದು ವಾರದ ವರೆಗೆ ವಿವಿಧ ಭಾಗಗಳಲ್ಲಿ ಭಾರೀ ಮಳೆ ಇರಲಿದೆ. ಉತ್ತರ, ಮಧ್ಯ ಮತ್ತು ಪಶ್ಚಿಮ ಭಾರತದ ಹಲವಾರು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಆಗಸ್ಟ್ 13 ರಿಂದ ಆಗಸ್ಟ್ 19 ರವರೆಗೆ ಸಕ್ರಿಯ ಮಾನ್ಸೂನ್ ಮುಂದುವರಿಯುವ ಸಾಧ್ಯತೆಯಿದೆ.
ದೆಹಲಿ - ಎನ್‌ಸಿಆರ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆ ಆಗಲಿದೆ. ದೆಹಲಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆಗಸ್ಟ್ 14 ಮತ್ತು 15 ರಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 17 ರಂದು ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Imd Weather Forecast: ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಮಳೆ ಮುನ್ಸೂಚನೆ
ಇನ್ನು ಆಗಸ್ಟ್ 14 ಮತ್ತು 15 ರಂದು ಪಂಜಾಬ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹರಿಯಾಣ ಮತ್ತು ಚಂಡೀಗಢದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 15 ಮತ್ತು 16 ರಂದು ಉತ್ತರ ಪ್ರದೇಶದಲ್ಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್ ಹಾಗೂ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸಹ ಮಳೆ ಆಗುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲೂ ಮಳೆ
ಇನ್ನು ಮುಂದಿನ ಒಂದು ವಾರದ ವರೆಗೆ ಕರ್ನಾಟಕ - ಕೇರಳ ಸೇರಿದಂತೆ ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.


Click it and Unblock the Notifications
