IIT ಮದ್ರಾಸ್‌ನಲ್ಲಿ ಕೇವಲ ಎಂಜಿನಿಯರ್‌ಗಳಲ್ಲ, ಇನ್ಮುಂದೆ ಡಾಕ್ಟರ್‌ಗಳೂ ಆಗ್ತಾರೆ
ಚೆನ್ನೈ: ಕಳೆದ ಸುಮಾರು 70 ವರ್ಷಗಳಿಂದ ಭಾರತದಲ್ಲಿ ಐಐಟಿ ಮದ್ರಾಸ್ ಎಂದರೆ ತಕ್ಷಣ ನೆನಪಾಗುವುದು ಎಂಜಿನಿಯರಿಂಗ್. ಯಂತ್ರಗಳನ್ನ ನಿರ್ಮಿಸುವ, ಕೋಡಿಂಗ್ ಮಾಡುವ ಹಾಗೂ ದೇಶದ ಅತ್ಯಾಧುನಿಕ ತಂತ್ರಜ್ಞಾನಗಳನ್ನ ವಿನ್ಯಾಸಗೊಳಿಸುವ ದಿಗ್ಗಜರನ್ನ ಸೃಷ್ಟಿಸಿದ ಈ ಪ್ರತಿಷ್ಠಿತ ಸಂಸ್ಥೆ, ಇದೀಗ ಹೊಸದೊಂದು ಹೆಜ್ಜೆ ಇಡುತ್ತಿದೆ.
ಭವಿಷ್ಯದಲ್ಲಿ ಐಐಟಿ ಕ್ಯಾಂಪಸ್‌ನಿಂದ ಕೇವಲ ತಂತ್ರಜ್ಞರು ಮಾತ್ರವಲ್ಲ, ಅತ್ಯುತ್ತಮ ವೈದ್ಯರೂ ಕೂಡ ಹೊರಹೊಮ್ಮಲಿದ್ದಾರೆ. ಹೌದು, ಐಐಟಿ ಮದ್ರಾಸ್ ತನ್ನದೇ ಆದ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅನ್ನು ಸ್ಥಾಪಿಸಲು ಮುಂದಾಗಿದ್ದು, ಎಂಬಿಬಿಎಸ್ , ಎಂಡಿ ಹಾಗೂ ಪಿಎಚ್‌ಡಿ ಕೋರ್ಸ್‌ಗಳನ್ನ ಆರಂಭಿಸಲು ಸಕಲ ಸಿದ್ಧತೆ ನಡೆಸುತ್ತಿದೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ ಕಾಮಕೋಟಿ, "ಐಐಟಿ ಮದ್ರಾಸ್ ಖಂಡಿತವಾಗಿಯೂ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅನ್ನು ಪ್ರಾರಂಭಿಸಲಿದೆ. ನಾವು ವೈದ್ಯಕೀಯ ಪದವಿಗಳನ್ನ ನೀಡಲು ಬಯಸುತ್ತೇವೆ. ಇದು ನಮ್ಮ ಸಂಸ್ಥೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಐಟಿ ಮದ್ರಾಸ್ ವೈದ್ಯಕೀಯ ಕ್ಷೇತ್ರಕ್ಕೆ ಏಕಾಏಕಿ ಹೆಜ್ಜೆ ಇಡುತ್ತಿಲ್ಲ. ಬದಲಾಗಿ 2023ರ ಮೇ ತಿಂಗಳಲ್ಲೇ ಭಾರತದಲ್ಲಿಯೇ ಮೊದಲ ಬಾರಿಗೆ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವನ್ನ ಆರಂಭಿಸಿದೆ. ಇಲ್ಲಿ ಎಂಜಿನಿಯರಿಂಗ್ ಹಾಗೂ ಜೀವಶಾಸ್ತ್ರದ ಜ್ಞಾನವನ್ನು ಒಗ್ಗೂಡಿಸಿ 4 ವರ್ಷಗಳ ಪದವಿ ನೀಡಲಾಗುತ್ತಿದೆ.
ಆದರೆ, ಈ ವಿಭಾಗವು ಸ್ಕ್ಯಾನರ್‌ಗಳು, ಇಂಪ್ಲಾಂಟ್‌ಗಳು ಮತ್ತು ವೈದ್ಯಕೀಯ ಸಾಫ್ಟ್‌ವೇರ್‌ಗಳನ್ನ ವಿನ್ಯಾಸಗೊಳಿಸುವ ತಜ್ಞರನ್ನು ಸೃಷ್ಟಿಸುತ್ತದೆಯೇ ಹೊರತು, ರೋಗಿಗಳಿಗೆ ನೇರವಾಗಿ ಚಿಕಿತ್ಸೆ ನೀಡುವ ವೈದ್ಯರನ್ನಲ್ಲ. ಇದೀಗ ಹೊಸದಾಗಿ ಸ್ಥಾಪನೆಯಾಗಲಿರುವ ವೈದ್ಯಕೀಯ ಶಾಲೆಯು ಚಿಕಿತ್ಸೆ ನೀಡುವ ತಜ್ಞ ವೈದ್ಯರನ್ನ ರೂಪಿಸುವ ಗುರಿ ಹೊಂದಿದೆ.
ಎಂಜಿನಿಯರಿಂಗ್ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಏಕೆ?
ತಂತ್ರಜ್ಞಾನ ಸಂಸ್ಥೆಯೊಂದು ವೈದ್ಯರನ್ನ ಸೃಷ್ಟಿಸಲು ಮುಂದಾಗಿರುವುದರ ಹಿಂದೆ ಬಲವಾದ ಕಾರಣವಿದೆ. "ಯಾವುದೇ ತಂತ್ರಜ್ಞಾನ ಸಂಸ್ಥೆ ವೈದ್ಯಕೀಯ ಶಾಲೆಯನ್ನ ಪ್ರಾರಂಭಿಸಲೇಬೇಕು. ಇಲ್ಲವಾದರೆ, ಒಂದು ದೇಶವಾಗಿ ನಾವು ಜಾಗತಿಕ ವೈದ್ಯಕೀಯ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಿಲ್ಲ" ಎಂದು ಪ್ರೊ. ಕಾಮಕೋಟಿ ಹೇಳುತ್ತಾರೆ.
ಕೋವಿಡ್-19 ಸಾಂಕ್ರಾಮಿಕವು ಆಧುನಿಕ ವೈದ್ಯಕೀಯ ಕ್ಷೇತ್ರವು ತಂತ್ರಜ್ಞಾನವನ್ನ ಎಷ್ಟು ಅವಲಂಬಿಸಿದೆ ಎಂಬುದನ್ನು ಜಗತ್ತಿಗೆ ಎತ್ತಿತೋರಿಸಿದೆ. ಭಾರತವು ಇಂದಿಗೂ ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳನ್ನ ಅವಲಂಬಿಸಿದೆ. ಈ ಪರಾವಲಂಬನೆ ತಪ್ಪಿಸಲು ಮತ್ತು ನಮ್ಮದೇ ದೇಶದಲ್ಲಿ ಆಧುನಿಕ ಉಪಕರಣಗಳನ್ನ ಆವಿಷ್ಕರಿಸಲು, ವೈದ್ಯರು ಮತ್ತು ಎಂಜಿನಿಯರ್‌ಗಳು ಒಂದೇ ಸೂರಿನಡಿ ರೂಪುಗೊಳ್ಳಬೇಕು ಎನ್ನುವುದು ಐಐಟಿ ಮದ್ರಾಸ್‌ನ ಆಶಯವಾಗಿದೆ.
ಐಐಟಿ ಮದ್ರಾಸ್ ವೈದ್ಯಕೀಯ ಕಾಲೇಜು ಆರಂಭಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನ ರಾಷ್ಟ್ರೀಯ ವೈದ್ಯಕೀಯ ಆಯೋಗವು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಯಾವುದೇ ಸಂಸ್ಥೆ ಎಂಬಿಬಿಎಸ್ ಪದವಿ ನೀಡಬೇಕಾದರೆ ಎನ್‌ಎಂಸಿ ಅನುಮತಿ ಕಡ್ಡಾಯ. ಜೊತೆಗೆ, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಪಡೆಯಲು ಅನುಕೂಲವಾಗುವಂತೆ ಸಂಸ್ಥೆಯು ತನ್ನದೇ ಆದ ಸುಸಜ್ಜಿತ ಬೋಧನಾ ಆಸ್ಪತ್ರೆಯನ್ನು ಹೊಂದಿರಬೇಕಾಗುತ್ತದೆ.
ಈಗಾಗಲೇ ಐಐಟಿ ಖರಗ್‌ಪುರವು ತನ್ನದೇ ಆದ ಆಸ್ಪತ್ರೆಯನ್ನು ನಿರ್ಮಿಸಿ ಸ್ನಾತಕೋತ್ತರ ಎಂಡಿ ಕೋರ್ಸ್ ಆರಂಭಿಸಲು ಅನುಮತಿ ಪಡೆದಿದೆ. ಆದರೆ ಅದರ ಎಂಬಿಬಿಎಸ್ ಯೋಜನೆ ಇನ್ನೂ ಮೂಲಸೌಕರ್ಯಗಳ ಹಂತದಲ್ಲೇ ಇದೆ. ಇದೀಗ ಐಐಟಿ ಮದ್ರಾಸ್ ಕೂಡ ಇದೇ ಸವಾಲಿನ ಹಾದಿಯಲ್ಲಿ ಸಾಗಬೇಕಿದೆ. ಮೊದಲು ಆಸ್ಪತ್ರೆ ನಿರ್ಮಾಣ, ಆ ಬಳಿಕ ಆಯೋಗದ ಅನುಮತಿ ಪಡೆಯಬೇಕಿದೆ.
ಆದರೆ ಐಐಟಿ ಮದ್ರಾಸ್‌ಗೆ ಈಗಾಗಲೇ ಆರೋಗ್ಯ ತಂತ್ರಜ್ಞಾನ ಕೇಂದ್ರ ಮತ್ತು ಬ್ರೈನ್-ಮ್ಯಾಪಿಂಗ್ ಸಂಸ್ಥೆಯಂತಹ ಅತ್ಯಾಧುನಿಕ ಸೌಲಭ್ಯಗಳ ಬೆಂಬಲವಿದೆ. ಎಂಜಿನಿಯರ್‌ಗಳು ಮತ್ತು ಕ್ಲಿನಿಕಲ್ ವೈದ್ಯರು ಈಗಾಗಲೇ ನಗರದ ಪ್ರಮುಖ ಆಸ್ಪತ್ರೆಗಳ ಸಹಯೋಗದೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Click it and Unblock the Notifications
