8 ಗಂಟೆ ಇಂಟೆಲ್‌ನಲ್ಲಿ ಕೆಲಸ, ಬಿಡುವಿನಲ್ಲಿ ಓದು: ಇಂದು ಇಸ್ರೋ ವಿಜ್ಞಾನಿಯಾಗಿ ಸಾಧನೆ ಮಾಡಿದ ಐಐಟಿ ದೆಹಲಿ ಎಂಜಿನಿಯರ್
ನವದೆಹಲಿ: ಎಂಜಿನಿಯರಿಂಗ್ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇಂಟೆಲ್, ಗೂಗಲ್‌ನಂತಹ ಜಾಗತಿಕ ಟೆಕ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಕನಸು. ಕೈತುಂಬಾ ಸಂಬಳ, ಉದ್ಯೋಗ ಭದ್ರತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಭವಿಷ್ಯವೇ ಬದಲಾಯಿತು ಎಂದು ಭಾವಿಸುವವರೇ ಹೆಚ್ಚು. ಅಂತಹದ್ದರಲ್ಲಿ, ರಾಜಸ್ಥಾನದ ಯುವಕ ಹೇಮಂತ್ ಕುಮಾರ್ ಭುಕರ್ ಅವರು ಈ ಆರಾಮದಾಯಕ ಬದುಕನ್ನ ಬಿಟ್ಟು, ಸ್ವಲ್ಪ ಕಷ್ಟದ ದಾರಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಇಂಟೆಲ್ ಕಂಪನಿಯ ಕೆಲಸದ ಜೊತೆಗೆ ದಿನವಿಡೀ ಕಷ್ಟಪಟ್ಟು ಓದಿ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಐಐಟಿ ದೆಹಲಿ ಎಂಜಿನಿಯರ್ ಟು ಇಂಟೆಲ್ ಉದ್ಯೋಗಿ
ರಾಜಸ್ಥಾನದ ಸಿಕರ್ ಜಿಲ್ಲೆಯ ಗೋತ್ರಾ ಭುಕ್ರಾನ್ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೇಮಂತ್ ಕುಮಾರ್ , ಆರಂಭದಿಂದಲೂ ಓದಿನಲ್ಲಿ ಮುಂದಿದ್ದರು. ತಮ್ಮ ಶಾಲಾ ಶಿಕ್ಷಣದ ನಂತರ ಪ್ರತಿಷ್ಠಿತ ಐಐಟಿ ದೆಹಲಿಗೆ ಸೇರಿದ ಅವರು , ಅಲ್ಲಿ ಬಿ.ಟೆಕ್ ಮತ್ತು ಸೆಮಿಕಂಡಕ್ಟರ್ ವಿಭಾಗದಲ್ಲಿ ಎಂ.ಟೆಕ್ ಪದವಿಗಳನ್ನ ಮುಗಿಸಿದರು. ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆಯೇ ಅವರಿಗೆ ವಿಶ್ವದ ಅಗ್ರಗಣ್ಯ ಸೆಮಿಕಂಡಕ್ಟರ್ ಕಂಪನಿಯಾದ ಇಂಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಂತೆ ಮಾಡಿತು.
ಇಂಟೆಲ್‌ನಲ್ಲಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸದಲ್ಲಿ ಡಿಸೈನ್ ಎಂಜಿನಿಯರ್ ಆಗಿ ಸುಮಾರು ಮೂರು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದರು. ಕಾರ್ಪೊರೇಟ್ ಜಗತ್ತಿನಲ್ಲಿ ಅವರು ಈಗಾಗಲೇ ಎಲ್ಲವನ್ನೂ ಸಾಧಿಸಿದ್ದರು, ಆದರೆ ಅವರ ಮನಸ್ಸು ಸಂಶೋಧನೆ ಮತ್ತು ಭಾರತದ ಬಾಹ್ಯಾಕಾಶದೆಡೆಗೆ ವಾಲುತ್ತಿತ್ತು.
ಇಂಟೆಲ್ ಉದ್ಯೋಗದ ಜೊತೆಗೆ ಇಸ್ರೋ ನೇಮಕಾತಿ ಪರೀಕ್ಷೆ ಸಿದ್ಧತೆ
ಪೂರ್ಣಾವಧಿ ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದು ನಿಜಕ್ಕೂ ಸವಾಲಿನ ಕೆಲಸ. ಇತರೆ ಅಭ್ಯರ್ಥಿಗಳಂತೆ ಹೇಮಂತ್ ಅವರಿಗೆ ದಿನವಿಡೀ ಓದಲು ಸಮಯವಿರಲಿಲ್ಲ. ಇಂಟೆಲ್‌ನಲ್ಲಿ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಅವರು, ಅದಕ್ಕಾಗಿ ಯಾವುದೇ ರಜೆಗಳನ್ನ ಸಹ ಪಡೆದಿರಲಿಲ್ಲ.
ಬದಲಾಗಿ, ಬೆಳಗ್ಗಿನ ಜಾವ, ತಡರಾತ್ರಿ ಮತ್ತು ವಾರಾಂತ್ಯದ ರಜೆಗಳನ್ನ ತಮ್ಮ ಅಧ್ಯಯನಕ್ಕಾಗಿ ಮೀಸಲಿಟ್ಟರು. ಮೊದಲಿನಿಂದಲೂ ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದರಿಂದ, ಅವರು ಅಧ್ಯಯನ ಆರಂಭಿಸುವ ಬದಲು ತಾವು ಕಲಿತಿದ್ದ ತಾಂತ್ರಿಕ ಜ್ಞಾನವನ್ನೇ ಪರೀಕ್ಷೆಗೆ ಅಸ್ತ್ರವನ್ನಾಗಿ ಬಳಸಿಕೊಂಡರು. ಇದು ಅವರ ಶ್ರಮವನ್ನು ಮತ್ತಷ್ಟು ಸುಲಭಗೊಳಿಸಿತು.
ಇಸ್ರೋ AIR 7 ಸಾಧನೆ
ಹೇಮಂತ್ ಅವರ ಛಲ ಮತ್ತು ನಿರಂತರ ಅಧ್ಯಯನ ಕೊನೆಗೂ ಫಲ ನೀಡಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಇಸ್ರೋದ 'ಸೈಂಟಿಸ್ಟ್ ಎ' ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ 7ನೇ ರ‍್ಯಾಂಕ್ ಗಳಿಸುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ.
" ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ತಾಳ್ಮೆ, ಶಿಸ್ತು ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗುವುದು ಅತಿಮುಖ್ಯ " ಎಂಬುದು ಹೇಮಂತ್ ಕುಮಾರ್ ಅವರ ಮಾತು.
ಹೇಮಂತ್ ಅವರ ತಂದೆ ಶಿಶುಪಾಲ್ ಭುಕರ್ ಅವರು ಬಿಕಾನೇರ್‌ನ ಲೋಕೋಪಯೋಗಿ ಇಲಾಖೆಯಲ್ಲಿ (PWD) ಹೆಚ್ಚುವರಿ ಮುಖ್ಯ ಎಂಜಿನಿಯರ್ ಆಗಿದ್ದು, ತಾಯಿ ಸುಶೀಲಾ ಗೃಹಿಣಿಯಾಗಿದ್ದಾರೆ. ಮಗನ ಈ ಸಾಧನೆ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಗ್ರಾಮಕ್ಕೆ ಹಾಗೂ ಗ್ರಾಮೀಣ ಭಾಗದ ಲಕ್ಷಾಂತರ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ.


Click it and Unblock the Notifications
