'ಕಾನೂನಿನ ಚೌಕಟ್ಟಿಗೆ ಟ್ವಿಟ್ಟರ್, ಫೇಸ್ ಬುಕ್'
ನವದೆಹಲಿ, ನ.24: ಸಾಮಾಜಿಕ ಜಾಲ ತಾಣಗಳಿಗೆ ಮೂಗುದಾರ ಹಾಕಲು ಯುಪಿಎ ಸರ್ಕಾರ ವಿವಿಧ ರೀತಿಯಲ್ಲಿ ಯತ್ನಿಸಿ ವಿಫಲವಾದ ಬೆನ್ನಲೇ ಸಾಮಾಜಿಕ ಜಾಲ ತಾಣಗಳನ್ನು ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ತರುವಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಿಂದ ವಿದೇಶಿ ತಜ್ಞರಿಗೆ, ಸಾಮಾಜ ಘಾತುಕರಿಗೆ ಮಾಹಿತಿ ಸೋರಿಕೆಯಾಗುತ್ತಿದೆ. ಭಾರತೀಯ ಕಾನೂನಿನ ಎಲ್ಲೆಯೊಳಗೆ ತರುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಂಕಿರಣದಲ್ಲಿ ಗುಪ್ತಚರ ಇಲಾಖೆಯ ನಿರ್ದೇಶಕ ಆಸಿಫ್ ಇಬ್ರಾಹಿಂ ಅವರು ಹೇಳಿದ್ದಾರೆ.
'ಸಾಮಾಜಿಕ ಜಾಲತಾಣಗಳ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸಲು ವಿದೇಶಗಳಲ್ಲಿ ತಮ್ಮದೇ ಕಾನೂನು ಬಳಸಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಭಾರತದಲ್ಲಿ ಜಾಲತಾಣಗಳು ಈ ನೆಲದ ಕಾನೂನಿನ ಕೈ ಹಿಡಿತಕ್ಕೆ ಸಿಗುತ್ತಿಲ್ಲ. ಜಾಲ ತಾಣಗಳು ಒದಗಿಸುವ, ಪ್ರಸಾರ ಮಾಡುವ ಮಾಹಿತಿ ಮೇಲೆ ಹತೋಟಿ ಸಾಧಿಸಲು ತಂತ್ರಜ್ಞಾನ ಹಾಗೂ ಪ್ರಕ್ರಿಯಾತ್ಮಕ ನಿರ್ಬಂಧಗಳಿವೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ತತ್ಪರವಾಗಬೇಕು, ಆದಷ್ಟು ಬೇಗ ತಾಣಗಳ ಮೇಲೆ ನಿಯಂತ್ರಣ ಹೊಂದಬೇಕು ' ಎಂದು ಇಬ್ರಾಹಿಂ ಆಗ್ರಹಿಸಿದ್ದಾರೆ.

ಜಾಲತಾಣಗಳಿಗೆ ಕಾನೂನಿನ ಮೂಲಕ ಕಡಿವಾಣ ಹಾಕುವುದು ಸಾಧ್ಯವಾದರೆ ಸೈಬರ್ ಅಪರಾಧಗಳು ನಿಯಂತ್ರಣಕ್ಕೆ ಬರುತ್ತವೆ. ಕೋಮು ಭಾವನೆಗಳನ್ನು ಕೆರಳಿಸುವ, ಧಾರ್ಮಿಕ ಸಂಘಟನೆಗಳನ್ನು ಎತ್ತಿ ಕಟ್ಟುವಂಥ ಮತ್ತು ನಿರ್ದಿಷ್ಟ ಸಮುದಾಯಕ್ಕೆ ಬೆದರಿಕೆ ಒಡ್ಡುವಂಥ ದ್ವೇಷಪೂರಿತ ಲೇಖನ, ಮಾಹಿತಿಗಳ ಪ್ರಸರಣ ಮೇಲೆ ಹತೋಟಿ ಸಾಧಿಸಲು ಅನುವಾಗುತ್ತದೆ. ಭಾರತೀಯ ಐಟಿ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಈ ತಾಣಗಳ ಮೇಲೆ ಇನ್ನಷ್ಟು ನಿಗಾವಹಿಸುವುದು ಅನಿವಾರ್ಯ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
ಆಯೋಗದ ಕಣ್ಣು: ಮುಂಬರುವ ಅಸೆಂಬ್ಲಿ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಭಾರಿ ಭದ್ರತೆ ಹಾಗೂ ಪಾರದರ್ಶಕ ಕ್ರಮಗಳನ್ನು ಚುನಾವಣೆ ಆಯೋಗ ಪ್ರಯೋಗಿಸುತ್ತಿದ್ದು, ಮೊದಲ ಹಂತದಲ್ಲಿ ಪ್ರಮುಖ ರಾಜಕಾರಣಿಗಳ ಟ್ವಿಟ್ಟರ್, ವೆಬ್ ತಾಣಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ.
ಆದರೆ, ಸದ್ಯಕ್ಕೆ ರಾಜಕೀಯ ಪಕ್ಷ ಹಾಗೂ ಮುಖಂಡರ ಫೇಸ್ ಬುಕ್ ಖಾತೆಗಳು ಸೇಫ್ ಆಗಿದೆ. ಈ ಬಗ್ಗೆ ಆಯೋಗ ಯಾವುದೇ ನಿರ್ದೇಶನ ನೀಡಿಲ್ಲ. ಬೇರೆ ಸಾಮಾಜಿಕ ಜಾಲ ತಾಣಗಳಿಗೆ ಹೋಲಿಸಿದರೆ ಫೇಸ್ ಬುಕ್ ನಲ್ಲಿ ಅಧಿಕೃತ ಖಾತೆಗಳು ಹುಡುಕುವುದು ಸ್ವಲ್ಪ ಕಷ್ಟಕರ ಎನ್ನಲಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ 18ಕ್ಕೂ ಅಧಿಕ ರಾಜಕಾರಣಿಗಳ ಟ್ವೀಟ್ ಖಾತೆ ಸ್ಕ್ಯಾನ್ ಆಗುತ್ತಿದೆ. ಆರು ಪ್ರಮುಖ ರಾಜಕೀಯ ಪಕ್ಷಗಳ ಮೇಲೆ ಆಯೋಗ ಕಣ್ಣಿಟ್ಟಿದೆ.(ಪಿಟಿಐ)











Click it and Unblock the Notifications