Suhas Shetty: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ NIA ತನಿಖೆಗೆ: ಕೇಂದ್ರ ಆದೇಶ
ನವದೆಹಲಿ, ಜೂನ್ 08: ಮಂಗಳೂರು ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ ಎಂದು ANI ವರದಿ ಮಾಡಿದೆ. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಜ್ಯ ಗೃಹಸಚಿವಾಲಯ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕ್ಕೆ ವಹಿಸಿ ಆದೇಶ ಹೊರಡಿಸಿದೆ.
ಮೇ.01 ರಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಪೊಲೀಸರು ಈವರೆಗೆ 11 ಜನರನ್ನು ಬಂಧಿಸಿದ್ದಾರೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತ್ತು.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ರಾಜ್ಯಪಾಲರಿಗೆ ನಾಲ್ಕು ಪುಟಗಳ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಈ ಪ್ರಕರಣದ ತನಿಖೆಯನ್ನು NIA ಗೆ ನೀಡುವಂತೆ ಸುಹಾಸ್ ಶೆಟ್ಡಿ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಇದೀಗ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು, ಕರಾವಳಿ ಜನತೆಯ ಮನವಿಗೆ ಸ್ಪಂದಿಸಿ ನಮ್ಮ ಕೇಂದ್ರ ಸರ್ಕಾರ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿರುವ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.
ಕರಾವಳಿಯಲ್ಲಿ ಹಿಂದೂ ಸಮುದಾಯ ಆತಂಕ ಪಡುವ ಪರಿಸ್ಥಿತಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಭೀಕರವಾಗಿ ನಡು ರಸ್ತೆಯಲ್ಲಿ ಸುಹಾಸ್ ಕೊಲೆ ನಡೆದಿದೆ, ಈ ಪ್ರಕರಣದ ತನಿಖೆಯ ಹಾದಿ ಕಾಂಗ್ರೆಸ್ ಸರ್ಕಾರದ ಆಡಳಿತದ ನೆರಳಿನಲ್ಲಿ ದಿಕ್ಕು ತಪ್ಪುತ್ತಿದ್ದ ಪರಿ ಹಾಗೂ ನ್ಯಾಯದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರ ನಿರೀಕ್ಷೆ ಕುಸಿಯುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎನ್ಐಎ ಗೆ ವಹಿಸಿರುವ ಕ್ರಮ ಕೊಲೆಗಡುಕರಿಗೆ ಶಿಕ್ಷೆಯಾಗುವ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತರ ಬಯಲು ಮಾಡುವ ಭರವಸೆ ಹುಟ್ಟಿಸಿದೆ.
ಕೋಮು ನಿಗ್ರಹ ದಳದ ಮೂಲಕ ಹಿಂದೂ ಕಾರ್ಯಕರ್ತರನ್ನಷ್ಟೇ ಟಾರ್ಗೆಟ್ ಮಾಡಿ ಕರಾವಳಿ ಪ್ರದೇಶದಲ್ಲಿ ಹಿಂದೂ ಸಮಾಜದ ಯುವಕರ ಭವಿಷ್ಯವನ್ನು ಮುಸುಕಾಗಿಸುವ ಮುಸ್ಲಿಂ ಓಲೈಕೆಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದ್ದು ಈ ಸಂಬಂಧ ಬಿಜೆಪಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಬಿ ವೈ ವಿಜಯೇಂದ್ರ ಹೇಳಿದರು.












Click it and Unblock the Notifications