ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸಬೇಕಾಗಿಲ್ಲ: ಕಾಶ್ಮೀರದ 12 ನೇ ತರಗತಿ ಟಾಪರ್
ನವದೆಹಲಿ, ಫೆಬ್ರವರಿ 13: ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್‌ನ 12 ನೇ ತರಗತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕಾಶ್ಮೀರಿ ವಿದ್ಯಾರ್ಥಿನಿ ಅರೋಸಾ ಪರ್ವೈಜ್ ಹಿಜಾಬ್ ಧರಿಸದ ಕಾರಣಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಈ ಟ್ರೋಲ್‌ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ಕಾಶ್ಮೀರದ 12 ನೇ ತರಗತಿ ಟಾಪರ್ ಅರೋಸಾ ಪರ್ವೈಜ್, "ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ," ಎಂದು ತಿಳಿಸಿದ್ದಾರೆ.
ಫೆಬ್ರವರಿ 8, 2022 ರಂದು ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್‌ನ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅರೋಸಾ ಪರ್ವೈಜ್ 500 ಅಂಕಗಳಲ್ಲಿ 499 ಅಂಕಗಳನ್ನು ಗಳಿಸುವ ಮೂಲಕ ಶೇಕಡ 99.8 ರಷ್ಟು ದರ್ಜೆಯನ್ನು ಪಡೆದು ಟಾಪರ್ ಆಗಿದ್ದಾರೆ.
ವಿದ್ಯಾರ್ಥಿನಿ ಅರೋಸಾ ಪರ್ವೈಜ್ ಟಾಪರ್ ಎಂದು ಪ್ರಕಟವಾದ ಬಳಿಕ ಹಲವಾರು ಸುದ್ದಿಗಳನ್ನು ಪ್ರಕಟ ಮಾಡಿದ ಮಾಧ್ಯಮಗಳು ಅರೋಸಾ ಪರ್ವೈಜ್‌ರ ಸಂದರ್ಶನವನ್ನು ಕೂಡಾ ಮಾಡಿದ್ದಾರೆ. ಈಗ ಈ ಹಿಜಾಬ್ ವಿವಾದದ ನಡುವೆ ಆಕೆ ಹಿಜಾಬ್ ಧರಿಸದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಆಕೆ ಹಿಜಾಬ್ ಧರಿಸಿಲ್ಲವೆಂದು ಕೆಲವರು ದೂಷಿಸಿದ್ದಾರೆ. ಇನ್ನು ಕೆಲವರು ಆಕೆಯ ಪರವಾಗಿ ಮಾತನಾಡಿದ್ದಾರೆ.

ಹಿಜಾಬ್ ಧರಿಸದ್ದಕ್ಕೆ ಅತ್ಯಾಚಾರ, ಕೊಲೆ ಬೆದರಿಕೆ!
ಅರೋಸಾ ಪರ್ವೈಜ್ ಹಿಜಾಬ್ ಧರಿಸದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಗೆ ಕೆಲವರು ಅತ್ಯಾಚಾರ, ಕೊಲೆ ಬೆದರಿಕೆಯನ್ನು ಕೂಡಾ ಹಾಕಿದ್ದಾರೆ. ಆಕೆಗೆ ಇಸ್ಲಾಮಿನ ಪಾಠಗಳನ್ನು ಕಲಿಸಬೇಕು ಎಂದು ಹೇಳುತ್ತಾ, ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲು ಏರಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಅರೋಸಾ ಪರ್ವೈಜ್ ಹೇಳುವುದು ಏನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರೋಸಾ ಪರ್ವೈಜ್, "ಈ ಕಾಮೆಂಟ್‌ಗಳು ನನಗೆ ಅಪ್ರಸ್ತುತವಾದದ್ದು. ಆದರೆ ಅವರು ನನ್ನ ಹೆತ್ತವರ ಮೇಲೆಯೂ ಟ್ರೋಲ್ ಮಾಡಿದ್ದಾರೆ. . ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ತಮ್ಮ ಧರ್ಮದ ಮೇಲೆ ನಾವು ಎಷ್ಟು ನಂಬಿಕೆ ಇರಿಸಿದ್ದೇವೆ ಎಂದು ಸಾಬೀತುಪಡಿಸುವ ಮಾನದಂಡವಲ್ಲ. ನಂಬಿಕೆಯನ್ನು ವ್ಯಾಖ್ಯಾನ ಮಾಡುವ ಅಸ್ತ್ರವೂ ಅಲ್ಲ. ಬಹುಶಃ, ನಾನು ಅವರಿಗಿಂತ ಹೆಚ್ಚು ಅಲ್ಲಾನನ್ನು ಪ್ರೀತಿಸುತ್ತೇನೆ. ನಾನು ಹೃದಯದಿಂದ ಮುಸಲ್ಮಾನನಾಗಿದ್ದೇನೆ, ಹಿಜಾಬ್‌ನಿಂದಲ್ಲ," ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
|
ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ
ಈ ಸುದ್ದಿಯನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಹಲವಾರು ಮಂದಿ ಆಕೆಯ ಪರವಾಗಿ ಹಾಗೂ ವಿರೋಧವಾಗಿ ವಾಗ್ದಾಳಿ ನಡೆಸಿದ್ದಾರೆ. "ಶಿಕ್ಷಣ ಮಹಿಳೆಯ ತಲೆಯಿಂದ ಹಿಜಾಬ್ ಅನ್ನು ತೆಗೆಯುವಂತೆ ಮಾಡುತ್ತದೆ ಎಂದಾದರೆ ನಾವು ಅನಕ್ಷರಸ್ಥರಾಗಿಯೇ ಉಳಿಯುವುದು ಉತ್ತಮ," ಎಂದಯ ಸೈಯದ್ ಎಂಬ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕರ್ನಾಟಕದಲ್ಲಿ ನಮ್ಮ ಮುಸ್ಲಿಂ ಯುವತಿಯರು ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿದ್ದಾರೆ, ಆದರೆ ನಮ್ಮ ಕಾಶ್ಮೀರದ ಸಹೋದರಿಯರು ತಮ್ಮ ಮುಖವನ್ನು ಮುಚ್ಚದೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಅಪರಿಚಿತರ ಮುಂದೆ ಹೆಣ್ಣು ಮಕ್ಕಳು ತಮ್ಮ ಮುಖವನ್ನು ತೋರಿಸುವುದನ್ನು ಅನುಮತಿಸಲಾಗದು. ಇದೆಂತಹ ಭಯಾನಕವಾಗಿದೆ ದೇವರೇ," ಎಂದು ಮತ್ತೋರ್ವ ನೆಟ್ಟಿಗರು ಹೇಳಿದ್ದಾರೆ. ಈ ನಡುವೆ ಹಲವಾರು ಮಂದಿ ನಾವು ಅರೋಸಾ ಪರ್ವೈಜ್ ಪರವಾಗಿ ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಕೆಲವು ಮುಸ್ಲಿಮರೇ ಅರೋಸಾ ಪರ್ವೈಜ್ ಪರವಾಗಿ ಮಾತನಾಡಿದ್ದಾರೆ. ಅದು ಅವಳ ಆಯ್ಕೆ ಎಂದಿದ್ದಾರೆ.
|
ಸಿಟಿ ರವಿ ಟ್ವೀಟ್
ಅರೋಸಾ ಪರ್ವೈಜ್‌ರನ್ನು ಟ್ರೋಲ್ ಮಾಡುತ್ತಿರುವ ನಡುವೆಯೇ ಕರ್ನಾಟಕ ಬಿಜೆಪಿ ಮುಖಂಡ ಸಿ. ಟಿ. ರವಿ, ಅರೋಸಾ ಪರ್ವೈಜ್ ಪರವಾಗಿ ಟ್ವೀಟ್ ಮಾಡಿದ್ದಾರೆ. ಅರೋಸಾ ಪರ್ವೈಜ್ ಚಿತ್ರವನ್ನು ಪೋಸ್ಟ್ ಮಾಡಿರುವ ಸಿ. ಟಿ. ರವಿ, "ಇದು ಧೈರ್ಯದ ಮುಖ," ಎಂದು ಹೇಳಿದ್ದಾರೆ. "ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಕಾಶ್ಮೀರದ 12 ನೇ ತರಗತಿ ಟಾಪರ್ ಅರೋಸಾ ಪರ್ವೈಜ್ ಹೇಳಿದ್ದಾರೆ," ಎಂದು ಕರ್ನಾಟಕ ಬಿಜೆಪಿ ಮುಖಂಡ ಸಿ. ಟಿ. ರವಿ ಉಲ್ಲೇಖ ಮಾಡಿದ್ದಾರೆ.












Click it and Unblock the Notifications