ಮಾತು ಬಾರದ ಈ ಬ್ಲಿಂಕಿಟ್ ಡೆಲಿವರಿ ಬಾಯ್‌ನ ಶ್ರದ್ಧೆಗೆ ಹ್ಯಾಟ್ಸಾಫ್ ಎಂದ ನೆಟ್ಟಿಗರು!
ಹರಿಯಾಣದ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಬ್ಲಿಂಕಿಟ್ ಡೆಲಿವರಿ ಬಾಯ್ ಒಬ್ಬರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಡೆಲಿವರಿ ಬಾಯ್‌ಗೆ ಮಾತನಾಡಲು ಬರುವುದಿಲ್ಲ. ಆದರೂ ಆತ ತನ್ನ ಕೆಲಸವನ್ನ ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾನೆ.
ದೈಹಿಕ ನ್ಯೂನತೆ ಎನ್ನುವುದು ವ್ಯಕ್ತಿಯ ಪ್ರತಿಭೆ, ಕೆಲಸದ ಮೇಲಿನ ಗೌರವ ಅಥವಾ ಆತನ ಬದುಕುವ ಛಲವನ್ನ ಎಂದಿಗೂ ನಿರ್ಧರಿಸುವುದಿಲ್ಲ ಎಂಬುದಕ್ಕೆ ಈ ಯುವಕನ ಕಥೆಯೇ ದೊಡ್ಡ ಉದಾಹರಣೆ ಎನ್ನಬಹುದು. ಆತನ ಈ ಸಮರ್ಪಣಾ ಭಾವವನ್ನ ಕಂಡು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ಬದುಕು ಎಂದರೆ ಹೋರಾಟ ಎಂದು ನಂಬಿರುವ ಈ ಯುವಕ, ತನ್ನ ಶಾರೀರಿಕ ಮಿತಿಯನ್ನೇ ಸವಾಲಾಗಿ ಸ್ವೀಕರಿಸಿ, ಎಲ್ಲರಂತೆ ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದಾನೆ.
ವೈರಲ್ ಆದ ವಿಡಿಯೋದಲ್ಲೇನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ 'ಸ್ಯಾಮಿ ದಿಲ್ ಸೆ' ಎಂಬ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ವಾಕ್ ದೋಷವುಳ್ಳ ಈ ಬ್ಲಿಂಕಿಟ್ ಡೆಲಿವರಿ ಬಾಯ್, ರಸ್ತೆಯಲ್ಲಿ ಹೋಗುತ್ತಿದ್ದ ಸ್ಯಾಮಿ ಎಂಬ ಯುವಕನ ಬಳಿ ಬಂದು ತನ್ನ ಮೊಬೈಲ್ ನೀಡುತ್ತಾನೆ. ಗ್ರಾಹಕರೊಬ್ಬರಿಗೆ ಡೆಲಿವರಿ ನೀಡಬೇಕಾಗಿದ್ದು, ಲೊಕೇಶನ್ ಬಗ್ಗೆ ಮಾತನಾಡಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸಂಜ್ಞೆಗಳ ಮೂಲಕವೇ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ.
ಆತನ ಪರಿಸ್ಥಿತಿಯನ್ನ ಅರ್ಥಮಾಡಿಕೊಂಡ ಸ್ಯಾಮಿ ತಕ್ಷಣ ಸ್ಪಂದಿಸಿ, ಆ ಮೊಬೈಲ್ ಮೂಲಕ ಗ್ರಾಹಕರೊಂದಿಗೆ ಮಾತನಾಡಿ ಸರಿಯಾದ ವಿಳಾಸವನ್ನ ಖಚಿತಪಡಿಸಿಕೊಳ್ಳುತ್ತಾರೆ. ತನಗೆ ಮಾತು ಬರುವುದಿಲ್ಲವಾದ್ದರಿಂದ ಬೇರೊಬ್ಬರ ನೆರವು ಪಡೆಯುತ್ತಿರುವುದಾಗಿ ಸ್ಯಾಮಿ ಗ್ರಾಹಕರಿಗೆ ವಿವರಿಸುತ್ತಾರೆ.
ಸರಿಯಾದ ವಿಳಾಸ ತಿಳಿದ ತಕ್ಷಣವೇ, ಆ ಡೆಲಿವರಿ ಏಜೆಂಟ್ ಮುಖದಲ್ಲಿ ನಗು ಮೂಡುತ್ತದೆ ಮತ್ತು ಸ್ಯಾಮಿಗೆ ಕೃತಜ್ಞತೆ ಸಲ್ಲಿಸಿ ತನ್ನ ಕರ್ತವ್ಯದ ಕಡೆಗೆ ಹೆಜ್ಜೆ ಹಾಕುತ್ತಾನೆ.
ದೌರ್ಬಲ್ಯವನ್ನೇ ಶಕ್ತಿಯಾಗಿಸಿಕೊಂಡ ಯುವಕ
ಈ ದೃಶ್ಯವನ್ನ ರೆಕಾರ್ಡ್ ಮಾಡಿಕೊಂಡಿದ್ದ ಸ್ಯಾಮಿ, ಆತನ ಶ್ರಮವನ್ನು ಮನಸಾರೆ ಕೊಂಡಾಡಿದ್ದಾರೆ. "ದೇವರು ನಮಗೆ ದುಡಿಯಲು ಒಳ್ಳೆಯ ದೇಹವನ್ನ ನೀಡಿದ್ದಾನೆ. ಆದರೂ ನಾವು ಸಣ್ಣ ಪುಟ್ಟ ಕಷ್ಟಗಳಿಗೆಲ್ಲಾ ದೂರುತ್ತಿರುತ್ತೇವೆ, ನೆಪಗಳನ್ನ ಹುಡುಕುತ್ತೇವೆ. ಆದರೆ ಈ ಡೆಲಿವರಿ ಬಾಯ್ ತನ್ನ ದೌರ್ಬಲ್ಯವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು, ಅತ್ಯಂತ ಗೌರವಯುತವಾಗಿ ದುಡಿದು ಬದುಕುತ್ತಿದ್ದಾನೆ. ಆತನ ಈ ಛಲ ಮತ್ತು ಕಠಿಣ ಪರಿಶ್ರಮಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ" ಎಂದು ಸ್ಯಾಮಿ ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ.
Silent but unstoppable! 💪 This mute Blinkit delivery partner from Ambala Cantt is winning hearts with his dedication and smile while delivering orders on time. True inspiration! 🔥 @Blinkit#Respect #Inspiration #GigEconomy https://t.co/ZYJCDrxnA4
— ಸನಾತನ (सनातन) (@sanatan_kannada) November 23, 2025
ಜನ ದಟ್ಟಣೆ ಇರುವ ರಸ್ತೆಗಳಲ್ಲಿ ಪಾರ್ಸೆಲ್‌ಗಳನ್ನ ಹೊತ್ತು, ಕೇವಲ ಸಂಜ್ಞೆಗಳ ಮೂಲಕವೇ ಜನರೊಂದಿಗೆ ಸಂವಹನ ನಡೆಸುತ್ತಾ, ಯಾವುದೇ ದೂರುಗಳಿಲ್ಲದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಈತನ ಕೆಲಸ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನ ಪಡೆದುಕೊಂಡಿದೆ. ಸಾವಿರಾರು ಜನರು ಕಮೆಂಟ್‌ಗಳ ಮೂಲಕ ಈ ಡೆಲಿವರಿ ಬಾಯ್‌ನ ಶ್ರದ್ಧೆಯನ್ನು ಕೊಂಡಾಡುತ್ತಿದ್ದಾರೆ. "ದೇವರು ಈತನಿಗೆ ಒಳ್ಳೆಯದು ಮಾಡಲಿ", "ಈ ಮನುಷ್ಯ ನನಗಿಂತಲೂ ಬಲಶಾಲಿ, ನಾವು ನೆಪ ಹೇಳುವುದನ್ನ ಬಿಡಬೇಕು" ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ, ಶಾರೀರಿಕ ನ್ಯೂನತೆ ಇರುವವರಿಗೂ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿರುವ 'ಬ್ಲಿಂಕಿಟ್' ಸಂಸ್ಥೆಯ ಕಾರ್ಯವನ್ನೂ ಹಲವು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಹಿಂದೆ, ಝೊಮ್ಯಾಟೊ ಡೆಲಿವರಿ ಏಜೆಂಟ್ ಒಬ್ಬರು ಎಲೆಕ್ಟ್ರಿಕ್ ಗಾಲಿಕುರ್ಚಿ ಬಳಸಿ ಆಹಾರ ವಿತರಿಸುತ್ತಿದ್ದ ವಿಡಿಯೋ ಕೂಡ ಇದೇ ರೀತಿ ವೈರಲ್ ಆಗಿತ್ತು.
ಜೀವನದಲ್ಲಿ ಎದುರಾಗುವ ಸವಾಲುಗಳನ್ನ ಕಂಡು ಕಂಗೆಡದೆ, ಅವುಗಳನ್ನ ಮೆಟ್ಟಿ ನಿಂತು ಹೇಗೆ ಬದುಕಬೇಕು ಎಂಬುದನ್ನು ಈ ಮೂಕ ಡೆಲಿವರಿ ಏಜೆಂಟ್ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.


Click it and Unblock the Notifications
