ಗುಜರಾತಿನಲ್ಲಿ 10 ಬಾರಿ ಗೆದ್ದ ಶಾಸಕ ಮೋಹನ್ ಸಿನ್ಹಾ ರಥ್ವಾ ಕಾಂಗ್ರೆಸ್ಸಿಗೆ 'ಕೈ' ಕೊಟ್ಟಿದ್ದೇಕೆ?
ಗಾಂಧಿನಗರ, ನವೆಂಬರ್ 8: ಗುಜರಾತ್ ವಿಧಾನಸಭಾ ಚುನಾವಣಾ ಮತದಾನಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವಾಗಿದೆ. ರಾಜ್ಯದಲ್ಲಿ 10 ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದ ಮೋಹನ್ ಸಿನ್ಹಾ ರಥ್ವಾ ಕಾಂಗ್ರೆಸ್ ಪಕ್ಷವನ್ನು ತೊರೆದು ಹೊರ ನಡೆದಿದ್ದಾರೆ.
78 ವರ್ಷದ ಮೋಹನ್ ಸಿನ್ಹಾ ರಥ್ವಾ, ಬುಧವಾರವೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಛೋಟಾ ಉದಯಪುರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ರಿಗೆ ಕಳುಹಿಸಿದ್ದಾರೆ.
ಮೋಹನ್ ಸಿನ್ಹಾ ರಥ್ವಾ ತನ್ನ ಭದ್ರಕೋಟೆಯಲ್ಲಿ ಬುಡಕಟ್ಟು ಜನಾಂಗದ ನಾಯಕರ ಪಟ್ಟಿಯಲ್ಲೇ ಜನಪ್ರಿಯರಾಗಿದ್ದಾರೆ. 2012ರ ಮೊದಲು, ಅವರು ಛೋಟಾ ಉದಯಪುರ ಜಿಲ್ಲೆಯ ಪಾವಿ-ಜೆಟ್ಪುರ್ (ST) ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗೆ ರಥ್ವಾ ಘೋಷಿಸಿದ್ದರು. ಆದರೆ ಅವರ ಮಗ ರಾಜೇಂದ್ರ ಸಿನ್ಹ್ ರಥ್ವಾ ಅವರ ಸ್ಥಾನದಿಂದ ಕಣಕ್ಕಿಳಿಯಲು ಬಯಸಿದ್ದರು ಎಂದು ಗೊತ್ತಾಗಿದೆ.

ಮೋಹನ್ ಸಿನ್ಹಾ ರಥ್ವಾ ಪುತ್ರನಿಗೆ ಬಿಜೆಪಿ ಟಿಕೆಟ್:
ಕಾಂಗ್ರೆಸ್ಸಿಗೆ ಕೈ ಕೊಟ್ಟಿರುವ ಶಾಸಕ ಮೋಹನ್ ಸಿನ್ಹಾ ರಥ್ವಾ, ತಮ್ಮ ಬದಲು ತಮ್ಮ ಪುತ್ರ ಚುನಾವಣಾ ಕಣಕ್ಕೆ ಇಳಿಯಲು ಬಯಸಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ. ರಾಜೇಂದ್ರ ಸಿನ್ಹಾ ರಥ್ವಾಗೆ ಬಿಜೆಪಿಯಿಂದ ಟಿಕೆಟ್ ಸಿಗುವುದರ ಬಗ್ಗೆ ಮೋಹನ್ ಸಿನ್ಹಾ ರಥ್ವಾ ಶೇ.100ರಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದ್ದಾರೆ.
"ನಾನು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿಲ್ಲ. ನನಗೆ ಈಗ ವಯಸ್ಸಾಗುತ್ತಿದೆ. ನನ್ನ ಮಗ ರಾಜೇಂದ್ರಸಿಂಹ ಸಿವಿಲ್ ಎಂಜಿನಿಯರ್ ಆಗಿದ್ದು, ನಾವು ಬಿಜೆಪಿಗೆ ಸೇರಬೇಕು ಎಂಬುದು ಅವರ ಭಾವನೆ," ಎಂದು ಮೋಹನ್ ಸಿನ್ಹಾ ರಥ್ವಾ ಹೇಳಿದರು.
ಗುಜರಾತ್‌ನಲ್ಲಿ ಚುನಾವಣೆಯ ಮಾಹಿತಿ:
ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಅದೇ ರೀತಿ ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications