ಕ್ರೀಡಾಂಗಣದಲ್ಲಿ ರೀಲ್ಸ್ ಗೀಳಿಗೆ 70,000 ರೂಪಾಯಿ ಮೌಲ್ಯದ ಬಂಗಾರದ ಉಂಗುರ ಕಳೆದುಕೊಂಡ ಯುವತಿ
Gold Ring: ಮನುಷ್ಯ ಅಂದಮೇಲೆ ಒಂದಲ್ಲ ಒಂದು ಹವ್ಯಾಸಗಳು ಇರುತ್ತವೆ ನಿಜ. ಆದರೆ, ಅದು ಅತಿರೇಕಕ್ಕೆ ಹೋದರೆ ಎಂತಹ ಆಪತ್ತು ತರುತ್ತದೆ ಎಂಬುದಕ್ಕೆ ಪಂಜಾಬ್‌ನ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪಂಜಾಬ್ ಕಿಂಗ್ಸ್ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯದ ವೇಳೆ ಯುವತಿಯೊಬ್ಬರು ಮಾಡಿದ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರಿಗೆ ಕ್ರಿಕೆಟ್‌ಗಿಂತ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದೇ ಮುಖ್ಯವಾಗಿತ್ತು. ತಮ್ಮ ಬೆರಳಿನಲ್ಲಿದ್ದ ಸುಮಾರು 70,000 ರೂಪಾಯಿ ಮೌಲ್ಯದ ಉಂಗುರವನ್ನು ಗಾಳಿಯಲ್ಲಿ ಎಸೆದು, ಅದು ತೇಲುವಂತೆ ವಿಡಿಯೋ ಮಾಡಲು ಸಾಹಸಕ್ಕೆ ಮುಂದಾಗಿದ್ದಾರೆ.

ರೀಲ್ಸ್‌ಗಾಗಿ ದುಬಾರಿ ಬೆಲೆಯ ಉಂಗುರ ಕಳೆದುಕೊಂಡ ಮಹಿಳೆ
ಈ ವೇಳೆ ಮಹಿಳೆ ಕ್ಯಾಮೆರಾ ಕಡೆಗೆ ಗಮನ ಹರಿಸಿದ್ದರಿಂದ ಉಂಗುರವನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಕೈಜಾರಿದ ಬೆಲೆಬಾಳುವ ಉಂಗುರವು ಸ್ಟೇಡಿಯಂನ ಮೆಟ್ಟಿಲುಗಳ ನಡುವೆ ಎಲ್ಲೋ ಬಿದ್ದಿದೆ. ಇನ್ನೂ ಉಂಗುರ ಕಳೆದುಹೋಗುತ್ತಿದ್ದಂತೆ ಏನು ಮಾಡಬೇಕೆಂದು ತೋಚದೆ ಯುವತಿ ದಿಗ್ಭ್ರಮೆಗೊಂಡು ಕುಳಿತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ಹೇಳೋದೇನು?
ಮಧುಪ್ರಿಯಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕಳೆದುಕೊಂಡಿರುವ ಉಂಗುರ ಹುಡುಕಿಕೊಡಲು ಮನವಿ ಮಾಡಿದ್ದಾರೆ. ಆದರೆ, ನೆಟ್ಟಿಗರು ಈಕೆಯ ಬೇಜವಾಬ್ದಾರಿತನವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. "ರೀಲ್ಸ್ ಮಾಡುವ ಹುಚ್ಚಿಗಾಗಿ ಇಷ್ಟು ದೊಡ್ಡ ಮೌಲ್ಯದ ಉಂಗುರವನ್ನು ಎಸೆಯುವುದು ಮೂರ್ಖತನ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಕನಿಷ್ಠ ಪಕ್ಷ ನಕಲಿ ಉಂಗುರವನ್ನು ಬಳಸುವ ಬುದ್ಧಿವಂತಿಕೆಯೂ ಇರಲಿಲ್ಲವೇ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ರೀಲ್ಸ್ ಮಾಡುವವರಿಗೆ ಎಚ್ಚರಿಕೆ ಗಂಟೆ
ಘಟನೆ ನಡೆದ ತಕ್ಷಣ ಎಷ್ಟು ಹುಡುಕಾಟ ನಡೆಸಿದರೂ ಆ ಉಂಗುರ ಮಾತ್ರ ಪತ್ತೆಯಾಗಿಲ್ಲ. ಕ್ರೀಡಾಂಗಣದ ಜನದಟ್ಟಣೆಯ ನಡುವೆ ಅದು ಸಿಗುವ ಸಾಧ್ಯತೆಗಳೂ ತೀರಾ ಕಡಿಮೆ. ಐಪಿಎಲ್ ಮೈದಾನದ ಸಿಕ್ಸರ್‌ಗಳಿಗಿಂತ ಈ ಯುವತಿಯ ಉಂಗುರ ಪುರಾಣವೇ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ ಭರದಲ್ಲಿ ನಾವು ಪ್ರಮುಖ ವಸ್ತುಗಳನ್ನು ಕಳೆದುಕೊಳ್ಳುವ ಅಥವಾ ಅಪಾಯಕ್ಕೆ ಸಿಲುಕುವ ಕೆಲಸ ಮಾಡಬಾರದು ಎಂಬುದು ಈ ಘಟನೆಯೇ ಪ್ರಮುಖ ಪಾಠವಾಗಿದೆ.
`
ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಪ್ರಯೋಗ ಮಾಡುವುದು ಅಪಾಯಕಾರಿ. ಕಿಕ್ಕಿರಿದು ತುಂಬಿದ ಕ್ರೀಡಾಂಗಣಗಳಲ್ಲಿ ನಿಮ್ಮ ವಸ್ತುಗಳ ಸುರಕ್ಷತೆ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಈ ಘಟನೆಯು ಕೇವಲ ಆ ಮಹಿಳೆಗೆ ಮಾತ್ರವಲ್ಲ, ಪ್ರತಿಯೊಬ್ಬ ರೀಲ್ಸ್ ಪ್ರೇಮಿಗೂ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ ಅಂದ್ರೆ ತಪ್ಪಾಗಲಾರದು.












Click it and Unblock the Notifications