Gen Z: ಮದುವೆ ವಿಚಾರದಲ್ಲಿ 90 - 80ರ ದಶಕದವರಂತೆ ಹೊಸ ತಲೆಮಾರು ಈ ತಪ್ಪು ಮಾಡಲ್ಲ; ಯೂಟ್ಯೂಬರ್ ರಾಜ್ ಶಾಮಿ ಮಾತು ವೈರಲ್
ಜೆನ್‌ಜೀ / Gen Zಗಳ ಮದುವೆ ಜೀವನದ ಬಗ್ಗೆ ಖ್ಯಾತ ಯೂಟ್ಯೂಬರ್, ಪಾಡ್‌ಕಾಸ್ಟರ್ ರಾಜ್ ಶಾಮಿ ಅವರು ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೆನ್‌ಜೀಗಳು ಮದುವೆ ವಿಚಾರದಲ್ಲಿ ಈ ಹಿಂದಿನ ತಲೆಮಾರಿಗಿಂತಲೂ ತುಂಬಾ ಸ್ಪಷ್ಟವಾಗಿದ್ದಾರೆ. ಅವರು ಮದುವೆಯ ಬಗ್ಗೆ ಹೆದರುವುದಿಲ್ಲ. ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಾಗ ಮದುವೆ ಏನಾಗಬಹುದು ಎಂಬುದರ ಬಗ್ಗೆ ಅವರಿಗೆ ಹೆಚ್ಚು ಅರಿವಿದೆ ಅಂತ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ರಾಜ್ ಶಾಮಿ ಅವರು ಮಾಡಿರುವ ಪೋಸ್ಟ್ ಇದೀಗ ಭಾರೀ ಸ್ವಾರಸ್ಯಕರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಸಮಾಜ ಏನು ಹೇಳುತ್ತದೆ, ಮಕ್ಕಳಿಗಾಗಿ, ಕುಟುಂಬದ ನಿರೀಕ್ಷೆಗಳಿಗಾಗಿ ಅಥವಾ "ಇಷ್ಟು ದೂರ ಬಂದಿದ್ದೇವೆ, ಈಗ ಹೇಗೆ ದೂರವಾಗೋದು?" ಎನ್ನುವ ಕಾರಣಗಳಿಗೆ ಸಂತೋಷವನ್ನೇ ಕಳೆದುಕೊಂಡು ಮತ್ತದೇ ಸಂಬಂಧದಲ್ಲೇ ಮುಂದುವರಿದವರನ್ನು ಹೊಸ ಜೆನ್‌ಜೀ ತಲೆಮಾರು ನೋಡಿಕೊಂಡು ಬೆಳೆದಿದ್ದಾರೆ. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ಬಹಳ ಹಿಂದೆಯೇ ಒಬ್ಬರಿಗೊಬ್ಬರು ಸಂಗಾತಿಗಳಾಗಿರದ ಹಲವು ದಂಪತಿಗಳನ್ನೂ ಅವರು ನೋಡಿದ್ದಾರೆ. ಹೀಗಾಗಿ, ಅವರ ಮದುವೆಗೆ ಸಂಬಂಧಿಸಿದ ನಿಲುವು ಭಿನ್ನವಾಗಿದೆ.

Gen Z: ಜೆನ್ ಜೀಗಳು ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ!
ಇದೇ ಕಾರಣಕ್ಕೆ ಈಗ ಅವರು ಮದುವೆಯ ಬಗ್ಗೆ ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಾನು ಈ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆಯೇ ಎನ್ನುವುದಷ್ಟೇ ಈಗ ಪ್ರಶ್ನೆಯಾಗಿ ಉಳಿದಿಲ್ಲ. ಅದರ ಬದಲಿಗೆ ನಾನು ಇವರೊಂದಿಗೆ ಜೀವನ ಕಟ್ಟಿಕೊಳ್ಳಬಹುದೇ, ನಮ್ಮ ಜೀವನದ ಮೌಲ್ಯಗಳು ಒಂದೇ ರೀತಿಯಲ್ಲಿವೆಯೇ, ಕಷ್ಟದ ಸಂದರ್ಭಗಳಲ್ಲಿ ನಾವು ಪರಸ್ಪರ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವೇ, ನಾನು ಈ ವ್ಯಕ್ತಿಯ ಮುಂದೆ ಸಂಪೂರ್ಣವಾಗಿ ನಾನಾಗಿರಲು ಸುರಕ್ಷಿತ ವಾತಾವರಣ ಸಾಧ್ಯವೇ ಎಂಬ ಭಾವನೆ ಇದೆಯೇ, ನನಗೆ ನಿಜವಾಗಿಯೂ ಈ ಜೀವನ ಬೇಕೇ, ಅಥವಾ ಎಲ್ಲರೂ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಕಾರಣಕ್ಕೆ ನಾನೂ ಮಾಡುತ್ತಿದ್ದೇನೆಯೇ ಅಂತ ಹೊಸ ತಲೆಮಾರು ಯೋಚಿಸುತ್ತಿದೆ.
ಹೌದು, ಜೆನ್‌ಜೀಗಳಲ್ಲಿ ಹಲವರಿಗೆ ಇನ್ನೂ ಪ್ರೀತಿಯೇ ಬೇಕು. ಕುಟುಂಬ ಕಟ್ಟಿಕೊಳ್ಳಬೇಕು ಎಂಬ ಆಸೆಯೂ ಇದೆ. ಮನೆಗೆ ವಾಪಸ್ ಬಂದಾಗ ಅವರ ಜೊತೆಯಲ್ಲಿ ಒಬ್ಬರು ಅವರೊಂದಿಗೆ ಸಮಯ ಕಳೆಯಬೇಕು ಎನ್ನುವ ಬಯಕೆಯೂ ಇದೆ. ಆದರೆ ಎಲ್ಲರೂ "ಇದೀಗ ಮದುವೆಯಾಗುವ ಸಮಯ" ಎಂದು ಹೇಳುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಜೀವನಪೂರ್ತಿ ಇರುವ ಸಂಬಂಧಕ್ಕೆ ತಕ್ಷಣ ಹೆಜ್ಜೆ ಇಡಲು ಅವರು ಬಯಸುವುದಿಲ್ಲ.
ಬಹುಶಃ ಇದು ಬದ್ಧತೆಯ ಭಯವಲ್ಲ. ಬದಲಾಗಿ, ಇದು ಇನ್ನಷ್ಟು ಆಳವಾದ ಆಲೋಚನೆ, ಬದ್ಧತೆಯ ವಿಷಯವೂ ಆಗಿರಬಹುದು. ಸ್ಪಷ್ಟತೆಯ ನಿರೀಕ್ಷೆ, ಸರಿಯಾದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಬದ್ಧತೆ, ಮೊದಲು ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಬದ್ಧತೆ ಮತ್ತು ಪದೇಪದೇ ತಪ್ಪಿಸಿಕೊಳ್ಳಬೇಕು ಎನ್ನಿಸದಂತಹ ಸಂಬಂಧವನ್ನು ಕಟ್ಟಿಕೊಳ್ಳುವ ಬದ್ಧತೆ. ಮದುವೆಯನ್ನು ಬೇಗ ಮಾಡಿಕೊಂಡರೆ ಮಾತ್ರ ಜೀವನದಲ್ಲಿ ಗೆದ್ದಂತಾಗುವುದಿಲ್ಲ. ಅದನ್ನು ಹಲವು ವರ್ಷಗಳ ಕಾಲ ಜೀವಂತವಾಗಿರಿಸಬೇಕು. ಹೀಗಾಗಿ Gen Z ಮದುವೆಯ ಆಯ್ಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ಆ ಆಯ್ಕೆ ಎಷ್ಟು ಮಹತ್ವದ್ದು ಎಂಬುದನ್ನು ಅವರು ಈಗ ಹೆಚ್ಚು ಅರ್ಥಮಾಡಿಕೊಂಡಿದ್ದಾರೆ ಎನ್ನಬಹುದು ಅಂತ ರಾಜ್ ಶಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
Gen Z: ನೆಟ್ಟಿಗರು ಹೇಳಿದ್ದೇನು ?
ಜೆನ್ ಜೀಗಳ ಮದುವೆ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಚರ್ಚೆಗೆ ಕಾರಣವಾಗಿದೆ. ನಿಜ ಆದರೆ, ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಜೆನ್‌ಜೀಗಳಲ್ಲ, ಇದು ಮಿಲೇನಿಯಲ್ಸ್ 90 ಕಿಡ್ಸ್‌ಗಳ ನಿರ್ಧಾರ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ. ಜೆನ್ ಜೀ ತಮ್ಮ 20ರ ಹರೆಯದಲ್ಲಿ ಮದುವೆಯಾಗುತ್ತಿದ್ದಾರೆ ಅಂತಲೂ ಅವರು ಹೇಳಿದ್ದಾರೆ.
ಜೆನ್ ಜೀ ಅವರ ಮಗು 10ನೇ ತರಗತಿಗೆ ಬರುವಷ್ಟರಲ್ಲಿ ಪೋಷಕರು ಈಗಾಗಲೇ 50ರ ಆಸುಪಾಸಿನಲ್ಲಿರುತ್ತಾರೆ. ಆಗ ಮಗುವಿನ ಹದಿಹರೆಯದ ಅವಧಿಯಲ್ಲಿ ಎದುರಾಗುವ ಪೋಷಕರ ಹೋರಾಟಗಳೇ ಮತ್ತೊಂದು ಕಥೆಯಾಗಿರುತ್ತದೆ. ಅದರಲ್ಲೂ ಈಗಿನ ಸಾಮಾನ್ಯ ಪ್ರವೃತ್ತಿಯನ್ನು ನೋಡಿದರೆ, ಮಕ್ಕಳ ಬಗ್ಗೆ ದೂರುತ್ತಾ, ಅವರ ನಡವಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಸಂದರ್ಭಗಳೂ ಎದುರಾಗಬಹುದು. ತಡವಾಗಿ ಮದುವೆಯಾಗುವುದು ಎಲ್ಲದಕ್ಕೂ ಪರಿಹಾರವಾಗಲ್ಲ ಅಂತ ನಿತಿನ್ ಗಂಧರೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
