Free Train : ಈ ರೈಲಲ್ಲಿ ಹೋಗೋದಾದ್ರೆ ಟಿಕೆಟ್ ಕೊಳ್ಳೋದೇ ಬೇಡ, ಯಾಕೆ ಹೀಗೆ?
Free Train: ರೈಲು ಭಾರತದ ಜೀವನಾಡಿ. ದಿನಾ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಇರಬೇಕು. ಒಂದು ವೇಳೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ಸಿಕ್ಕಿಬಿದ್ದರೆ, ಫೈನ್ ಕಟ್ಟಬೇಕಾಗುತ್ತದೆ. ಆದರೆ ಭಾರತದಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣ ಮಾಡಬಹುದಾದ ರೈಲು ಇದೆ. ಇದರಲ್ಲಿ ಹೋಗಬೇಕಾದರೆ ಟಿಕೆಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಹಾಗಂತ ಇದು ಹೊಸ ರೈಲು ಖಂಡಿತಾ ಅಲ್ಲ. ಈ ರೈಲು ಕಳೆದ ಹಲವಾರು ವರ್ಷಗಳಿಂದ ಫ್ರೀಯಾಗಿಯೇ ಜನರಿಗೆ ಸೇವೆ ಸಲ್ಲಿಸುತ್ತಾ ಇದೆ.
ಇದು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ನಡೆಸುತ್ತಿರುವ 13 ಕಿ.ಮೀ ಉದ್ದದ ವಿಶೇಷ ರೈಲು ಸೇವೆ. ತನ್ನ ವಿಶಿಷ್ಟ ಪ್ರಯಾಣಕ್ಕೆಯೇ ಈ ರೈಲು ಹೆಸರುವಾಸಿ.

13 ಕಿ.ಮೀ ರೈಲು ಪ್ರಯಾಣ :
ಈ ವಿಶೇಷ ರೈಲು ಪಂಜಾಬ್ ನ ನಂಗಲ್ ನಿಂದ ಹಿಮಾಚಲ ಪ್ರದೇಶದ (himachal pradesh) ಭಾಕ್ರಾವರೆಗೆ ಚಲಿಸುತ್ತದೆ. 13 ಕಿ.ಮೀ ಪ್ರಯಾಣಕ್ಕೆ ಸುಮಾರು 40 ನಿಮಿಷ ಬೇಕು. ದಾರಿಯಲ್ಲಿ, ಪ್ರವಾಸಿಗರು ಶಿವಾಲಿಕ್ ಬೆಟ್ಟಗಳು ಮತ್ತು ಸಟ್ಲೆಜ್ ನದಿಯ ಸುಂದರ ದೃಶ್ಯವನ್ನು ವೀಕ್ಷಿಸಬಹದು. ಈ ಮಾರ್ಗದಲ್ಲಿ ಮೂರು ಸುರಂಗ ಮತ್ತು ಆರು ಸಣ್ಣ ರೈಲು ನಿಲ್ದಾಣ ಸಿಗುತ್ತವೆ. ಇಷ್ಟಿದ್ದರೂ ಈ ರೈಲಿನಲ್ಲಿ ಪ್ರಯಾಣಿಸುವುದಕ್ಕೆ ಹಣ ಕೊಡಬೇಕಾಗಿಲ್ಲ. ಇದರ ಸಂಪೂರ್ಣ ವೆಚ್ಚವನ್ನು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯೇ ಭರಿಸುತ್ತದೆ.
Free Train ಸೇವೆ :
ಭಾಕ್ರಾ-ನಂಗಲ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಅಂದರೆ 1948 ರ ಸುಮಾರಿಗೆ ಈ ರೈಲು ಸೇವೆ ಪ್ರಾರಂಭವಾಯಿತು. ಆ ಸಮಯದಲ್ಲಿ ಕಾರ್ಮಿಕರು, ಎಂಜಿನಿಯರ್ ಗಳು, ಯಂತ್ರಗಳು ಮತ್ತು ನಿರ್ಮಾಣ ಸಾಮಗ್ರಿಯನ್ನು ಅಣೆಕಟ್ಟಿನ ಸ್ಥಳಕ್ಕೆ ಸಾಗಿಸುವ ಸಲುವಾಗಿ ಇದನ್ನು ಬಳಸಲಾಗುತ್ತಿತ್ತು. ಆದರೆ ಅಣೆಕಟ್ಟು ನಿರ್ಮಾಣವಾದ ಬಳಿಕ ಕೂಡಾ ರೈಲು ಓಡಾಟ ಮುಂದುವರೆಯಿತು. ಕ್ರಮೇಣ ಸ್ಥಳೀಯರಿಗಾಗಿ ಇದು ಪ್ರಮುಖ ಸಾರಿಗೆ ಸಾಧನವಾಯಿತು. ವಿಶೇಷವೆಂದರೆ ಈ ರೈಲನ್ನು ಭಾರತೀಯ ರೈಲ್ವೆ ನಿರ್ವಹಿಸುವುದಿಲ್ಲ. ಭಾಕ್ರಾ ಬಿಯಾಸ್ ಮ್ಯಾನೇಜ್ಮೆಂಟ್ ಬೋರ್ಡ್ (ಬಿಬಿಎಂಬಿ) ಈ ರೈಲನ್ನು ನಿರ್ವಹಿಸುತ್ತದೆ.
ಈ ರೈಲಿನ ಬೋಗಿಗಳೂ ವಿಶೇಷ :
ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ರೈಲಿನ ಓಡಾಟದ ಸಂಪೂರ್ಣ ವೆಚ್ಚವನ್ನು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ಭರಿಸುತ್ತದೆ. ಇನ್ನು ಈ ರೈಲನ್ನು ಹಣಕ್ಕಾಗಿ ಓಡಿಸುತ್ತಿಲ್ಲ. ಈ ರೈಲು ಬೋಗಿಗಳು ಕೂಡಾ ತಮ್ಮದೇ ಆದ ವಿಶೇಷತೆಯಿಂದ ಕೂಡಿದೆ. ಈ ರೈಲು ಮರದ ಬೋಗಿಗಳನ್ನು ಹೊಂದಿದೆ. ಇದಕ್ಕಾಗಿ 1923ರಲ್ಲಿ ಕರಾಚಿಯಿಂದ ಮರದ ಪೆಟ್ಟಿಗೆ ತಯಾರಿಸಲಾಗಿತ್ತು. ಆರಂಭದಲ್ಲಿ, ಈ ರೈಲು ಉಗಿ ಎಂಜಿನ್ ನಲ್ಲಿ ಚಲಿಸ್ತಾ ಇತ್ತು. ನಂತರ ಅದನ್ನು ಡೀಸೆಲ್ ಎಂಜಿನ್ ನಿಂದ ನಡೆಸಲಾಯಿತು. ಹಳೆಯ ನೆನಪನ್ನು ಉಳಿಸುವುದಕ್ಕಾಗಿ ಈಗಲೂ ಮೂರು ಈ ರೈಲಿನಲ್ಲಿ ಮೂರು ಮರದ ಬೋಗಿಗಳನ್ನು ಇರಿಸಲಾಗಿದೆ.
ಈ ರೈಲಿನ ವಿಶಿಷ್ಟ ಪ್ರಯಾಣ ಮತ್ತು ಉಚಿತ ಪ್ರಯಾಣವು ಜನರನ್ನು ಆಕರ್ಷಿಸುತ್ತದೆ. 2011ರಲ್ಲಿ, ಬಿಬಿಎಂಬಿ ಟಿಕೆಟ್ ಗಳನ್ನು ಇಡುವ ಯೋಚನೆ ಮಾಡಿತ್ತು. ಆದರೆ ನಂತರ ಅದನ್ನು ಉಚಿತವಾಗಿಯೇ ನಡೆಸಲು ನಿರ್ಧರಿಸಿತು. ಇಂದಿಗೂ, ಈ ರೈಲು ಭಾಕ್ರಾ-ನಂಗಲ್ ಅಣೆಕಟ್ಟಿನ ಪರಂಪರೆಯ ಒಂದು ಭಾಗವಾಗಿದೆ. ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು (tourists) ಟಿಕೆಟ್ ಇಲ್ಲದೆಯೇ ಈ ರೈಲಿನಲ್ಲಿ ಪ್ರಯಾಣಿಸಬಹುದು.


Click it and Unblock the Notifications
