ಮೋದಿ ಅಲೆ: ಸ್ಪರ್ಧೆಗೆ 4 ಕಾಂಗ್ರೆಸ್ ನಾಯಕರ ಹಿಂದೇಟು?
ನವದೆಹಲಿ, ಮಾ 13: ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಲೋಕಸಭಾ ಟಿಕೆಟಿಗೆ ಆಂತರಿಕ ಚುನಾವಣೆ ನಡೆದರೆ, ದೇಶದ ಇನ್ನೊಂದೆಡೆ ಎಐಸಿಸಿ ಟಿಕೆಟ್ ಕೊಡಲು ಮುಂದಾದರೂ ಸ್ಪರ್ಧಿಸಲು ಕೆಲವು ಕಾಂಗ್ರೆಸ್ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ.
ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ಬರುತ್ತಿರುವ ಹಿನ್ನಲೆಯಲ್ಲಿ ಮತ್ತು ನರೇಂದ್ರ ಮೋದಿ ಅಲೆಯ ಮುಂದೆ ಮುಖಭಂಗ ಅನುಭವಿಸುವುದಕ್ಕಿಂತ ಸ್ಪರ್ಧಿಸದೇ ಇರುವುದು ಲೇಸು ಎನ್ನುವ ನಿರ್ಧಾರಕ್ಕೆ ಕೇಂದ್ರದ ಕೆಲವು ಪ್ರಮುಖ ಕಾಂಗ್ರೆಸ್ ಮುಖಂಡರು ಬಂದಿದ್ದಾರೆಂದು ವರದಿಯಾಗಿದೆ.
ನಾನಾ ತಂತ್ರಗಳ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಯುಲು ನಾಲ್ವರು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. (ಆಂತರಿಕ ಚುನಾವಣೆಯಲ್ಲಿ ಪೂಜಾರಿಗೆ ಜಯ)
ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಮುಖಂಡರಾರು? ಸ್ಲೈಡಿನಲ್ಲಿ..

ರಾಹುಲ್ ಫರ್ಮಾನು
ನಾಲ್ವರು ಮುಖಂಡರು ಸ್ಪರ್ಧಿಸಲು ಹಿಂದಕ್ಕೆ ಸರಿಯಲು ಪ್ರಯತ್ನಿಸುತ್ತಿರುವುದಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಂಡಾಮಂಡಲವಾಗಿದ್ದಾರೆ ಎನ್ನಲಾಗುತ್ತಿದೆ. ಹಿರಿಯ ನಾಯಕರು ಸ್ಪರ್ಧಿಸಲು ಹಿಂದಕ್ಕೆ ಸರಿದರೆ ದೇಶದ ಇತರಡೆ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕೆಂದು ರಾಹುಲ್ ಫರ್ಮಾನು ಹೊರಡಿಸಿದ್ದಾರೆ.

ಸಚಿನ್ ಪೈಲಟ್
ಹಿರಿಯ ಕಾಂಗ್ರೆಸ್ ಮುಖಂಡ ದಿ. ರಾಜೇಶ್ ಪೈಲಟ್ ಪುತ್ರ ಮತ್ತು ಸಚಿವರೂ ಆಗಿರುವ ಸಚಿನ್ ಪೈಲಟ್ ಸ್ಪರ್ಧಿಸದೇ ಇರುವ ನಿರ್ಧಾರಕ್ಕೆ ಬಂದಿದ್ದರು. ಆದರೆ ರಾಹುಲ್, ಪೈಲಟ್ ಅವರನ್ನು ರಾಜಸ್ಥಾನದಿಂದ ಕಣಕ್ಕಿಳಿಯುವಂತೆ ಮನವೊಲಿಸುತ್ತಿದ್ದಾರೆ.

ಮನೀಶ್ ತಿವಾರಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಕಟು ಶಬ್ದಗಳಿಂದ ಟೀಕಿಸುತ್ತಿದ್ದ ಸಚಿವ ಮನೀಶ್ ತಿವಾರಿ ಕೂಡಾ ಈ ಚುನಾವಣೆಯ ಸ್ಪರ್ಧೆಯ ವಿಚಾರದಲ್ಲಿ ನಿರಾಶಕ್ತಿ ತೋರುತ್ತಿದ್ದಾರೆ. ಆದರೆ ವರಿಷ್ಠರ ಒತ್ತಾಯದ ಮೇರೆಗೆ ಕ್ಷೇತ್ರ ಬದಲಿಸಿ ಚಂಡೀಗಢ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದರೂ ಅಲ್ಲಿನ ಹಾಲಿ ಕಾಂಗ್ರೆಸ್ ಸಂಸದ ಬನ್ಸಾಲ್ ಕ್ಷೇತ್ರ ಬಿಟ್ಟು ಕೊಡಲು ತಯಾರಿಲ್ಲ.

ಪಿ ಚಿದಂಬರಂ
ಡಿಎಂಕೆ ಬೆಂಬಲದಿಂದ ಕೂದಲೆಳೆ ಅಂತರದಿಂದ ಕಳೆದ ಬಾರಿ ಜಯಗಳಿಸಿದ್ದ ಕೇಂದ್ರ ವಿತ್ತ ಸಚಿವ ಚಿದಂಬರಂ ಈ ಬಾರಿ ಏಕಾಂಕಿಯಾಗಿ ಸ್ಪರ್ಧಿಸ ಬೇಕಾಗುತ್ತದೆ. ಯಾಕೆಂದರೆ ಡಿಎಂಕೆ ಈ ಬಾರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿ ಕೊಂಡಿಲ್ಲ. ಈ ಬಾರಿ ಸ್ಪರ್ಧಿಸಲು ಇಚ್ಚಿಸದ ಚಿದು ತನ್ನ ಮಗ ಕಾರ್ತಿ ಚಿದಂಬರಂಗೆ ಶಿವಗಂಗಾ ಕ್ಷೇತ್ರದ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

ಜಿ ಕೆ ವಾಸನ್
ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜಿ ಕೆ ವಾಸನ್ ಕೂಡಾ, ಎಐಎಡಿಎಂಕೆ ಮತ್ತು ಡಿಎಂಕೆ ಅಭ್ಯರ್ಥಿಗಳ ವಿರುದ್ದ ಕಣಕ್ಕಿಳಿಯ ಬೇಕಾಗಿರುವುದರಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.












Click it and Unblock the Notifications