Maharashtra Assembly Election 2024: ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕರ್ನಾಟಕ ಮಾದರಿ ಇಲ್ಲ!
ಮಹಾರಾಷ್ಟ್ರ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿಯು ಘಟಾನುಘಟಿ ಅಭ್ಯರ್ಥಿಗಳನ್ನೇ ಚುನಾವಣಾ ಕಣಕ್ಕೆ ಇಳಿಸಿದೆ. ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ 99 ಜನರಿಗೆ ಬಿಜೆಪಿ ಟಿಕೆಟ್ ನೀಡಿದೆ.
ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ವಿಧಾನಸಭೆ 288 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 145 ಆಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಶಿವಸೇನೆಯ (ಏಕನಾಥ್ ಶಿಂಧೆ ಬಣ) ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್‌ನ (ಅಜಿತ್ ಪವಾರ್ ಬಣ) ಇದೆ. ಈ ಮೂರು ಪಕ್ಷಗಳನ್ನು ಮಹಾಯುತಿ ಎಂದು ಕರೆಯಲಾಗುತ್ತಿದೆ. ಈ ಮೂರು ಪಕ್ಷಗಳ ನಡುವೆ ಸೀಟು ಹಂಚಿಕೆಯಾಗಿದೆ. ಬಿಜೆಪಿಯು 151 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದೆ.

288 ಸ್ಥಾನಗಳಲ್ಲಿ 151 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತಿದ್ದರೆ, ಬಾಕಿ ಸೀಟುಗಳನ್ನು ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ಎನ್‌ಸಿಪಿಗೆ ಬಿಟ್ಟುಕೊಡಲಾಗಿದೆ. ಬಿಜೆಪಿ ಈ ಬಾರಿ ಘಟಾನುಘಟಿ ನಾಯಕರನ್ನೇ ಚುನಾವಣೆಗೆ ಇಳಿಸಿದೆ. ಅದರಲ್ಲಿ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ, ಸಚಿವ ಸುಧೀರ್ ಮುಂಗಂಟಿವಾರ್ ಹಾಗೂ ಕೇಂದ್ರ ಸಚಿವ ರಾವ್‌ಸಾಹೇಬ್ ದಾನ್ವೆ ಅವರ ಪುತ್ರ ಸಂತೋಷ್ ಸೇರಿದಂತೆ ಹಲವರು ಇದ್ದಾರೆ. 2019ನೇ ಸಾಲಿನಲ್ಲಿ ನಡೆದ ಮಹಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಈ ಪ್ರಮಾಣದಲ್ಲಿ ಸೀಟುಗಳು ಸಿಕ್ಕಿರಲಿಲ್ಲ. ಕಾಂಗ್ರೆಸ್ ಸೇರಿದಂತೆ ಮೂರು ಪಕ್ಷಗಳಿಗೆ ಸರಿಸಮನಾಗಿ ಬಿಜೆಪಿ 105 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಅಶೋಕ್ ಚವ್ಹಾಣ್ ಮಗಳಿಗೆ ಟಿಕೆಟ್: ಕಾಂಗ್ರೆಸ್‌ನ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಅಶೋಕ್ ಚವ್ಹಾಣ್ ಅವರ ಪುತ್ರಿಗೂ ಈ ಬಾರಿ ಟಿಕೆಟ್ ಸಿಕ್ಕಿದೆ. ಭೋಕರ್ ಎನ್ನುವ ವಿಧಾನಸಭಾ ಕ್ಷೇತ್ರದಿಂದ ಶ್ರೀಜಯ ಚವ್ಹಾಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರ ಮಗಳು. ಅಶೋಕ್ ಅವರು ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದಾಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಇದೀಗ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಬಿಜೆಪಿ ಭದ್ರಕೋಟೆಯಿಂದ ಸ್ಪರ್ಧೆ: ಇನ್ನು ಮಹಾರಾಷ್ಟ್ರದ ಪ್ರಮುಖ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಾಗ್ಪುರದ ಪಶ್ವಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಾಗ್ಪುರ ಕ್ಷೇತ್ರವು ಬಿಜೆಪಿ ಭದ್ರ ಕೋಟೆಯಾಗಿದೆ. ಫಡ್ನವಿಸ್ ಅವರು 2009ರಿಂದಲೂ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಇಲ್ಲಿ ಅಮೋಘ ಸಾಧನೆ ಮಾಡಿದೆ.
ಇನ್ನು ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ 13 ಜನ ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಪಂಗಡದ ಆರು ಜನ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿಯ ನಾಲ್ವರು ಅಭ್ಯರ್ಥಿಗಳು ಇದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ಬುದ್ಧಿ ಕಲಿತ ಬಿಜೆಪಿ
ಇನ್ನು ಗಮನಾರ್ಹ ವಿಷಯವೆಂದರೆ, ಬಿಜೆಪಿ ಈ ಬಾರಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಹೊಸ ಮುಖಗಳಿಗೆ ಕೈಹಾಕಿ, ಕೈ ಸುಟ್ಟುಕೊಂಡಿತ್ತು. ಇದೇ ಕಾರಣಕ್ಕಾಗಿ ಕರ್ನಾಟಕದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದರೂ, ಬಿಜೆಪಿ ಸೋತಿತ್ತು. ಇದರಿಂದ ಪಾಠ ಕಲಿತಿರುವ ಬಿಜೆಪಿ ಇದೀಗ ಅದೇ ರೀತಿಯ ಪ್ರಯೋಗಗಳಿಂದ ದೂರು ಉಳಿದಿದೆ.
ಸಾಮಾನ್ಯವಾಗಿ ಚುನಾವಣೆ ಪೂರ್ವದಲ್ಲಿ ಬಿಜೆಪಿಯು ಆಡಳಿತ ವಿರೋಧಿ ಅಲೆಯನ್ನು ತಪ್ಪಿಸುವ ಉದ್ದೇಶದಿಂದ ಹಾಲಿ ಶಾಸಕರನ್ನು ಬದಲಾಯಿಸುತ್ತಿತ್ತು. ಹೊಸ ಅಭ್ಯರ್ಥಿಗಳಿಗೆ ಮಣೆಯಾಕುತ್ತಿತ್ತು. ಈ ಬಾರಿ ಬದಲಾವಣೆ ಆಗದಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications