ಅಗ್ನಿವೀರರ ಮೊದಲ ಬ್ಯಾಚ್ ನಿರ್ಗಮನಕ್ಕೆ ಸಜ್ಜು: ಶೇ. 25ರಷ್ಟು ಯುವಕರಿಗೆ ಕಾಯಂ ಹುದ್ದೆ ಭಾಗ್ಯ
ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಅಗ್ನಿಪಥ ಯೋಜನೆಯಡಿ ನೇಮಕಗೊಂಡಿದ್ದ ಯುವಕರ ಮೊದಲ ತಂಡ ಇದೀಗ ತಮ್ಮ ಸೇವಾವಧಿಯನ್ನ ಪೂರ್ಣಗೊಳಿಸುವ ಹಂತಕ್ಕೆ ತಲುಪಿದೆ.
ಹೌದು, ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ಅಗ್ನಿವೀರರ ಮೊದಲ ಬ್ಯಾಚ್ ತಮ್ಮ ನಾಲ್ಕು ವರ್ಷಗಳ ಸೇವೆಯನ್ನ ಯಶಸ್ವಿಯಾಗಿ ಮುಗಿಸಿದ್ದು, ಇದೇ ನವೆಂಬರ್ 21ರಂದು ಸೇವೆಯಿಂದ ನಿರ್ಗಮಿಸಲು ಸಜ್ಜಾಗಿದೆ.

ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ಮೊದಲ ಬ್ಯಾಚ್ ನಿರ್ಗಮನ
2022ರಲ್ಲಿ ಭಾರತ ಸರ್ಕಾರವು ದೇಶದ ರಕ್ಷಣಾ ವಲಯದಲ್ಲಿ ಅಗ್ನಿಪಥ ಎಂಬ ಹೊಸ ನೇಮಕಾತಿ ಯೋಜನೆಯನ್ನ ಪರಿಚಯಿಸಿತ್ತು. ದೇಶದ ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಜೊತೆಗೆ, ಸಶಸ್ತ್ರ ಪಡೆಗಳನ್ನ ಇನ್ನಷ್ಟು ಯೌವನಭರಿತ ಹಾಗೂ ಚುರುಕಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಿತ್ತು.
ಈ ಯೋಜನೆಯಡಿ ಭಾರತೀಯ ನೌಕಾಪಡೆಗೆ ಮೊದಲ ಹಂತದಲ್ಲಿ ಸುಮಾರು 2,100 ಅಗ್ನಿವೀರರನ್ನ ನೇಮಿಸಿಕೊಳ್ಳಲಾಗಿತ್ತು. ಕಠಿಣ ತರಬೇತಿ ಪಡೆದು, ದೇಶದ ಕರಾವಳಿ ಭದ್ರತೆ ಹಾಗೂ ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿರುವ ಈ ಯುವಕರ 4 ವರ್ಷಗಳ ಒಪ್ಪಂದದ ಅವಧಿ ಇದೀಗ ಮುಕ್ತಾಯವಾಗುತ್ತಿದೆ. ಹೀಗಾಗಿ ನವೆಂಬರ್ 21ರಂದು ಈ ಮೊದಲ ಬ್ಯಾಚ್‌ಗೆ ಬೀಳ್ಕೊಡುಗೆ ನೀಡಲು ನೌಕಾಪಡೆ ಸಿದ್ಧತೆ ನಡೆಸಿದೆ.
ಶೇಕಡಾ 25ರಷ್ಟು ಅಗ್ನಿವೀರರಿಗೆ ನೇವಿಯಲ್ಲಿ ಕಾಯಂ ಸೇರ್ಪಡೆ ಅವಕಾಶ
ಅಗ್ನಿಪಥ ಯೋಜನೆಯ ನಿಯಮದ ಪ್ರಕಾರ, ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಂಡ ನಂತರ ಒಟ್ಟು ಯುವಕರಲ್ಲಿ ಶೇಕಡಾ 25ರಷ್ಟು ಅಗ್ನಿವೀರರನ್ನ ಅವರ ಕಾರ್ಯಕ್ಷಮತೆ, ಶಿಸ್ತು ಮತ್ತು ದೈಹಿಕ ಅರ್ಹತೆಯ ಆಧಾರದ ಮೇಲೆ ಸೇನೆಯಲ್ಲಿ ಕಾಯಂಗೊಳಿಸಲಾಗುತ್ತದೆ.
ಇದರ ಅನ್ವಯ, ನೌಕಾಪಡೆಯ ಮೊದಲ ಬ್ಯಾಚ್‌ನ 2,100 ಯುವಕರಲ್ಲಿ ಸುಮಾರು 550 ಜನರನ್ನ ಅಂದರೆ ಶೇ. 25ರಷ್ಟು 'ಧಾರಣ ನೀತಿ' (Retention Policy) ಅಡಿಯಲ್ಲಿ ಕಾಯಂ ಆಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಉಳಿದ ಅಗ್ನಿವೀರರು ನವೆಂಬರ್ 21ರಂದು ಗೌರವಯುತವಾಗಿ ಸೇವೆಯಿಂದ ನಿರ್ಗಮಿಸಲಿದ್ದಾರೆ. ಸೇನೆಯಿಂದ ಹೊರಬರುವ ಈ ಯುವಕರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಲಭ್ಯವಾಗಲಿದೆ.
ತಾಂತ್ರಿಕ ವಿಭಾಗದ ಅಗ್ನಿವೀರರ ಸೇವೆ ಎರಡು ವರ್ಷ ವಿಸ್ತರಣೆ ಸಾಧ್ಯತೆ
ನೌಕಾಪಡೆಯಿಂದ ನಿರ್ಗಮಿಸುತ್ತಿರುವ ಬಹುತೇಕ ಅಗ್ನಿವೀರರು ತಮ್ಮ ಮುಂದಿನ ಭವಿಷ್ಯದತ್ತ ಹೆಜ್ಜೆ ಹಾಕಲಿದ್ದಾರೆ. ಆದರೆ, ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿವೀರರಿಗೆ ಸೇವಾ ವಿಸ್ತರಣೆಯ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ತಾಂತ್ರಿಕ ವಿಭಾಗದ ಅಗ್ನಿವೀರರ ಸೇವೆಯನ್ನ ಮುಂದಿನ ಎರಡು ವರ್ಷಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆಧುನಿಕ ಯುದ್ಧನೌಕೆಗಳು ಹಾಗೂ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನ ನಿರ್ವಹಿಸಲು ತಾಂತ್ರಿಕ ಪರಿಣತಿಯ ಅಗತ್ಯವಿರುವುದರಿಂದ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಭಾರತೀಯ ವಾಯುಪಡೆ ಹಾಗೂ ಭೂಸೇನೆ ಅಗ್ನಿವೀರರ ಬಿಡುಗಡೆ ಯಾವಾಗ?
ನೌಕಾಪಡೆಯ ಬೆನ್ನಲ್ಲೇ, ಭಾರತೀಯ ವಾಯುಪಡೆ ಹಾಗೂ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡಿದ್ದ ಮೊದಲ ಬ್ಯಾಚ್‌ನ ಅಗ್ನಿವೀರರು ಸಹ ತಮ್ಮ ಸೇವಾವಧಿಯನ್ನ ಪೂರ್ಣಗೊಳಿಸುತ್ತಿದ್ದಾರೆ. ವಾಯುಪಡೆ ಮತ್ತು ಭೂಸೇನೆಯ ಅಗ್ನಿವೀರರನ್ನ ಈ ವರ್ಷಾಂತ್ಯದಲ್ಲಿ, ಅಂದರೆ ಡಿಸೆಂಬರ್ 31 ರಂದು ಬಿಡುಗಡೆ ಮಾಡಲಾಗುತ್ತದೆ.
ಇಲ್ಲೂ ಕೂಡ ನಿಯಮದಂತೆ ಶೇ. 25ರಷ್ಟು ಅತ್ಯುತ್ತಮ ಅಗ್ನಿವೀರರನ್ನು ಕಾಯಂಗೊಳಿಸಿ, ಉಳಿದವರನ್ನ ಬಿಡುಗಡೆ ಮಾಡಲಾಗುವುದು. ಸೇನೆಯಿಂದ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನ ಕಲಿತು ಹೊರಬರುತ್ತಿರುವ ಈ ಅಗ್ನಿವೀರರಿಗೆ ವಿವಿಧ ಅರೆಸೇನಾ ಪಡೆಗಳು, ಪೊಲೀಸ್ ಇಲಾಖೆ ಹಾಗೂ ಕಾರ್ಪೊರೇಟ್ ವಲಯದಲ್ಲಿ ಉತ್ತಮ ಉದ್ಯೋಗವಕಾಶಗಳು ಲಭ್ಯವಾಗಲಿವೆ.


Click it and Unblock the Notifications
