ಜಾರ್ಖಂಡ್‌ನಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗವು ಜಾರ್ಖಂಡ್‌ನ ಎಲ್ಲಾ 81 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (JMM) 34 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಪಕ್ಷವು 21 ಸ್ಥಾನಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 16 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಇನ್ನುಳಿದಂತೆ ರಾಷ್ಟ್ರೀಯ ಜನತಾ ದಳ (RJD) 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) (ಲಿಬರೇಶನ್) 2, AJSU ಪಕ್ಷ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ, ಜೆಡಿಯು ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಬಿಜೆಪಿ ಜಾರ್ಖಂಡ್ ಚುನಾವಣಾ ಉಸ್ತುವಾರಿ, ಹಿಮಂತ ಬಿಸ್ವಾ ಶರ್ಮಾ ಅವರು ಎನ್‌ಡಿಎ ಹಿನ್ನಡೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದು, ನಾವು ಅಸ್ಸಾಂನ ಎಲ್ಲಾ ಐದು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೂ ಸಹ ಜಾರ್ಖಂಡ್‌ನಲ್ಲಿನ ಸೋಲು ನನಗೆ ವೈಯಕ್ತಿಕವಾಗಿ ತುಂಬಾ ನೋವು ನೀಡಿದೆ ಎಂದಿದ್ದಾರೆ.
ನಮ್ಮ ಕಾರ್ಯಕರ್ತರ ಅಚಲವಾದ ಸಮರ್ಪಣೆ ಮತ್ತು ಅವಿರತ ಪ್ರಯತ್ನಗಳನ್ನು ನಾನು ನೋಡಿದ್ದೇನೆ. ಈ ಚುನಾವಣೆಯಲ್ಲಿ ಅವರು ತಮ್ಮ ಸರ್ವಸ್ವವನ್ನು ನೀಡಿದರು. ವಿದ್ಯಾರ್ಥಿಗಳು ಮತ್ತು ಯುವಕರ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ಅದನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಬಿಜೆಪಿ ಜಾರ್ಖಂಡ್ ಚುನಾವಣೆಯನ್ನು ಎದುರಿಸಿದೆ ಎಂದು ಸೋಲನ್ನು ಒಪ್ಪಿಕೊಂಡಿದ್ದಾರೆ.
ಜಾರ್ಖಂಡ್ ಅನ್ನು ಒಳನುಸುಳುವಿಕೆಯಿಂದ ರಕ್ಷಿಸಲು ಮತ್ತು ಅದನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ನಾವು ದೂರದೃಷ್ಟಿಯೊಂದಿಗೆ ಹೋರಾಡಿದ್ದೇವೆ. ವಿದ್ಯಾರ್ಥಿಗಳು ಮತ್ತು ಯುವಕರ ಆಕಾಂಕ್ಷೆಗಳನ್ನು ಈಡೇರಿಸುತ್ತೇವೆ. ಆದರೆ, ನಾವು ಜನರ ಆದೇಶವನ್ನು ವಿನಮ್ರವಾಗಿ ಸ್ವೀಕರಿಸಬೇಕು. ಏಕೆಂದರೆ ಅದು ಪ್ರಜಾಪ್ರಭುತ್ವದ ನಿಜವಾದ ಸಾರವಾಗಿದೆ. ಈ ಸವಾಲಿನ ಸಮಯದಲ್ಲಿ, ನಾವು ನಮ್ಮ ಕಾರ್ಯಕರ್ತರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅವರಿಗೆ ಅಚಲವಾದ ಬೆಂಬಲ ನೀಡುತ್ತೇವೆ ಎಂದು ಶರ್ಮಾ ಹೇಳಿದ್ದಾರೆ.

ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳು ಜಾರ್ಖಂಡ್‌ನಲ್ಲಿ ಅಭೂತಪೂರ್ವ ಜಯ ಸಾಧಿಸಿದೆ. ಈ ಸಾಧನೆಗಾಗಿ ಹೇಮಂತ್ ಸೂರೆನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಜಾರ್ಖಂಡ್ ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯನ್ನು ಪ್ರಾರಂಭಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಶರ್ಮಾ ಅಭಿನಂದಿಸಿದ್ದಾರೆ.
ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು ಮೊದಲ ಹಂತದ ಮತದಾನ ನಡೆದಿದ್ದು, 81 ವಿಧಾನಸಭಾ ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಒಳಗೊಂಡಿದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಒಳಗೊಂಡಿರುವ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತು ಎಜೆಎಸ್‌ಯು, ಜೆಡಿ (ಯು) ಮತ್ತು ಎಲ್‌ಜೆಪಿ ಒಳಗೊಂಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ಪ್ರಬಲ ಸ್ಪರ್ಧೆಯಿದೆ.
ಎಕ್ಸಿಟ್ ಪೋಲ್‌ಗಳು ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದವು. ಜೆಎಂಎಂ ನೇತೃತ್ವದ ಮೈತ್ರಿಕೂಟ 25-30 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಜಾರ್ಖಂಡ್‌ನಲ್ಲಿ ಚುನಾವಣಾ ದಿನದಂದು ಶೇಕಡಾ 68.45 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. 2019ರ ಚುನಾವಣೆಯಲ್ಲಿ ಜೆಎಂಎಂ 30, ಬಿಜೆಪಿ 25 ಮತ್ತು ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದಿದ್ದವು. ಮಹಾರಾಷ್ಟ್ರ ಮತ್ತು ಉಪಚುನಾವಣೆ ಫಲಿತಾಂಶಗಳೊಂದಿಗೆ ಜಾರ್ಖಂಡ್‌ನ ಎಲ್ಲಾ 81 ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟವಾಗಿದೆ.












Click it and Unblock the Notifications