ಎಸಿ ರಿಪೇರಿಗೆ ಬಂದವರು ಮಾಡಿದ ಕೆಲಸಕ್ಕೆ ಭಾವುಕಳಾದ ಮಹಿಳೆ: ವೈರಲ್ ಆಗುತ್ತಿದೆ ವಿಡಿಯೋ
ನಮ್ಮಲ್ಲಿ ಅಲ್ಲಲ್ಲಿ ಮಳೆ ಪ್ರಾರಂಭವಾಗಿದೆಯಾದರೂ ಉತ್ತರ ಭಾರತದಲ್ಲಿ ಈಗ ವಿಪರೀತ ಸೆಕೆ. ಕಾಲು ಹೊರಗಿಡುವುದಕ್ಕೂ ಸಾಧ್ಯವಾಗುವುದಿಲ್ಲ. ಅಲ್ಲಿ ಈ ಋತುವಿನಲ್ಲಿ ಎಸಿ ಬೇಕೇ ಬೇಕು. ಆರು ತಿಂಗಳು ವಿಪರೀತ ಬೇಸಿಗೆ ಉಳಿದ ಕಾಲ ಸಾಮಾನ್ಯವಾಗಿದ್ದು ನವೆಂಬರ್ ಬಂತೆಂದರೆ ಮೈ ನಡುಗಿಸುವ ಚಳಿ. ಬೇಸಿಗೆಯ ಸಮಯ ಬಿಟ್ಟರೆ ಮತ್ತೆ ಎಸಿ ಬಳಕೆಯಾಗುವುದೇ ಇಲ್ಲ. ಹಾಗಾಗಿ ಇಲ್ಲಿ ಎಸಿ ರನ್ ಮಾಡುವ ಮುನ್ನ ಒಂದು ಬಾರಿ ಸರ್ವಿಸ್ ಮಾಡಿಸಲೇಬೇಕು. ಹೀಗೆ ದೆಹಲಿಯ ಮಹಿಳೆಯೊಬ್ಬರು ತನ್ನ ಮನೆಯ ಎಸಿ ಸರ್ವಿಸ್ ಮಾಡಿಸುವ ಸಲುವಾಗಿ ಟೆಕ್ನಿಶಿಯನ್‌ನನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಮನೆಗೆ ಬಂದಿರುವ ಎಸಿ ಟೆಕ್ನಿಶಿಯನ್ ನಡೆದುಕೊಂಡಿರುವ ರೀತಿಗೆ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಮಹಿಳೆ ಸಾಮಾನ್ಯವಾಗಿ ತಾವು ಬರೆದ ವರ್ಣ ಚಿತ್ರಗಳು, ಕ್ರಾಫ್ಟ್ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಈ ಮಹಿಳೆಯ ಹೆಸರು ಮೆಹಕ್ ವಿಠಲ್. ಇದೀಗ ಅವರು ಎಸಿ ಟೆಕ್ನಿಶಿಯನ್‌ಗಳ ಬಗ್ಗೆಯೂ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಎಸಿ ತಂತ್ರಜ್ಞರು ಅನಿರೀಕ್ಷಿತವಾಗಿ ತಮ್ಮ ಕೆಲಸದ ಸಮಯದಲ್ಲಿ ವಿರಾಮ ತೆಗೆದುಕೊಂಡು ತಮ್ಮ ಕಲಾಕೃತಿಗೆ ಮನಸೋತಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆ ಹೃದಯಸ್ಪರ್ಶಿ ಕ್ಷಣವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎಸಿ ಟೆಕ್ನಿಶಿಯನ್‌ಗಳು ಕೋಣೆಯ ಸುತ್ತಲೂ ಆಚೆ ಈಚೆ ಹೋಗುತ್ತಿರುವುದನ್ನು ಮೆಹಕ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಾಣಬಹುದು. ಹೀಗೆ ಓಡಾಡುತ್ತಿರುವಾಗ ಮೆಹಕ್ ಅವರ ಕಲಾ ಕೃತಿಗಳು ಅವರ ಕಣ್ಣಿಗೆ ಬಿದ್ದಿವೆ. ಹಾಗಂತ ಆ ಕಲಾಕೃತಿಗಳ ಮೇಲೆ ಅವರು ಸುಮ್ಮನೆ ಕಣ್ಣಾಡಿಸಲಿಲ್ಲ. ಬದಲಿಗೆ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಪ್ರತಿಯೊಂದಯ ತುಣುಕುಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದಾರೆ.
ನಿಧಾನವಾಗಿ ಅವುಗಳನ್ನು ತಮ್ಮ ಕೈಗಳಿಂದ ಎತ್ತಿಕೊಂಡು ಅದರ ಅಂದ ಚಂದವನ್ನು ಆಸ್ವಾದಿಸಿದ್ದಾರೆ. ಇಬ್ಬರೂ ಕಲಾಕೃತಿಯ ಬಗ್ಗೆ ಚರ್ಚೆಗೆ ಇಳಿದಿದ್ದಾರೆ. ಕುತೂಹಲ ಮತ್ತು ಮೆಚ್ಚುಗೆಯಿಂದ ವರ್ಣಚಿತ್ರಗಳನ್ನು ಪರಿಶೀಲಿಸಿದ್ದಾರೆ. ಒಂದು ಹಂತದಲ್ಲಿ, ಆ ಕಲಾಕೃತಿಗಳ ಅಂದಕ್ಕೆ ಬೆರಗಾದ ಅವರು ತಾವು ಬಂದಿರುವ ಕೆಲಸವನ್ನೇ ಮರೆತು ಅದರಲ್ಲೇ ಮುಳುಗಿ ಹೋಗಿರುವಂತೆ ಭಾಸವಾಗಿದೆ. ಆ ಚಿತ್ರಕಲೆಗಳ ಹಿಂದಿನ ಶ್ರಮ ಮತ್ತು ಸೃಜನಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಮೆಹಕ್, ಅವರು ನನ್ನ ಎಸಿಯನ್ನು ಸರಿಪಡಿಸುವುದಲ್ಲದೆ, ನನ್ನ ದಿನವನ್ನೂ ಸುಂದರಗೊಳಿಸಿದರು ಎಂದು ಬಣ್ಣಸಿದ್ದಾರೆ. ಅಂತಹ ಆರೋಗ್ಯಕರ ಮತ್ತು ನೈಜ ಪ್ರತಿಕ್ರಿಯೆಗಳಿಂದ ನನ್ನ ಹೃದಯ ತುಂಬಿದೆ ಎಂದೂ ಹೇಳಿಕೊಂಡಿದ್ದಾರೆ.
ಹಲವರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ತಮ್ಮ ಹವ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲವರು ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಭರಾಟೆಯಲ್ಲಿ ಬದಿಗಿಟ್ಟ ಕಲಾತ್ಮಕ ಹವ್ಯಾಸಗಳನ್ನು ಮೆಲುಕು ಹಾಕಿದ್ದಾರೆ. ಇನ್ನು ಕೆಲವರು ಈ ಸಂವಾದವನ್ನು ಆರೋಗ್ಯಕರ ಎಂದು ವಿವರಿಸಿದ್ದಾರೆ. ಅಪರಿಚಿತರಿಂದ ನಿಜವಾದ ಮೆಚ್ಚುಗೆಯ ಸಣ್ಣ ಕ್ಷಣಗಳು ಹೆಚ್ಚು ಅರ್ಥಪೂರ್ಣವೆಂದು ಪರೋಕ್ಷವಾಗಿ ಸೂಚಿಸಿದ್ದಾರೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications