ತಿಂಗಳ ಸಂಬಳ 90 ಸಾವಿರ, ಆದರೆ ಖರ್ಚು ಕೇವಲ 25 ಸಾವಿರ; ದೆಹಲಿ ಮಹಿಳಾ ಅಧಿಕಾರಿಯ ಮಾಸಿಕ ಬಜೆಟ್ Viral
ರಾಷ್ಟ್ರ ರಾಜಧಾನಿ ನವದೆಹಲಿಯಂತಹ ಮಹಾನಗರದಲ್ಲಿ ಜೀವನ ನಡೆಸುವುದು ಸಾಮಾನ್ಯ ಮಾತಲ್ಲ. ಗಗನಕ್ಕೇರುತ್ತಿರುವ ಬೆಲೆ ಏರಿಕೆ, ದುಬಾರಿ ಬಾಡಿಗೆ ಹಾಗೂ ದೈನಂದಿನ ಖರ್ಚು-ವೆಚ್ಚಗಳ ನಡುವೆ ಬಜೆಟ್ ಕಾಯ್ದುಕೊಳ್ಳುವುದು ಬಹುತೇಕರಿಗೆ ಸವಾಲಿನ ಕೆಲಸ. ಆದರೆ, ತಿಂಗಳಿಗೆ ಬರೋಬ್ಬರಿ 90,000 ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಮಹಿಳಾ ಉದ್ಯೋಗಿಯೊಬ್ಬರು ಕೇವಲ 25,000 ರೂಪಾಯಿಗಳಲ್ಲಿ ದೆಹಲಿಯಲ್ಲಿ ತಮ್ಮ ತಿಂಗಳ ಜೀವನವನ್ನು ಹೇಗೆ ಸುಸೂತ್ರವಾಗಿ ನಡೆಸುತ್ತಿದ್ದಾರೆ ಎಂಬುದನ್ನು ಅವರು ವಿವರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈಕೆಯ ಮಿತವ್ಯಯದ ಜೀವನಶೈಲಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
2022 ರಲ್ಲಿ ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಲೆವೆಲ್-7 ಸರ್ಕಾರಿ ಉದ್ಯೋಗಿಯಾಗಿರುವ ಕೃತಿಕಾ, ಪ್ರಸ್ತುತ ದೆಹಲಿಯಲ್ಲಿ ಸಹಾಯಕ ಸೆಕ್ಷನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಟೈರ್-1 ನಗರದಲ್ಲಿ ತಮ್ಮ ಮಾಸಿಕ ಖರ್ಚು-ವೆಚ್ಚಗಳ ಸಂಪೂರ್ಣ ವಿವರವನ್ನು ನೀಡಿದ್ದಾರೆ.

"ನನ್ನ ಖರ್ಚು ಸ್ವಲ್ಪ ಕಡಿಮೆಯೇ ಇದೆ ಎಂದು ನನಗೂ ತಿಳಿದಿದೆ. ಆದರೆ ನವದೆಹಲಿಯಲ್ಲಿ ವಾಸಿಸುತ್ತಿರುವ 28 ವರ್ಷದ ಸರ್ಕಾರಿ ಅಧಿಕಾರಿಯಾಗಿ ನಾನು ಇಷ್ಟೇ ಖರ್ಚು ಮಾಡುವುದು" ಎಂದು ಕೃತಿಕಾ ಹೇಳಿದ್ದಾರೆ. ಇದೇ ವಿಡಿಯೋದ ಕಾಮೆಂಟ್ ಸೆಕ್ಷನ್‌ನಲ್ಲಿ ತಾವು ಕೈಗೆ 90,000 ರೂಪಾಯಿ ಸಂಬಳ ಪಡೆಯುತ್ತಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.
ದೆಹಲಿಯಲ್ಲಿ ಕೃತಿಕಾ ಅವರ ಖರ್ಚಿನ ವಿವರ
ಕೃತಿಕಾ ಅವರು ತಮ್ಮ ಸ್ನೇಹಿತೆಯೊಂದಿಗೆ 2 ಬಿಎಚ್‌ಕೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಮನೆಯ ಬಾಡಿಗೆಗೆ ಇವರ ಪಾಲಿಗೆ ತಿಂಗಳಿಗೆ 11,500 ರೂಪಾಯಿ ಬರುತ್ತದೆ, ಇದು ಅವರ ಅತಿ ದೊಡ್ಡ ಖರ್ಚಾಗಿದೆ. ಊಟಕ್ಕಾಗಿ ಇಬ್ಬರೂ ಸೇರಿ ಓರ್ವ ಅಡುಗೆಯವರನ್ನು ನೇಮಿಸಿಕೊಂಡಿದ್ದು, ಅವರಿಗೆ ತಿಂಗಳಿಗೆ 5,000 ರೂಪಾಯಿ ನೀಡುತ್ತಾರೆ. ಇದರಲ್ಲಿ ಕೃತಿಕಾ ಅವರ ಪಾಲು 2,500 ರೂಪಾಯಿಗಳು. ಇನ್ನು ದಿನಸಿ ಹಾಗೂ ಬ್ಲಿಂಕಿಟ್, ಜೆಪ್ಟೋ ಮುಂತಾದ ಆನ್‌ಲೈನ್ ಆ್ಯಪ್‌ಗಳ ಮೂಲಕ ಖರೀದಿಸುವ ಇತರೆ ಅಗತ್ಯ ವಸ್ತುಗಳಿಗಾಗಿ ತಿಂಗಳಿಗೆ 4,000 ದಿಂದ 5,000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.
ದೆಹಲಿಯ ದುಬಾರಿ ಕ್ಯಾಬ್ ಮತ್ತು ಸಾರಿಗೆ ವೆಚ್ಚವನ್ನು ಉಳಿಸಲು ಕೃತಿಕಾ ಸ್ಕೂಟಿಯನ್ನು ಬಳಸುತ್ತಾರೆ. "ನನ್ನ ದೈನಂದಿನ ಪ್ರಯಾಣಕ್ಕಾಗಿ ನಾನು ಸ್ಕೂಟಿ ಬಳಸುತ್ತೇನೆ, ಇದಕ್ಕೆ ಪೆಟ್ರೋಲ್‌ಗೆ ತಿಂಗಳಿಗೆ ಸುಮಾರು 1,500 ರೂಪಾಯಿ ಖರ್ಚಾಗುತ್ತದೆ" ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ದೆಹಲಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಯಿಂದಾಗಿ ಅವರು ಈವರೆಗೂ ಯಾವುದೇ ವಿದ್ಯುತ್ ಬಿಲ್ ಪಾವತಿಸಿಲ್ಲ. ಇನ್ನು ವೈಫೈ, ಗ್ಯಾಸ್, ಆರ್‌ಒ ನೀರಿನ ವೆಚ್ಚ ತಿಂಗಳಿಗೆ ಸುಮಾರು 1,000 ರೂಪಾಯಿ ಬರುತ್ತದೆ. ನೆಟ್‌ಫ್ಲಿಕ್ಸ್‌ನಂತಹ ಮನರಂಜನಾ ಚಂದಾದಾರಿಕೆಗಳಿಗೆ ಸ್ನೇಹಿತರು ಮತ್ತು ಕುಟುಂಬದವರ ಖಾತೆಯನ್ನು ಬಳಸುವುದರಿಂದ ಆ ಖರ್ಚು ಶೂನ್ಯವಾಗಿದೆ.
ಮಿಂತ್ರಾ ಮತ್ತು ನೈಕಾದಂತಹ ಆನ್‌ಲೈನ್ ವೆಬ್‌ಸೈಟ್‌ಗಳ ಮೂಲಕ ಬಟ್ಟೆ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ಖರೀದಿಗಾಗಿ 3,000 ದಿಂದ 4,000 ರೂಪಾಯಿ ಮೀಸಲಿಡುತ್ತಾರೆ. ಅಂತಿಮವಾಗಿ, ಹೊರಗಡೆ ಊಟ ಮಾಡಲು ಗರಿಷ್ಠ 2,000 ರೂಪಾಯಿ ಮಾತ್ರ ಖರ್ಚು ಮಾಡುತ್ತಾರೆ. "ನಾನು ತುಂಬಾ ಒಳ್ಳೆಯ ಹುಡುಗಿ, ಹಾಗಾಗಿ ಬಹುತೇಕ ಮನೆಯಲ್ಲಿಯೇ ಮಾಡಿದ ಊಟವನ್ನೇ ಸವಿಯುತ್ತೇನೆ" ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ, ತಮ್ಮ 90,000 ರೂ.ಗಳ ಮಾಸಿಕ ಆದಾಯದಲ್ಲಿ ಕೃತಿಕಾ ಕೇವಲ 25,000 ರೂಪಾಯಿಗಳನ್ನು ಮಾತ್ರ ದೈನಂದಿನ ಜೀವನಕ್ಕೆ ಖರ್ಚು ಮಾಡುತ್ತಾರೆ. ಆದಾಗ್ಯೂ, ಈ ಲೆಕ್ಕಾಚಾರದಲ್ಲಿ ಪ್ರವಾಸಗಳು ಅಥವಾ ಹಾಸಿಗೆ ವಸ್ತುಗಳ ಖರೀದಿಯಂತಹ ಆಕಸ್ಮಿಕ ಹಾಗೂ ಒನ್-ಟೈಮ್ ವೆಚ್ಚಗಳನ್ನು ಸೇರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೆಟ್ರೋ ಸಿಟಿಯಲ್ಲಿ ಇಷ್ಟೊಂದು ಉಳಿತಾಯ ಮಾಡುವ ಅವರ ಈ ವಿಡಿಯೋ ಯುವಜನತೆಗೆ ಉತ್ತಮ ಸಂದೇಶ ನೀಡಿದೆ.












Click it and Unblock the Notifications