ದಿಲ್ಲಿ ದಾಖಲೆ ಮತದಾನ: ಚು. ಆಯೋಗಕ್ಕೆ ತಲೆ ಬಿಸಿ
ದೆಹಲಿ, ಡಿ. 5: ಛತ್ತೀಸ್ ಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ರಾಜಸ್ಥಾನ ಸೇರಿದಂತೆ ದೆಹಲಿ ಅಸೆಂಬ್ಲಿ ಚುನಾವಣೆಗಳಲ್ಲಿ ಅಭೂತಪೂರ್ವ ದಾಖಲೆಯ ಮತದಾನವಾಗಿದೆ. ಮತದಾರರಿಗೆ ಅದ್ಯಾವ ರಾಜಕೀಯ ಪಕ್ಷ/ ವ್ಯವಸ್ಥೆ ಮೇಲೆ ಸಿಟ್ಟಿತ್ತೋ ಅದಕ್ಕೆ ಸರಿಯಾಗಿ ಪಾಠ ಕಲಿಸಬೇಕೆಂದರೆ ಮತದಾನವೊಂದೇ ಸರಿಯಾದ ಮಾರ್ಗ ಎಂದು ಮತ ಚಲಾಯಿಸಿದ್ದಾರೆ. ಫಲಿತಾಂಶ ಏನೇ ಇರಲಿ ಮತದಾರ ಪ್ರಭು ಡಿಸ್ಟಿಂಕ್ಷನ್ ನಲ್ಲಿ ಮತದಾನ ಮಾಡಿರುವುದು ನಿಜಕ್ಕೂ ಸ್ತುತ್ಯರ್ಹ. ಆಲಸ್ಯ ತೊರೆದು ಮುಕ್ಕಾಲು ಪಾಲು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುವುದು ಶ್ಲಾಘನೀಯ.
ನಿನ್ನೆ ದಿಲ್ಲಿಯಲ್ಲೂ ಮತದಾರ ಶೇ. 75ರ ಗಡಿ ದಾಟಿ ಮತಚಲಾಯಿಸಿದ್ದಾನೆ. ಇದುವರೆಗೆ ದೆಹಲಿ ವಿಧಾನಸಭೆ ಚುನಾವಣೆಯೆಂದರೆ ಬಿಜೆಪಿ ಕಾಂಗ್ರೆಸ್ ಮಧ್ಯೆಯಷ್ಟೇ ನಡೆಯುತ್ತಿದ್ದ ಹಾವು ಏಣಿ ಆಟವಾಗಿತ್ತು. ಆದರೆ ಈ ಬಾರಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಎಂಟ್ರಿ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತದಾರ ಈ ಪಾಟಿ ಮತಗಟ್ಟೆಗೆ ನಡೆದುಬಂದಿರುವುದು ನೋಡಿದರೆ ಅದು ಆಮ್ ಆದ್ಮಿಯ ಕಡೆಗಿನ ಒಲವು ಎಂದು ಅರ್ಥೈಸಿಕೊಳ್ಳಬಹುದಾ? ನೋಡೋಣ ಡಿ. 8ರಂದು ಏನಾಗುತ್ತದೋ!?

ಆದರೆ ಚುನಾವಣೆ ಆಯೋಗ ರಾಷ್ಟ್ರ ರಾಜಧಾನಿಯಲ್ಲೇ ವಿಫಲವಾಗಿದೆ. ಇರುವ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಗ ಮತದಾನಕ್ಕೆ ಅವಕಾಶವಿಲ್ಲದೇ ಹೋಗಿದೆ. ನೂರಾರು ಬೂತುಗಳಲ್ಲಿ ಮತದಾನವನ್ನೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಹೇಗೋ ಮ್ಯಾನೇಜ್ ಮಾಡಿ ಒಂದೆರಡು ಗಂಟೆ ನಂತರ ಮತದಾನ ಮುಂದುವರಿದಿದೆ. ಆದರೆ ಇದು ಪೂರ್ವನಿಗದಿತ ಅವಧಿ ಮೀರಿದ ನಂತರವೂ ಮುಂದುವರಿದಿದೆ. ( ಪತಿಯ ಸಾವಿನ ಮಧ್ಯೆಯೂ ಪತ್ನಿಯಿಂದ ಮತದಾನ )
70 ಕ್ಷೇತ್ರಗಳ ಚುನಾವಣೆಗೇ ಹೀಗಾದರೆ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮತದಾನ ಸರಾಗವಾಗಿ ನಡೆಯುತ್ತದೆ ಎಂಬುದಕ್ಕೆ ಏನು ಖಾತ್ರಿ. ಚುನಾವಣಾ ಆಯೋಗ ನಿಜಕ್ಕೂ ಈಗಲೇ ಎಚ್ಚೆತ್ತುಕೊಳ್ಳಬೇಕು. ದಿಲ್ಲಿಯಲ್ಲಿ ನಿನ್ನೆ ನೂರಾರು ಬೂತುಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನುಗಳೇ ( 112 EVMs ) ಕೈಕೊಟ್ಟಿವೆ.
ಖುದ್ದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೇ ಮತದಾನಕ್ಕೆಂದು ಬಂದಾಗ ಎಡವಟ್ಟು ಆಗಿದೆ. ಮೊದಲ ಪ್ರಜೆಯಾಗಿದ್ದವರು ಜನಸಾಮಾನ್ಯನಂತೆ ಕ್ಯೂನಲ್ಲಿ ನಿಂತು ತಮ್ಮ ಪ್ರಜಾತಾಂತ್ರಿಕ ಹಕ್ಕನ್ನು ಚಲಾಯಿಸಲು ಬಂದ ಕಲಾಂ ಸಾಹೇಬರಿಗೆ ಒಳಗೆ ಮತಯಂತ್ರ ಕೆಟ್ಟುನಿಂತಿದ್ದರಿಂದ ಮತಗಟ್ಟೆಯಲ್ಲಿ 1 ಗಂಟೆ ಕಾಲ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಎಷ್ಟೂ ಅಂತ ಅವರೂ ಕಾಯುತ್ತಾರೆ. ಕೊನೆಗೆ ಬೇಸರಿಸಿಕೊಂಡು ಮನೆಗೆ ವಾಪಸಾಗಿದ್ದಾರೆ. ಆದರೆ ಮತ್ತೆ ಒಂದು ಗಂಟೆಯ ನಂತರ ಮತಯಂತ್ರ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಬಂದು ಮತ ಚಲಾಯಿಸಿ ಹೋಗಿದ್ದಾರೆ. ಗಮನಿಸಿ, ಇದು ಅತ್ಯಂತ ಪ್ರತಿಷ್ಠಿತ, ಗಣ್ಯಾತಿಗಣ್ಯ ವ್ಯಕ್ತಿಗಳು ವಾಸಿಸುವ ಪ್ರದೇಶ (K Kamraj Marg). ಇಲ್ಲೇ ಆಯೋಗ ಫೇಲಾಗಿದೆ.
ಇಲ್ಲೇ ಅಲ್ಲ. ಇನ್ನೂ ನೂರಾರು ಕಡೆ ಇಂತಹ ಅಚಾತುರ್ಯಗಳು (malfunctioning of EVMs) ನಡೆದಿವೆ. ಆದರೂ ಜನ ಬೇಸರಿಸಿಕೊಳ್ಳದೆ ರಾತ್ರಿ 7 ಗಂಟೆಯ ನಂತರವೂ ಭಾರಿ ಪ್ರಮಾಣದಲ್ಲಿ ಮತದಾನ ಮಾಡಿಹೋಗಿದ್ದಾರೆ.
ಹೋಗಿ ಬನ್ನಿ ಮತದಾರರೇ... ಮತ್ತೆ ಮುಂದಿನ ವರ್ಷವೂ ಬಂದು ಹೀಗೆ ದಾಖಲೆಯ ಸಂಖ್ಯೆಯಲ್ಲಿ ಲೋಕಸಭಾ ಚುನಾವಣೆಗೂ ಮತದಾನ ಮಾಡಿಹೋಗಿ. ಬೇರೆ ರಾಜ್ಯಗಳ ಮತದಾರರೂ ಇದರಿಂದ cue ಪಡೆದು ಅವರೂ ಡಿಸ್ಟಿಂಕ್ಷನಿನಲ್ಲಿ ಮತ ಚಲಾಯಿಸುವವರಂತಾಗಲಿ. ಆ ವೇಳೆಗೆ ಆಯೋಗ ಎಚ್ಚೆತ್ತುಕೊಂಡಿರುತ್ತದೆ ಎಂಬ ಸದಾಶಯದೊಂದಿಗೆ ...












Click it and Unblock the Notifications