ಆಪರೇಷನ್ ಕಮಲಕ್ಕೆ ಬಿಜೆಪಿ ಸಜ್ಜು; ಫಡ್ನವೀಸ್ ನೇತೃತ್ವದಲ್ಲಿ ಸಭೆ : ಡಿ ಕೆ ಶಿವಕುಮಾರ್ ಹೇಳಿದ್ದೇನು?
ದೆಹಲಿ, ನವೆಂಬರ್ 08: ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ ಎಂದು ಪ್ರಶ್ನೆಯನ್ನ ಮಾಧ್ಯಮ ಪ್ರತಿನಿಧಿಗಳು ಕೇಳಿದ್ದು, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರು.

ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚನ್ನಾಗಿ ಗೊತ್ತಿದೆ. ಸರ್ಕಾರ ಬೀಳಿಸುವ ಯತ್ನ ಮಹರಾಷ್ಟ್ರದಿಂದ ನಡೆದಿದೆ, ರಾಜ್ಯದ ನಾಯಕರು ಅಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎಂದು ಮರುಪ್ರಶ್ನಿಸಿದಾಗ, "Hundred Things happens, Congress Party will digist (ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ). ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ, ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ, ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು ಎಂದರು.
ಕರ್ನಾಟಕ ಜಗಳಕ್ಕೆ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಹೇಳಿರುವ ಬಗ್ಗೆ ಕೇಳಿದಾಗ, ಪ್ರಧಾನಿಗಳು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಲ್ಲಾ ಅಷ್ಟೇ ಸಾಕು. ನಮ್ಮ ಗ್ಯಾರಂಟಿ, ಕೆಲಸ, ಒಗ್ಗಟ್ಟು ಅವರ ನಿದ್ರೆ ಕೆಡಿಸಿದೆ. ಇದು ಸಂತೋಷದ ವಿಚಾರ, ಅವರಿಗೆ ಅಭಿನಂದನೆಗಳು. ಅದಕ್ಕೆ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ ಎಂದು ಹೇಳಿದರು.












Click it and Unblock the Notifications