ಕೋವಿಡ್ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಏಮ್ಸ್ ಅಧ್ಯಯನ
ನವದೆಹಲಿ, ಜ. 05: ಕೊರೊನಾವೈರಸ್-2 (SARS-CoV-2) ಸೋಂಕು ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಸಂಶೋಧಕರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಏಮ್ಸ್ ಪಾಟ್ನಾದ ಸಂಶೋಧಕರ ನೇತೃತ್ವದ ತಂಡವು 30 ಪುರುಷರ ಮೇಲೆ ಅಧ್ಯಯನ ನಡೆಸಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತ್ತೀಚಿನ ಅಧ್ಯಯನವು ಮಲ, ಲಾಲಾರಸ ಮತ್ತು ಮೂತ್ರದ ಮಾದರಿಗಳಲ್ಲಿ ಕೊರೊನಾವೈರಸ್ ಇರುವುದನ್ನು ಕಂಡುಹಿಡಿದಿದೆ. ಈ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಮಾನವನ ವೃಷಣವನ್ನು ಒಳಗೊಂಡಂತೆ ಹಲವಾರು ಅಂಗಗಳಿಗೆ ಹಾನಿ ಮಾಡುತ್ತದೆ.
ಇದು ಸೆಮಿನಿಫೆರಸ್ ಟ್ಯೂಬ್‌ಗಳಲ್ಲಿ ವ್ಯಾಪಕವಾದ ಸೂಕ್ಷ್ಮಾಣು ಕೋಶಗಳ ಸಾವಿಗೆ ಕಾರಣವಾಗುತ್ತದೆ. ಸೋಂಕು ವೃಷಣ ಅಂಗಾಂಶದಲ್ಲಿ ಹೇರಳವಾಗಿರುವ ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ-2 (ACE2) ವನ್ನು ಹಾನಿ ಮಾಡುತ್ತದೆ.

ಕೊರೊನಾ ಸೋಂಕು ವೀರ್ಯ ರಚನೆ ಮತ್ತು ಫಲವತ್ತತೆಯ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು, ಕೊರೊನಾ ಸೋಂಕಿಗೆ ಒಳಗಾದ ಪುರುಷರ ವೀರ್ಯದಲ್ಲಿ ಕೊರೊನಾವೈರಸ್-2 (SARS-CoV-2 ) ಇರುವುದನ್ನು ಕಂಡು ಹಿಡಿದಿದೆ.
ಏಮ್ಸ್ ಸಂಶೋಧಕರು ವೀರ್ಯದ ಗುಣಮಟ್ಟ ಮತ್ತು ವೀರ್ಯದ ಡಿಎನ್‌ಎ ವಿಘಟನೆಯ ಸೂಚ್ಯಂಕದ ಮೇಲೆ ರೋಗದ ಪರಿಣಾಮವನ್ನು ವಿಶ್ಲೇಷಿಸಿದ್ದಾರೆ. ಇದು ಡಿಎನ್‌ಎಯ ಹಾನಿಯನ್ನು ತಿಳಿಸಿದ್ದು, ಇದರಿಂದಾಗಿ ಸಂಭಾವ್ಯ ವೀರ್ಯ ಹಾನಿಯಾಗುತ್ತದೆ ಎಂದು ಪತ್ತೆ ಮಾಡಿದೆ.
ಈ ಸಂಶೋದನೆಯಲ್ಲಿ 19 ರಿಂದ 45 ವರ್ಷ ವಯಸ್ಸಿನ ಮೂವತ್ತು ಕೊರೊನಾ ಸೋಂಕಿತ ಪುರುಷ ರೋಗಿಗಳು ಏಮ್ಸ್ ಪಾಟ್ನಾ ಆಸ್ಪತ್ರೆಗೆ ದಾಖಲಾಗಿದ್ದು, ಅಕ್ಟೋಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ಅಧ್ಯಯನದಲ್ಲಿ ಭಾಗವಹಿಸಿದ್ದಾರೆ.

ಸಂಶೋಧನೆಯಲ್ಲಿ ಭಾಗವಹಿಸಿದ್ದವರ ವೀರ್ಯವನ್ನು ಎರಡೆರಡು ಬಾರಿ ಪರೀಕ್ಷೆ ಮಾಡಲಾಗಿದೆ. ಮೊದಲ ಮಾದರಿಯಲ್ಲಿ, ವೀರ್ಯದ ಪ್ರಮಾಣ, ಹುರುಪು, ಒಟ್ಟು ಚಲನಶೀಲತೆ, ವೀರ್ಯದ ಸಾಂದ್ರತೆ ಮತ್ತು ಒಟ್ಟು ವೀರ್ಯಾಣುಗಳ ಸಂಖ್ಯೆ ಗಮನಾರ್ಹವಾಗಿ ಎರಡನೇ ಮಾದರಿಯಲ್ಲಿ ಕಡಿಮೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ಕ್ಲಿನಿಕ್‌ಗಳು ಮತ್ತು ವೀರ್ಯ ಬ್ಯಾಂಕಿಂಗ್ ಸೌಲಭ್ಯಗಳು ಕೊರೊನಾ ಸೋಂಕಿತ ಪುರುಷರ ವೀರ್ಯವನ್ನು ಪರೀಕ್ಷೆ ಮಾಡಿ ಪರಿಗಣಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.
ಈ ಚಿಕಿತ್ಸಾಲಯಗಳು ಕೊರೊನಾ ಸೋಂಕು ಹೊಂದಿರುವ ಪುರುಷರನ್ನು ಅವರ ವೀರ್ಯ ಗುಣಮಟ್ಟವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಅವರನ್ನು ಹೊರಗಿಡಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.












Click it and Unblock the Notifications