ಭಾರತದಲ್ಲಿ 5 ರಿಂದ 12 ವರ್ಷದ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ
ನವದೆಹಲಿ, ಏಪ್ರಿಲ್ 21: ಭಾರತದಲ್ಲಿ ಕೊರೊನಾವೈರಸ್ ಹಾವಳಿ ಹೆಚ್ಚುತ್ತಿರುವುದರ ಮಧ್ಯೆ ಮಕ್ಕಳಿಗೆ ಹೆಚ್ಚು ಅಪಾಯ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(DCGI)ದ ವಿಷಯ ತಜ್ಞರ ಸಮಿತಿಯು 5 ರಿಂದ 12 ವರ್ಷದ ಮಕ್ಕಳಿಗೂ ಲಸಿಕೆ ನೀಡುವಂತೆ ಶಿಫಾರಸ್ಸು ಮಾಡಿದೆ.
ದೇಶದಲ್ಲಿ 5 ರಿಂದ 12 ವರ್ಷದ ಮಕ್ಕಳಿಗೆ ಬಯೋಲಾಜಿಕಲ್-ಇ ಸಂಸ್ಥೆಯ ಕೊರ್ಬೋವ್ಯಾಕ್ಸ್ ಲಸಿಕೆಯನ್ನು ನೀಡುವಂತೆ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರದ ತಜ್ಞರ ಸಮಿತಿಯು ಈ ರೀತಿ ಶಿಫಾರಸ್ಸು ನೀಡಿದೆ.
ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ಗೆ ಕಳುಹಿಸಲಾಗಿದೆ. ಡಿಸಿಜಿಐ ಅಂತಿಮ ಒಪ್ಪಿಗೆಗಾಗಿ ಎದುರು ನೋಡಲಾಗುತ್ತಿದ್ದು, ಭಾರತದ ಮೂರನೇ ಸ್ವದೇಶಿ ಲಸಿಕೆಯಾದ ಕೊರ್ಬೆವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ.

ಕೊರ್ಬೆವ್ಯಾಕ್ಸ್ ಲಸಿಕೆಯ ವಿಶೇಷತೆ:
ಬಯೋಲಾಜಿಕಲ್-ಇ ಲಿಮಿಟೆಡ್ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರಿಸೆಪ್ಟರ್ ಬೈಂಡಿಂಗ್ ಡೊಮೈನ್ (RBD) ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ. DCGI ಮೊದಲು 2021ರ ಡಿಸೆಂಬರ್ 28ರಂದು ವಯಸ್ಕರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಕೊರ್ಬೆವ್ಯಾಕ್ಸ್ ಲಸಿಕೆಗೆ ಅನುಮೋದಿಸಿತ್ತು.

ಕೊರ್ಬೆವಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ಮಾರ್ಗದಲ್ಲಿ ನೀಡಲಾಗುತ್ತದೆ. 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ಲಸಿಕೆಯನ್ನು ಸಂಗ್ರಹಿಸಿ ಇಡಲಾಗುತ್ತದೆ. 0.5 ಮಿಲಿ (ಸಿಂಗಲ್ ಡೋಸ್) ಮತ್ತು 5 ಮಿಲಿ (10 ಡೋಸ್) ಸೀಸೆ ಪ್ಯಾಕ್‌ನಂತೆ ನೀಡಲಾಗುತ್ತದೆ.












Click it and Unblock the Notifications