ಮಹಿಳೆಯರಿಗೆ ವಿತರಿಸಿದ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ರಾಹುಲ್ ಗಾಂಧಿ ಫೋಟೋ, ಏನಿದು ವಿವಾದ?
ಕಾಂಗ್ರೆಸ್ ಪಕ್ಷವು ಬಿಹಾರ ಚುನಾವಣೆಗೆ ಸಜ್ಜಾಗುತ್ತಿದೆ. ಇದೇ ಹೊತ್ತಿನಲ್ಲಿ ದೊಡ್ಡ ಎಡವಟ್ಟೊಂದನ್ನು ಮಾಡಿ ವಿವಾದಕ್ಕೆ ಗುರಿಯಾಗಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರನ್ನು ಆಕರ್ಷಿಸಲು ವಿಶಿಷ್ಟ ಅಭಿಯಾನವನ್ನು ಶುರುಮಾಡಿದೆ. ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ ಬಿಹಾರ ರಾಜ್ಯಾದ್ಯಂತ ಐದು ಲಕ್ಷ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಿದೆ. ಆದರೆ ಈ ಅಭಿಯಾನವು ಈಗ ವಿವಾದ ಸೃಷ್ಟಿಸಿದೆ. ಮಹಿಳೆಯರಿಗೆ ವಿತರಿಸಿರುವ ಪ್ಯಾಡ್‌ಗಳ ಒಳಭಾಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಅವರ ಫೋಟೋ ಇದೆ ಎಂಬ ಆರೋಪ ಕೇಳಿಬಂದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಬಿಹಾರದ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಜಾಗೃತಿ ಮೂಡಿಸುವ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷವು ಪ್ರಿಯದರ್ಶಿನಿ ಉಡಾನ್ ಯೋಜನೆಯಡಿಯಲ್ಲಿ ಈ ಪ್ಯಾಡ್‌ಗಳನ್ನು ವಿತರಿಸುತ್ತಿದೆ. ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್ ಮೇಲೆ ಮಾತ್ರವಲ್ಲದೆ ಪ್ಯಾಡ್ ಒಳಗಿನ ಪದರದ ಮೇಲೂ ಮುದ್ರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವೀಡಿಯೊ ವೈರಲ್ ಆಗಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಅನ್ನು ಅನ್‌ಬಾಕ್ಸ್ ಮಾಡುವುದನ್ನು ತೋರಿಸಲಾಗಿದ್ದು, ಪ್ಯಾಡ್‌ನ ಒಳಭಾಗದಲ್ಲಿ ರಾಹುಲ್ ಗಾಂಧಿಯವರ ಚಿತ್ರ ಮುದ್ರಿಸಿರುವುದು ಕಂಡುಬಂದಿದೆ.

ಈ ವಿಡಿಯೋ ಎಕ್ಸ್ ಬಳಕೆದಾರರಿಂದ ಭಾರೀ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, "ರಾಹುಲ್ ಗಾಂಧಿಯವರ ಫೋಟೋ ಇರುವ ಸ್ಯಾನಿಟರಿ ಪ್ಯಾಡ್‌ಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವುದು ಸಬಲೀಕರಣವಲ್ಲ, ಅದು ನಾಚಿಕೆಗೇಡು. ಕಾಂಗ್ರೆಸ್‌ಗೆ ಘನತೆಯ ಬಗ್ಗೆ ಗೌರವವಿಲ್ಲ ಎಂಬುದು ಸ್ಪಷ್ಟ, ಬಿಹಾರ ಚುನಾವಣೆಗಾಗಿ ಇದೆಲ್ಲ ಗಿಮಿಕ್" ಎಂದು ಹೇಳಿದ್ದಾರೆ.
ಹಲವರು ಈ ಕೃತ್ಯವನ್ನು ಅಶ್ಲೀಲ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವನ್ನು ಈ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ. ರಾಹುಲ್ ಗಾಂಧಿಯವರು ಈ ಅಭಿಯಾನವನ್ನು ಹೇಗೆ ಅನುಮೋದಿಸಿದ್ದಾರೆ? ಅವರ ಪಕ್ಷದ ಮಹಿಳಾ ಕಾರ್ಯಕರ್ತೆಯೂ ಸಹ ಇವುಗಳನ್ನು ವಿತರಿಸಲು ಹೇಗೆ ಅನುಮತಿಸಬಹುದು? ಎಂದು ಪ್ರಶ್ನಿಸಿದ್ದಾರೆ.

ನಿತೀಶ್ ಕುಮಾರ್ ಅವರ ಪಕ್ಷದ ವಕ್ತಾರ ನೀರಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಎಂದು ಪ್ರಶ್ನಿಸಿದ್ದು, ಈ ಕಾರ್ಯತಂತ್ರವನ್ನು ಕೇವಲ ಚುನಾವಣಾ ಗಿಮಿಕ್ ಎಂದು ಕರೆದಿದ್ದಾರೆ. ಸಿಎಂ ನಿತೀಶ್ ಕುಮಾರ್ ರಾಜ್ಯದ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಗೌರವದ ಸಂಕೇತ. ಆದರೆ ಅಧಿಕಾರದ ದುರಹಂಕಾರದ ಪ್ರದರ್ಶಿಸಲು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ನಿಮ್ಮ ಮುಖವನ್ನು ಹಾಕುತ್ತೀರಿ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಹೇಳಿದ್ದೇನು?
ಈ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ, "ಬಾಕ್ಸ್ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಚಿತ್ರವಿದೆ. ವಿತರಣೆಯಲ್ಲಿ ನಮಗೆ ಸಹಾಯ ಮಾಡುತ್ತಿರುವ ನಮ್ಮ ಶಾಸಕರು, ಸಹೋದರರು, ತಂದೆಯರ ಚಿತ್ರವಿರುತ್ತದೆ. ಅವರು ಈ ಅರಿವಿನೊಂದಿಗೆ ನಮಗೆ ಸಹಾಯ ಮಾಡುತ್ತಿದ್ದಾರೆ. ಬಿಜೆಪಿಯವರು ವೆಂಡಿಂಗ್ ಮೆಷಿನ್‌ಗಳನ್ನು ಸ್ಥಾಪಿಸಲಿಲ್ಲ. ಆ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯಲು, ಅವರ ವೈಫಲ್ಯವನ್ನು ಮರೆಮಾಡಲು, ರಾಹುಲ್ ಗಾಂಧಿ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications