ರಫೇಲ್ ಯುದ್ದ ವಿಮಾನದ ಬೆಲೆ ಹೇಳಿ, ಐದು ಕೋಟಿ ಗೆಲ್ಲಿ: ಕಾಂಗ್ರೆಸ್ ಆಫರ್
ಪಾಟ್ನಾ, ಅ 16: ರಫೇಲ್ ಯುದ್ದವಿಮಾನದ ಖರೀದಿಯ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಬೆಂಡೆತ್ತುತ್ತಿರುವ ಕಾಂಗ್ರೆಸ್ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಶಿಷ್ಟ ರೀತಿಯ ಆಫರ್ ಅನ್ನು ಸಾರ್ವಜನಿಕರಿಗೆ ನೀಡಿದೆ.
ನಗರದೆಲ್ಲಡೆ ಫ್ಲೆಕ್ಸ್ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು, ರಫೇಲ್ ಯುದ್ದವಿಮಾನ ಖರೀದಿಗೆ, ಫ್ರಾನ್ಸ್ ಸರಕಾರದ ಜೊತೆಗಿನ ಒಪ್ಪಂದದ ಪ್ರಕಾರ, ಕೇಂದ್ರ ಸರಕಾರ ಪ್ರತೀ ವಿಮಾನಕ್ಕೆ ನೀಡುತ್ತಿರುವ ಬೆಲೆ ಎಷ್ಟಿರಬಹುದು ಎಂದು ಹೇಳಿ, ಐದು ಕೋಟಿ ಗೆಲ್ಲಿ ಎನ್ನುವ ಫ್ಲೆಕ್ಸ್ ಹಾಕಿದೆ.
ಇದರ ಜೊತೆಗೆ, ಪ್ರಧಾನಿ ಮೋದಿಯವರ ಕಾಲಾವಧಿಯಲ್ಲಿ ದೇಶದಲ್ಲಿ ಹೊಸದಾಗಿ ನಿರ್ಮಿತವಾಗಿರುವ 35 ವಿಮಾನನಿಲ್ದಾಣಗಳ ಪಟ್ಟಿಯನ್ನು ನೀಡಿ, ಪ್ರಶಸ್ತಿ ಗೆಲ್ಲಿ ಎನ್ನುವ ಆಫರ್ ಅನ್ನೂ ನೀಡಿ, ಆ ಮೂಲಕ ಕೇಂದ್ರ ಸರಕಾರಕ್ಕೆ ಟಾಂಗ್ ನೀಡಿದೆ.

ಕಾಂಗ್ರೆಸ್ ಮುಖಂಡರಾದ ಸಿದ್ದಾರ್ಥ್ ಕ್ಷತ್ರಿಯ, ವೆಂಕಟೇಶ್ ರಾಮನ್ ನಗರದ ಎಲ್ಲಾ ಕಡೆ ಪೋಸ್ಟರ್ ಅನ್ನು ಹಾಕಿದ್ದಾರೆ. ಮೋದಿಯವರು ರಫೇಲ್ ವಿಮಾನದ ಮೇಲೆ ಕೂತಿರುವ ಚಿತ್ರದ ಜೊತೆಗೆ ಮೇಲಿನ ಒಕ್ಕಣೆಯನ್ನು ಹಾಕಲಾಗಿದೆ.
ದಸರಾ ಪೂಜಾ ದಮಾಖಾ ಎಂದು ಫ್ಲೆಕ್ಸ್ ನಲ್ಲಿ ಹಾಕಿ ಕಾಂಗ್ರೆಸ್ ಐದು ಕೋಟಿಯ ಆಫರ್ ಅನ್ನು ನೀಡಿದೆ. ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝೂ, ಈ ಫ್ಲೆಕ್ಸ್ ಬಗ್ಗೆ ನಮಗೇನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದಾರೆ.
ಈ ಫ್ಲೆಕ್ಸ್ ಬಗ್ಗೆ ಕಿಡಿಕಾರಿರುವ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಕಾಂಗ್ರೆಸ್ ಅಧ್ಯಕ್ಷರು ನೂರು ಬಾರಿ ಸುಳ್ಳು ಹೇಳಿದರೂ ಜನ ಇವರ ಮಾತನ್ನು ನಂಬುವುದಿಲ್ಲ. ಈ ಐದು ಕೋಟಿಯ ಆಫರ್ ಅನ್ನು ರಾಹುಲ್ ಗಾಂಧಿಗೆ ನೀಡುವುದು ಉತ್ತಮ ಎಂದು ಸುಶೀಲ್ ವ್ಯಂಗ್ಯವಾಡಿದ್ದಾರೆ.












Click it and Unblock the Notifications