Get Updates
Get notified of breaking news, exclusive insights, and must-see stories!

Central Budget 2026: ಆರ್ಥಿಕ ಸಮೀಕ್ಷೆ - ಕೇಂದ್ರ ಬಜೆಟ್ ಮೇಲಿನ ನಿರೀಕ್ಷೆಗಳೇನು: ರಾಜಾರಾಂ ತಲ್ಲೂರು ಬರಹ

Central Budget 2026: ಭಾನುವಾರ (ಫೆ. 01) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆ ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯವಾಗಿ ದೇಶದ ಆರ್ಥಿಕ ಮುಖ್ಯಸಲಹೆಗಾರರು ಸಿದ್ಧಪಡಿಸುವ ಆರ್ಥಿಕ ಸಮೀಕ್ಷೆ ಬರಲಿರುವ ಬಜೆಟ್‌ಗೆ ತಳಪಾಯ ಎಂದು ಪರಿಗಣಿತವಾಗಿರುತ್ತದೆ. ಆದರೆ, ಪರಿಸ್ಥಿತಿ ಈಗಲೂ ಹಾಗೇ ಉಳಿದಿದೆ ಎನ್ನುವುದು ಖಾತ್ರಿ ಇಲ್ಲ. ಒಂದು ವೇಳೆ ಆರ್ಥಿಕ ಸಮೀಕ್ಷೆ ತಳಪಾಯವಾಗಿ ಬಜೆಟ್ ಸಿದ್ಧಪಡಿಸಿದ್ದರೆ, ಈ ಬಾರಿಯ ಬಜೆಟ್‌ನಿಂದ ಏನು ನಿರೀಕ್ಷಿಸಬಹುದು ಎಂದರೆ.. ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

1. ಕೈಗಾರಿಕಾ ಉತ್ಪಾದನೆ ಹೆಚ್ಚದಿದ್ದರೆ ದೇಶ ರಫ್ತು ಮಾಡುವುದು ಏನನ್ನು? ಹಾಗಾಗಿ ನಾವು "ಮುಕ್ತ ವಾಣಿಜ್ಯ ಒಪ್ಪಂದ" (FTA) ಎಂದು ಬೊಂಬಡಾ ಹೊಡೆಯುತ್ತಿರುವ ಒಪ್ಪಂದಗಳು, ಅಂತಿಮವಾಗಿ ಇಲ್ಲಿಗೆ ಆಮದು ಸರಕುಗಳನ್ನು ತಂದು ಸುರಿಯಲಿವೆ. ಅದನ್ನು ಸರ್ಕಾರ "ಹಾಫ್ ರೇಟ್-ಚೀಪ್ ರೇಟ್"ವಿದೇಶೀ ಮಾಲು ಸಿಗಲಿದೆ ಎಂದು ಪ್ರಚಾರ ಮಾಡುತ್ತಿದೆ. ಈ ಬೆಳವಣಿಗೆಯನ್ನು ಸೀದಾ ಆಗಗೊಟ್ಟರೆ, ದೇಶ ಇಲ್ಲಿಯ ತನಕ ಬಡಬಡಿಸುತ್ತಿದ್ದ "ಆತ್ಮನಿರ್ಭರ", "ಸ್ವದೇಶೀ" ಇತ್ಯಾದಿ ಮಂತ್ರಗಳೆಲ್ಲ ತರಗೆಲೆಗಳಂತೆ ಹಾರಿ ಹೋಗಲಿವೆ. ಇಲ್ಲಿನ ಗೋಮೂತ್ರ, ಗೋಮಯ ಎಲ್ಲಿಗೆ ರಫ್ತು ಮಾಡೋಣ?! ಹಾಗಾಗಿ ಈ FTAಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಹೆಣಗಾಡಬೇಕಾಗುತ್ತದೆ.

Nirmala Sitharaman

2. ಜಾಗತಿಕವಾಗಿ ರಾಜಕೀಯ - ಆರ್ಥಿಕ ಅಸ್ಥಿರತೆಯ ಹೊಡೆತಕ್ಕೆ, ಟ್ರಂಪಾಪತಿಗಳ ತಾರಿಫ್ ಆರ್ಭಟಕ್ಕೆ, ದೇಶದ ಆರ್ಥಿಕತೆಯ ವಿಮಾನ "ಟರ್ಬ್ಯುಲೆನ್ಸ್" ಗೆ ತುತ್ತಾಗಲಿರುವುದು ಖಚಿತವಾಗಿದೆ. ಹಾಗಾಗಿ, ಸೀಟ್‌ಬೆಲ್ಟ್ ಬಿಗಿ ಮಾಡಿಕೊಳ್ಳಲು ದೇಶದ ಜನತೆಗೆ ಸಿಗ್ನಲ್ ಸಿಗಲಿದೆ.

3. ಡಾಲರ್ ಎದುರು ರಸಾತಳ ತಲುಪಿರುವ ರೂಪಾಯಿ, ಕೈಗೆ ಸಿಗದಂತೆ ಏರುತ್ತಿರುವ ಚಿನ್ನ-ಬೆಳ್ಳಿ, ಇದರಲ್ಲೆಲ್ಲ ಸರ್ಕಾರದ ತಪ್ಪೇನಿಲ್ಲ, ಅದೆಲ್ಲ ತಮ್ಮಷ್ಟಕ್ಕೆ ತಾವೇ ಆಗುತ್ತಿರುವ ವಿದ್ಯಮಾನಗಳು ಎಂದು ಬಿಂಬಿಸುವ ಪ್ರಯತ್ನ ಬಜೆಟ್ ಭಾಗ ಆಗಲಿದೆ.

4. ಸೇವಾ (ಅರ್ಥಾತ್ ಐಟಿ ಎಂದು ಓದಿಕೊಳ್ಳಿ) ವಲಯ ಪಡೆಯುವ ಲಾಭವನ್ನೆಲ್ಲಾ ಪಡೆದು, ಕಷ್ಟಕಾಲದಲ್ಲಿ ದೇಶದ ಕೈಬಿಡಲಿರುವುದು ಖಚಿತ ಎಂಬ ಆತಂಕ ವ್ಯಕ್ತವಾಗುತ್ತಿರುವುದರಿಂದ, ಕಡೆಗೂ ಸಾಂಪ್ರದಾಯಿಕ (ನೆಹರೂ ಪ್ರಣೀತ) ಕೈಗಾರಿಕಾ ಉತ್ಪಾದನೆಗಳಿಗೆ ಮಣೆ ಹಾಕುವ, MSMEಗಳತ್ತ ಗಮನಾರ್ಹ ಕೃಪೆ ತೋರಿಸುವ ಸಾಧ್ಯತೆಗಳಿವೆ. ಇದನ್ನೇ ಹೆಚ್ಚಿನಂಶ ಸರ್ಕಾರದ ಮಂದಿ ಈ ಬಜೆಟ್ "ಮೇಜರ್ ಎಕನಾಮಿಕ್ ರಿಫಾರ್ಮ್ಸ್" ತರಲಿದೆ ಎಂದು ಹೇಳುತ್ತಿರುವುದು.

5. ಸರ್ಕಾರ ಇರುವುದು ವ್ಯವಹಾರ ನಡೆಸುವುದಕ್ಕಲ್ಲ ಎಂದು ಪ್ರಧಾನಿಗಳು ಹನ್ನೊಂದು ವರ್ಷಗಳಲ್ಲಿ ಹೇಳಿರುವುದು ಎಷ್ಟನೇ ಬಾರಿ ಎಂದು ಲೆಕ್ಕ ಇಲ್ಲ. ಈಗ ಅನಿವಾರ್ಯವಾಗಿ ಸರ್ಕಾರ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾಗಿದೆ. ಹಾಗಾಗಿ, ಇಟಾಲಿಯನ್ ಮೂಲದ ಅಮೆರಿಕನ್ ಅರ್ಥ ಶಾಸ್ತ್ರಜ್ಞೆ Mariana Mazzucato ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. "State Machinery needs to become an entrepreneurial state." ಇದು ಈ ಬಾರಿ ಬಜೆಟ್‌ನಲ್ಲಿ ಕೋರ್ಸ್ ಕರೆಕ್ಷನ್‌ಗಳಿಗೆ ಹಾದಿ ತೆರೆಯಬಹುದು.

6. ಸಬ್ಸಿಡಿ ಏನಿದ್ದರೂ ಉದ್ಯಮಿಗಳ, ಕಾಸಿದ್ದವರ ಹಕ್ಕು (PLIಎಂದು ಓದಿಕೊಳ್ಳಿ). ಬಡವರಿಗೆ, ಅಶಕ್ತರಿಗೆ, ರೈತರಿಗೆ ಸಬ್ಸಿಡಿಗಳಲ್ಲಿ ಕಡಿತಕ್ಕೆ, ಕರ್ನಾಟಕದ ಗ್ಯಾರಂಟಿ ಯೋಜನೆಗಳಂತಹ DBT ನಿಯಂತ್ರಣಕ್ಕೆ ಕ್ರಮಗಳು ಈ ಬಜೆಟ್‌ನಲ್ಲಿ ವ್ಯಕ್ತಗೊಳ್ಳಬಹುದು.

7. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸರ್ಕಾರದ ಜವಾಬ್ದಾರಿ. ಆ ಗುರಿ ತಲುಪಲು ಅದು ಅಗತ್ಯ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಹೊಸ ರೀತಿಯ ಮಾರುಕಟ್ಟೆ ಆಟಗಳಿಗೆ ಸಿದ್ಧವಾಗಬೇಕು. ಹಳೆಯ ನಿಯಮಗಳು ಈಗ ಅಪ್ರಸ್ತುತವಾಗಿವೆ, ಹೊಸ ನಿಯಮಗಳು ಇನ್ನೂ ರೂಪುಗೊಂಡಿಲ್ಲ. ಹಾಗಾಗಿ ಇದು ಸಂಕ್ರಾಂತಿ ಕಾಲ. ಇದಕ್ಕೆ ಸಿದ್ಧಗೊಳ್ಳದೇ ಬೇರೆ ಆಯ್ಕೆ ಇಲ್ಲ. ಎಂದು ಆರ್ಥಿಕ ಸಮೀಕ್ಷೆ ಸರ್ಕಾರಕ್ಕೆ ಸ್ಪಷ್ಟ ಶಬ್ದಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇದು ಕಳೆದ 10 ವರ್ಷಗಳ ಸಂಭ್ರಮಾಭಿವ್ಯಕ್ತಿಗಳಿಗೆ ಹೋಲಿಸಿದರೆ, ಗಂಭೀರವಾದ ಬೆಳವಣಿಗೆ. ಬಜೆಟ್-ಪ್ರಧಾನಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಇದೆ.

ಎಲ್ಲ ಕುತೂಹಲಗಳಿಗೆ ಭಾನುವಾರ ತೆರೆ ಬೀಳಲಿದೆ. ಕಾದು ನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+