CBSE Class 12 Results 2023: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ.87.33ರಷ್ಟು ವಿದ್ಯಾರ್ಥಿಗಳು ಪಾಸ್
CBSE Class 12 Results 2023: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಇಂದು (ಮೇ 12) ಪ್ರಕಟವಾಗಿದೆ.
ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳು DigiLocker ಮತ್ತು UMANG ಅಪ್ಲಿಕೇಶನ್‌ಗಳ ಜೊತೆಗೆ results.cbse.nic.in ಮತ್ತು cbseresults.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ಅಲ್ಲದೆ, ಮಂಡಳಿಯು ಈ ಫಲಿತಾಂಶಗಳನ್ನು IVRS ಮತ್ತು SMS ಮೂಲಕವೂ ಒದಗಿಸುತ್ತದೆ.

ಈ ವರ್ಷ ಒಟ್ಟು 16,60,511 ವಿದ್ಯಾರ್ಥಿಗಳು ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದಿದ್ದರು. ಇದರಲ್ಲಿ 14,50,174 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದರೆ, ಶೇ.87.33ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ತಿರುವನಂತಪುರಂ ಶೇ.99.91ರಷ್ಟು ಉತ್ತೀರ್ಣತೆ
ಕಳೆದ ವರ್ಷ ಶೇ.92.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಈ ವರ್ಷ ಉತ್ತೀರ್ಣರಾದವರ ಪ್ರಮಾಣ ಕಡಿಮೆಯಾಗಿದೆ. ಕೇರಳದ ತಿರುವನಂತಪುರಂ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶದಲ್ಲಿ ಶೇ.99.91ರಷ್ಟು ಉತ್ತೀರ್ಣತೆಯೊಂದಿಗೆ ಅತ್ಯುತ್ತಮ ಪ್ರದೇಶವಾಗಿದ್ದರೆ, ಉತ್ತರಪ್ರದೇಶದ ಪ್ರಯಾಗ್‌ರಾಜ್ ಶೇ.78.05ರಷ್ಟು ಫಲಿತಾಂಶದೊಂದಿಗೆ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಸಿಬಿಎಸ್ಇ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪಡೆಯಲು ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಅಡ್ಮಿಟ್ ಕಾರ್ಡ್ ಐಡಿ ಬಳಸಿ ಪರಿಶೀಲಿಸಬಹುದು. ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಶೀಘ್ರದಲ್ಲಿಯೇ ಆ ಫಲಿತಾಂಶವೂ ಪ್ರಕಟವಾಗುವ ಸಾಧ್ಯತೆ ಇದೆ.
ಈ ವರ್ಷ ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ಪ್ರಕಟಿಸದಿರಲು ಸಿಬಿಎಸ್ಇ ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ತಡೆಗಟ್ಟಲು 12ನೇ ತರಗತಿಯ ಮೆರಿಟ್ ಪಟ್ಟಿಯನ್ನು ಸಿಬಿಎಸ್ಇ ಪ್ರಕಟಿಸಿಲ್ಲ.
ಸಿಬಿಎಸ್ಇ ಮೊದಲ, ಎರಡನೇ ಅಥವಾ ಮೂರನೇ ವಿಭಾಗಗಳನ್ನು ನೀಡಿಲ್ಲ. ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡುವುದಾಗಿ ಮಂಡಳಿ ತಿಳಿಸಿದೆ.
ಶೇ.90.68ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣ
ಇನ್ನು 2023ರ ಸಿಬಿಎಸ್ಇ 12ನೇ ತರಗತಿಯಲ್ಲಿ ಶೇ.90.68ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, ಶೇ.84.67ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇನ್ನು ತೃತೀಯ ಲಿಂಗಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ.60ರಷ್ಟಿದೆ.
ಜವಾಹರ್ ನವೋದಯ ವಿದ್ಯಾಲಯಗಳು ಶೇ.97.51ರಷ್ಟು ಉತ್ತೀರ್ಣರಾಗುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿದ ಶಾಲೆಗಳಾಗಿವೆ. ಒಟ್ಟು 1,12,838 ವಿದ್ಯಾರ್ಥಿಗಳು 2023ರ ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ.90 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.
ಇನ್ನು 10 ಮತ್ತು 12ನೇ ತರಗತಿಯ 2024ರ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು ಮುಂಬರುವ ಫೆಬ್ರವರಿ 15ರಂದು ಪ್ರಾರಂಭವಾಗಲಿದೆ ಎಂದು ಸಿಬಿಎಸ್ಇ ಮಾಹಿತಿ ನೀಡಿದೆ.












Click it and Unblock the Notifications