"ಮಕ್ಕಳನ್ನು CBSE ಶಾಲೆಗೆ ಸೇರಿಸಬೇಡಿ": ದೇಶದ ಶಿಕ್ಷಣ ವ್ಯವಸ್ಥೆ ಮೇಲಿನ ನಂಬಿಕೆ ಕಳೆದುಕೊಂಡೆ ಎಂದ 'ದಿ ಲಿವರ್ ಡಾಕ್'

ಸಿಬಿಎಸ್ಇ ಮಂಡಳಿಯ ಆನ್‌ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಸುತ್ತ ನಡೆಯುತ್ತಿರುವ ವಿವಾದದ ಬಗ್ಗೆ ಜನಪ್ರಿಯ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ದಿ ಲಿವರ್ ಡಾಕ್' ಎಂದೇ ಖ್ಯಾತರಾಗಿರುವ ಇವರು, ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ತಾನು ಕಳೆದುಕೊಂಡಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಡಾ. ಫಿಲಿಪ್ಸ್, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಸ್ಕ್ಯಾನ್ ಮಾಡಿದ ಪ್ರತಿಗಳ ಬಗ್ಗೆ ವಿದ್ಯಾರ್ಥಿಗಳು ಇತ್ತೀಚೆಗೆ ಎತ್ತಿರುವ ಕಳವಳಗಳು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ತಮ್ಮ ವಿಶ್ವಾಸವನ್ನು ಅಲುಗಾಡಿಸಿವೆ ಎಂದು ಹೇಳಿದ್ದಾರೆ. "ನಾನು ಕೂಡ ಇದರ ಬಗ್ಗೆ ಯೋಚಿಸುತ್ತಿದ್ದೇನೆ. ಮಕ್ಕಳನ್ನು ಸಿಬಿಎಸ್ಇ ಶಾಲೆಗಳಿಗೆ ಕಳುಹಿಸುವುದನ್ನು ನಿಲ್ಲಿಸಿ. ಭಾರತೀಯ ಶಾಲೆಗಳಲ್ಲಿ ಲಭ್ಯವಿರುವ ಐಬಿ ಅಥವಾ ಕೇಂಬ್ರಿಡ್ಜ್ ಪಠ್ಯಕ್ರಮದತ್ತ ಗಮನಹರಿಸಲು ಪ್ರಾರಂಭಿಸಿ" ಎಂದು ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ.

CBSE

ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಲು ಬಯಸುವ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಪಠ್ಯಕ್ರಮ ಮತ್ತು ಪರೀಕ್ಷೆಗಳಾದ UCAT ಮತ್ತು BMAT ಗಳ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಈ ಪರೀಕ್ಷೆಗಳು ನೆರವಾಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ. "ಈ ದೇಶದ ಹಾಗೂ ಮಿಥ್ಯಾ-ವಿಜ್ಞಾನ (pseudoscience) ತುಂಬಿರುವ ಶೈಕ್ಷಣಿಕ ವ್ಯವಸ್ಥೆಯ ಮೇಲಿನ ಸಂಪೂರ್ಣ ನಂಬಿಕೆಯನ್ನು ನಾನು ಕಳೆದುಕೊಂಡಿದ್ದೇನೆ" ಎಂದು ಬರೆದುಕೊಂಡಿರುವ ಅವರು, ವಿದೇಶಿ ಪಠ್ಯಕ್ರಮಕ್ಕೆ ಬದಲಾದ ಅನುಭವ ಇರುವವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದಾರೆ.

ಸಿಬಿಎಸ್ಇ ವಿದ್ಯಾರ್ಥಿಗಳ ಆರೋಪವೇನು?

ಈ ವರ್ಷ 12ನೇ ತರಗತಿ ಪರೀಕ್ಷೆಗಳಿಗೆ ಸಿಬಿಎಸ್ಇ ಮಂಡಳಿಯು ಭೌತಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬದಲು ಡಿಜಿಟಲ್ ಸ್ಕ್ರೀನ್ ಆಧಾರಿತ ಓಎಸ್ಎಂ ವ್ಯವಸ್ಥೆಯನ್ನು ಪರಿಚಯಿಸಿತ್ತು. ಆದರೆ, ಮೌಲ್ಯಮಾಪನದ ನಂತರ ತಮಗೆ ನೀಡಲಾದ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು 12ನೇ ತರಗತಿಯ ಹಲವು ವಿದ್ಯಾರ್ಥಿಗಳು ಆರೋಪಿಸಿದ ನಂತರ ಈ ವಿವಾದ ಭುಗಿಲೆದ್ದಿದೆ.

ಸಿಬಿಎಸ್ಇ ಮಂಡಳಿಯ ಸಮರ್ಥನೆ

ಈ ವ್ಯವಸ್ಥೆಯು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಅಂಕಗಳನ್ನು ಕೂಡುವಾಗ ಆಗುವ ತಪ್ಪುಗಳನ್ನು ಕಡಿಮೆ ಮಾಡುತ್ತದೆ ಎಂದು ಸಿಬಿಎಸ್ಇ ಸಮರ್ಥಿಸಿಕೊಂಡಿದೆ. ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿರುವ ಮಂಡಳಿ, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದಿದೆ. ಓಎಸ್ಎಂ ವ್ಯವಸ್ಥೆಯು "ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿದೆ" ಎಂದಿರುವ ಬೋರ್ಡ್, ವ್ಯವಸ್ಥೆಯಲ್ಲಿದ್ದ ಕೆಲವು ಲೋಪಗಳನ್ನು ಈಗಾಗಲೇ ಸರಿಪಡಿಸಲಾಗಿದೆ ಮತ್ತು ಇತರ ದೋಷಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶುರುವಾದ ಚರ್ಚೆ

ಡಾ. ಫಿಲಿಪ್ಸ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪರ್ಯಾಯ ಪಠ್ಯಕ್ರಮದ ಕೈಗೆಟಕುವಿಕೆ ಕುರಿತ ಬಿಸಿಬಿಸಿ ಚರ್ಚೆಗೆ ಹುಟ್ಟುಹಾಕಿದೆ. "ಭಾರತದಲ್ಲಿನ ಕೇವಲ ಸಣ್ಣ ಶೇಕಡಾವಾರು ಮಕ್ಕಳಿಗೆ ಮಾತ್ರ ನಿಮ್ಮ ಈ ಸಲಹೆ ಕೈಗೆಟಕುತ್ತದೆ. ಉಳ್ಳವರು ಈಗಾಗಲೇ ತಮ್ಮ ಮಕ್ಕಳನ್ನು ಐಬಿ ಮತ್ತು ಅಂತರಾಷ್ಟ್ರೀಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ದೇಶದಲ್ಲಿ ಸಂಪೂರ್ಣ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯ ಬದಲಾವಣೆ ಅಗತ್ಯವಿದೆ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಇದು ಖಂಡಿತವಾಗಿಯೂ ಸಂವೇದನಾಶೀಲ ಸಲಹೆ. ಆದರೆ ಬಹುಪಾಲು ಜನರಿಗೆ ಇವು ತುಂಬಾ ದುಬಾರಿ" ಎಂದು ಮತ್ತೊಬ್ಬರು ಹೇಳಿದ್ದಾರೆ. ಮೂರನೇ ಬಳಕೆದಾರರೊಬ್ಬರು, "ಚೆನ್ನೈನಲ್ಲಿ 5ನೇ ತರಗತಿಗೆ ಐಬಿ ಶಾಲೆಯ ಶುಲ್ಕ ವರ್ಷಕ್ಕೆ 6 ರಿಂದ 10 ಲಕ್ಷ ರೂಪಾಯಿಗಳಷ್ಟಿದೆ. ಹಾಗಾಗಿ, ವೈದ್ಯಕೀಯ ಪದವಿಯ ದುಬಾರಿ ಶುಲ್ಕವನ್ನು ಬದಿಗಿಟ್ಟರೂ, ಭಾರತದ ಬಹುತೇಕರಿಗೆ ಈ ಶಿಕ್ಷಣ ಕೇವಲ ಕನಸಾಗಿಯೇ ಉಳಿಯುತ್ತದೆ" ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+