Budget 2022; ಪಿಎಂ ಆವಾಸ್ ಯೋಜನೆಗೆ 48,000 ಕೋಟಿ ಅನುದಾನ
ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಭಾಷಣದಲ್ಲಿ ಎಲ್ಲರಿಗೂ ಸೂರು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗೆ ಸಚಿವರು ಆದ್ಯತೆ ನೀಡಿದ್ದಾರೆ.
ಬಜೆಟ್ ಭಾಷಣದಲ್ಲಿ ಸಚಿವರು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಘೋಷಣೆ ಮಾಡಿದದರು. 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 60,000 ಮನೆಗಳನ್ನು ಹಂಚಲು ಜನರನ್ನು ಗುರುತಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದರು.
2015ರಲ್ಲಿ ಕೇಂದ್ರ ಸರ್ಕಾರ ಎಲ್ಲರಿಗೂ ವಸತಿ ಘೋಷಣೆಯಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಆರಂಭಿಸಿತು. ಏರಿಕೆಯಾಗುತ್ತಿರುವ ರಿಯಲ್ ಎಸ್ಟೇಟ್ ದರಗಳ ನಡುವೆಯೂ ಎಲ್ಲರೂ ಮನೆ ಖರೀದಿ ಮಾಡುವಂತಾಗಲು ಭಾರತ ಸರ್ಕಾರ ಈ ಯೋಜನೆ ಆರಂಭಸಿತು. 2022ರ ಮಾರ್ಚ್ 31ರೊಳಗೆ ಎಲ್ಲರಿಗೂ ವಸತಿ ಒದಗಿಸುವುದು ಯೋಜನೆ ಉದ್ದೇಶ ವಾಗಿತ್ತು.
ದೇಶದಲ್ಲಿರುವ ಎಲ್ಲಾ ವಸತಿ ಹೀನರಿಗೆ ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಪಕ್ಕಾ ಮನೆಯನ್ನು ಒದಗಿಸಿಕೊಡಲು ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ/ ಗ್ರಾಮೀಣ) ಯೋಜನೆಯನ್ನು ರೂಪಿಸಿದೆ. ದೇಶದ ಎಲ್ಲ ನಗರ ಪ್ರದೇಶಗಳಲ್ಲಿ ಉದ್ದೆಶಿತ ಗುರಿ ಸಾಧನೆಗೆ ಈ ಯೋಜನೆ ನೆರವಾಗಲಿದೆ.
ಈ ಯೋಜನೆಯನ್ನು 2015ರ ಜೂನ್ 25 ರಂದು ಆರಂಭಿಸಲಾಯಿತು.ಯೋಜನೆಯನ್ನು29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳ 4,041 ನಗರ ಮತ್ತು ಪಟ್ಟಣಗಳಲ್ಲಿ ಜಾರಿಗೆ ತರಲಾಯಿತು. ಮೊದಲು ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೀಮಿತವಾಗಿತ್ತು. ನರೇಂದ್ರ ಮೋದಿ 2016ರಡಿಸೆಂಬರ್ 31ರಂದು ಯೋಜನೆಯನ್ನು ಮಧ್ಯಮ ಆದಾಯದ ಗುಂಪುಗಳಿಗೂ ವಿಸ್ತರಿಸುವ ಘೋಷಣೆ ಮಾಡಿದರು.
ಯೋಜನೆ ಅನ್ವಯ ವಾರ್ಷಿಕ ಆದಾಯ 3 ಲಕ್ಷ ರೂಪಾಯಿವರೆಗೆ ಇರುವವರನ್ನು ಆರ್ಥಿಕವಾಗಿ ಹಿಂದುಳಿದವರು ಹಾಗು ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂ. ಗಳ ವರೆಗೆ ಇರುವವರನ್ನು ಕಡಿಮೆಆದಾಯದ ಗುಂಪು ಮತ್ತು ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ ಗುಂಪು 1, ಮತ್ತು ವಾರ್ಷಿಕ ಆದಾಯ 12 ಲಕ್ಷದಿಂದ 18 ಲಕ್ಷದವರೆಗೆ ಇರುವ ಕುಟುಂಬಗಳನ್ನು ಮಧ್ಯಮ ವರ್ಗ2 ಎಂದು ವಿಂಗಡಿಸಿ ಅವರನ್ನು ಫಲಾನುಭವಿಗಳಾಗಿ ಈ ಯೋಜನೆ ಗುರುತಿಸಲಾಗುತ್ತದೆ.












Click it and Unblock the Notifications