ಬೆಂಗಳೂರಿನಲ್ಲಿ ಇಂದು ಮಳೆ ಸಾಧ್ಯತೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು, ಜುಲೈ 28: ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಸಾಯಂಕಾಲ ಬೆಂಗಳೂರಿನ ಹಲವೆಡೆ ಉತ್ತಮ ಮಳೆಯಾಗಿದ್ದು, ಗುರುವಾರ ಕೂಡ ಸಂಜೆ ವೇಳೆಗೆ ಮಳೆ ಬೀಳು ಸಾಧ್ಯತೆ ಇದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಗುರುವಾರ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಕಾರವಾರ, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಮೈಸೂರು, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತದ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಮಾನ್ಸೂನ್ ಮೋಡಗಳು ಉತ್ತರ ಭಾರತದ ಕಡೆ ಸಾಗಿರುವುದರಿಂದ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಭಾರತದಲ್ಲಿ ವ್ಯಾಪಕ ಮಳೆ ಸಾಧ್ಯತೆ
ಹರಿಯಾಣದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದೆಹಲಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಪಂಚಕುಲ, ಅಂಬಾಲ ಮತ್ತು ಯಮುನಾನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದೆಹಲಿ-ಎನ್‌ಸಿಆರ್‌ನಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಜುಲೈ 31 ರವರೆಗೆ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಜುಲೈ 30 ರವರೆಗೆ ಮಳೆಯಾಗಲಿದೆ. ಉತ್ತರ ಪಂಜಾಬ್, ಉತ್ತರ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಜುಲೈ 28 ಮತ್ತು 29 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಉತ್ತರಾಖಂಡದಲ್ಲಿ ಯೆಲ್ಲೋ ಅಲರ್ಟ್
ಉತ್ತರಾಖಂಡಲ್ಲಿ ಮುಂದಿನ 5 ದಿನಗಳ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಉತ್ತರಕಾಶಿ, ಬಾಗೇಶ್ವರ್, ನೈನಿತಾಲ್ ಡೆಹ್ರಾಡೂನ್, ಚಮೋಲಿ, ರುದ್ರಪ್ರಯಾಗ ಪಿಥೋರಗಢದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಭಾರಿ ಮಳೆಯಿಂದಾಗಿ ಈ ಜಿಲ್ಲೆಗಳ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದೆ.

ಮಧ್ಯಪ್ರದೇಶದ ಹಲವೆಡೆ ಭಾರಿ ಮಳೆ ಸಾಧ್ಯತೆ
ಜುಲೈ 29 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ, ಹಿಮಾಚಲ ಪ್ರದೇಶ ಮತ್ತು ಚಂಡೀಗಢದಲ್ಲಿ ಜುಲೈ 31 ರವರೆಗೆ ಗುಡುಗು, ಮಿಂಚುಗಳೊಂದಿಗೆ ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಕೂಡ ಭಾರಿ ಮಳೆಯಾಗಲಿದೆ.
ಮಧ್ಯಪ್ರದೇಶದ ಭೋಪಾಲ್, ಶಾಹದೋಲ್, ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶಗಳಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ದಿಂಡೋರಿ, ಬಾಲಘಾಟ್, ಮಂಡ್ಲಾ, ಸಿಯೋನಿ, ವಿದಿಶಾ, ರೈಸೆನ್, ಭಿಂಡ್, ಮೊರೆನಾ, ಶಿವಪುರಿ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ
ಈಗಾಗಲೇ ಭಾರಿ ಮಳೆಯಿಂದ ತತ್ತರಿಸಿರುವ ಹೈದರಾಬಾದ್‌ನಲ್ಲಿ ಗುರುವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಜುಲೈ 31 ರವರೆಗೆ ವ್ಯಾಪಕ ಮಳೆ ಸುರಿಯಲಿದೆ ಎಂದು ಅದು ಹೇಳಿದೆ.












Click it and Unblock the Notifications