ಟ್ರಾಫಿಕ್‌ನಲ್ಲಿ ಸಿಲುಕಿದ ಸಿಲಿಕಾನ್ ಸಿಟಿ: ಬೆಂಗಳೂರಿನಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳ ಸಂಖ್ಯೆ
ಬೆಂಗಳೂರು: ಜಗತ್ತಿನಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಎರಡನೇ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಾರುಗಳ ಸಂಖ್ಯೆ 25 ಲಕ್ಷದ ಗಡಿ ದಾಟಿದೆ. ಸಾರ್ವಜನಿಕ ಸಾರಿಗೆಯ ಕೊರತೆ ಹಾಗೂ ನಮ್ಮ ಮೆಟ್ರೋ ಕಾಮಗಾರಿಗಳ ವಿಳಂಬದಿಂದ ಸಿಲಿಕಾನ್ ಸಿಟಿ ಜನ ತಮ್ಮ ಪ್ರತಿ ದಿನದ ಓಡಾಟಕ್ಕೆ ಅನಿವಾರ್ಯವಾಗಿ ವೈಯಕ್ತಿಕ ವಾಹನಗಳ ಮೊರೆ ಹೋಗುತ್ತಿದ್ದಾರೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಉದಾಹರಣೆ.
ಬೆಂಗಳೂರಿನಲ್ಲಿ 25 ಲಕ್ಷ ಖಾಸಗಿ ಕಾರುಗಳ ನೋಂದಣಿ
ಸಾರಿಗೆ ಇಲಾಖೆ ಇತ್ತೀಚಿನ ಮಾಹಿತಿಯ ಪ್ರಕಾರ, 2026ರ ಜೂನ್ 30ರ ವೇಳೆಗೆ ಬೆಂಗಳೂರಿನಲ್ಲಿ 25.2 ಲಕ್ಷ ಖಾಸಗಿ ಕಾರುಗಳಿದ್ದವು. ಕೇವಲ ಜೂನ್ ತಿಂಗಳೊಂದರಲ್ಲೇ ನಗರದಲ್ಲಿ ಸುಮಾರು 78,084 ಹೊಸ ವಾಹನಗಳು ನೋಂದಣಿಯಾಗಿದ್ದು, ಇದರಲ್ಲಿ 13,519 ಹೊಸ ಕಾರುಗಳು ಸೇರಿವೆ. ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನ ನೋಡುವುದಾದರೆ, ಬೆಂಗಳೂರಿನಲ್ಲಿ ಸುಮಾರು ಐದು ಲಕ್ಷ ಹೊಸ ಖಾಸಗಿ ಕಾರುಗಳು ರಸ್ತೆಗಿಳಿದಿವೆ; ಅಂದರೆ ಪ್ರತಿ ವರ್ಷ ಸರಾಸರಿ ಒಂದು ಲಕ್ಷ ಹೊಸ ಕಾರುಗಳು ಸೇರ್ಪಡೆಯಾಗುತ್ತಿವೆ.

ಬೆಂಗಳೂರಿನಲ್ಲಿ ಇದೀಗ ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ತಲುಪಿದೆ. ಇದರಲ್ಲಿ ದ್ವಿಚಕ್ರ ವಾಹನಗಳೇ ದೊಡ್ಡ ಪಾಲು ಹೊಂದಿದ್ದು, ಬರೋಬ್ಬರಿ 87 ಲಕ್ಷ ದ್ವಿಚಕ್ರ ವಾಹನಗಳಿವೆ. ನಗರದಲ್ಲಿ ನೋಂದಣಿಯಾಗುವ ಪ್ರತಿ 10 ವಾಹನಗಳಲ್ಲಿ 7 ದ್ವಿಚಕ್ರ ವಾಹನಗಳಾಗಿವೆ.
ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.5 ಕೋಟಿ ವಾಹನಗಳಿದ್ದರೂ ಅಲ್ಲಿ ಮೆಟ್ರೋ ಜಾಲ ವಿಸ್ತಾರವಾಗಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಕೇವಲ 15 ಲಕ್ಷ ಖಾಸಗಿ ಕಾರುಗಳಿದ್ದು, ಅಲ್ಲಿನ ಜನತೆ ಲೋಕಲ್ ರೈಲುಗಳನ್ನು ಹೆಚ್ಚು ಅವಲಂಬಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಮತ್ತು ಮೆಟ್ರೋ ಕಾಮಗಾರಿ ವಿಳಂಬ
ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿಯ ಪ್ರಕಾರ, ಮೆಕ್ಸಿಕೋ ಸಿಟಿಯ ನಂತರ ಬೆಂಗಳೂರು ಜಗತ್ತಿನ ಎರಡನೇ ಅತಿ ಹೆಚ್ಚು ಟ್ರಾಫಿಕ್ ಇರುವ ನಗರ. ಇಲ್ಲಿ ಕೇವಲ 10 ಕಿಲೋಮೀಟರ್ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತದೆ. ಪೀಕ್ ಅವರ್‌ಗಳಲ್ಲಿ ವಾಹನ ಚಾಲಕರು ವರ್ಷಕ್ಕೆ ಸರಾಸರಿ 168 ಗಂಟೆಗಳನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಮೆಟ್ರೋ ಕಾಮಗಾರಿಗಳ ವಿಳಂಬ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ. ಮೆಟ್ರೋ 3ನೇ ಹಂತ ಮತ್ತು 3ಎ ಹಂತದ ಮಾರ್ಗಗಳಲ್ಲಿ ಸುರಂಗ ಹಾಗೂ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸುವ ನಿರ್ಧಾರಗಳಿಂದಾಗಿ ಯೋಜನೆ ವಿಳಂಬವಾಗುತ್ತಿದೆ.
ತಜ್ಞರ ಸಲಹೆ
ನಗರದ ಸಂಚಾರ ವ್ಯವಸ್ಥೆ ಕುರಿತು ಮಾತನಾಡಿರುವ ಅರ್ಬನ್ ಮೊಬಿಲಿಟಿ ತಜ್ಞ ಸತ್ಯ ಅರಿಕುತರಾಮ್, "ಕಳೆದ ನಾಲ್ಕು ವರ್ಷಗಳಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ದುರ್ಬಲವಾದಂತೆ ಜನರು ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಖರೀದಿಸುವುದು ಸಾಮಾನ್ಯ. 1.5 ಲಕ್ಷ ಕೋಟಿ ರೂ. ವೆಚ್ಚದ ಸುರಂಗ ರಸ್ತೆಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತವೆಯೇ ಹೊರತು ಶಾಶ್ವತ ಪರಿಹಾರ ನೀಡುವುದಿಲ್ಲ. ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವ ಮೂಲಕ ಹಾಗೂ ಪಾದಚಾರಿ ಮಾರ್ಗಗಳನ್ನು ಸುಧಾರಿಸುವ ಮೂಲಕ ಮಾತ್ರ ಟ್ರಾಫಿಕ್ ನಿಯಂತ್ರಿಸಲು ಸಾಧ್ಯ," ಎಂದಿದ್ದಾರೆ ಎಂದು ಡೆಕ್ಕನ್ ಹೆರಾರ್ಡ್ ವರದಿ ಮಾಡಿದೆ.
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಸದಸ್ಯ ವಿ. ರವಿಚಂದರ್ ಅವರ ಪ್ರಕಾರ, "ವೈಟ್‌ಫೀಲ್ಡ್ ಮತ್ತು ಸರ್ಜಾಪುರದಂತಹ ಹೊರವಲಯದ ಪ್ರದೇಶಗಳಲ್ಲಿ ಸೂಕ್ತ ರಸ್ತೆ ವಿನ್ಯಾಸ ಇಲ್ಲ. ಇಂತಹ ಪ್ರದೇಶಗಳಿಗೆ ಸುರಂಗ ರಸ್ತೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಜನರನ್ನು ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸಲು ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಬಸ್‌ಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಪ್ರಯಾಣ ದರವನ್ನು ಕೈಗೆಟಕುವಂತೆ ಇಡಬೇಕು ಮತ್ತು ರಸ್ತೆ ಬದಿಯ ಪಾರ್ಕಿಂಗ್‌ಗೆ ಕಡ್ಡಾಯವಾಗಿ ಶುಲ್ಕ ವಿಧಿಸಬೇಕು," ಎಂದು ಸಲಹೆ ನೀಡಿದ್ದಾರೆ.
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುರಂಗ ರಸ್ತೆಗಳು ಸೇರಿದಂತೆ 1.5 ಲಕ್ಷ ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಇವು ನಗರದ ಟ್ರಾಫಿಕ್ ಚಿತ್ರಣವನ್ನು ಹೇಗೆ ಬದಲಾಯಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications
